ರಾಜಯೋಗಿ ಪೂಜ್ಯ ಶಿವಬಸವ ಶಿವಯೋಗಿಗಳು, ಹುಕ್ಕೇರಿಮಠ, ಹಾವೇರಿ

ಮೂಲ ಲೇಖನ: ಲಿಂ. ಕುಮಾರ ಸ್ವಾಮಿಗಳು ಕಲ್ಮಠ, ಸವದತ್ತಿ - ಬಿದರಿ
ಮಾಹಿತಿ ಸಹಾಯ: ಪೂಜ್ಯ ಮ ನಿ ಪ್ರ ಸದಾಶಿವ ಮಹಾಸ್ವಾಮಿಗಳು, ಹುಕ್ಕೇರಿಮಠ, ಹಾವೇರಿ
ನಮ್ಮೀ ಭಾರತಭೂಮಿಯಲ್ಲಿ ಅನೇಕ ಸಾಧು-ಸತ್ಪುರುಷರು, ಮಹಾಯೋಗಿಗಳು ಜನಿಸಿ ಜನಜೀವನವನ್ನು ಪಾವನಗೊಳಿಸಿರುವುದು ಸರ್ವವೇದ್ಯವಾದ ವಿಷಯ ಕನ್ನಡನಾಡಂತೂ ಶತಶತಮಾನಗಳಿದ ಬಹುಜನ ಯೋಗಿಗಳಿಗೆ, ತ್ಯಾಗಿಗಳಿಗೆ, ವೀರರಿಗೆ ಕಲೆಗಾರರಿಗೆ ತವರುಮನೆಯಾಗಿದೆ. ಅವರೆಲ್ಲರು ಕಾಲಕಾಲಕ್ಕೆ ಅವತರಿಸಿ ಜನಮನದ ಮಾಲಿನ್ಯವನ್ನು ಕಳೆದು ಹೊಸ ಕಳೆಯನ್ನು ಶಿವಮಯ ಚೈತನ್ಯವನ್ನು ತುಂಬಿದ ಮಹಾಕಾರ್ಯವೆಸಗಿದ್ದಾರೆ ಅಂತಹರಲ್ಲಿ ಬಸವಾದಿ ಪ್ರಮಥರು ಚಿರಸ್ಮರಣೀಯರು, ಹನ್ನೆರಡನೆಯ ಶತಮಾನದಲ್ಲಿ ಬಸವ, ಚೆನ್ನಬಸವ, ಪ್ರಭುದೇವ, ಅಕ್ಕಮಹಾದೇವ, ಸಿದ್ದರಾಮ ಮೊದಲಾದ ಜಗದ್ವಿಭೂತಿಗಳು ಉದಯಿಸಿ ಜನತೆಗೆ ವಚನಾಮೃತ ಸವಿಯನುಣಿಸಿದರು, ಜಗವನುದ್ಧರಿಸಿದರು. ಹದಿನಾಲ್ಕನೆಯ ಶತನಮಾನದಲ್ಲಿ ನೂರೊಂದು ವಿರಕ್ತರು ಧಮರ್ಜಾಗೃತಿಯನ್ನುಂಟು ಮಾಡಿದರು. ಹದಿನಾರನೆಯ ಶತಮಾನದಲ್ಲಿ ಎಡೆಯರೂ ಶ್ರೀ ತೋಂಟದ ಸಿದ್ದಲಿಂಗಯತಿವರೇಣ್ಯರು ಅವರ ಶಿಷ್ಯಕೋಟಿಯೂ ಅನೇಕ ಬಗೆಯಾಗಿ ಧರ್ಮ-ಸಾಹಿತ್ಯಗಳನ್ನು ಬೆಳಗಿಸಿದ ಮಹತ್ಕಾರ್ಯ ಮಾಡಿದ್ದಾರೆ.
ಇಪ್ಪತ್ತನೆಯ ಶತಮಾನದಲ್ಲಿಯೂ ಬಿದರಿಯ ಶ್ರೀ ಕುಮಾರ ಶಿವಯೋಗಿಗಳು, ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು, ಬಿಳೂರ ಶ್ರೀಗುರುಬಸವ ಮಹಾಸ್ವಾಮಿಗಳು ಮೊದಲಾದ ಪೂಜ್ಯರು ತಮ್ಮ ತಪಃಸಾಮರ್ಥ್ಯದಿಂದ ಅನೇಕ ಬಗೆಯ ಲೋಕಹಿತದ ಮಹಾಕಾರ್ಯಗಳನ್ನು ಮಾಡಿರುವರು, ಸೊಲ್ಲಾಪೂರದ ಶ್ರೀ ವೀರೇಶ್ವರ ಶಿವಶರಣರೂ, ಸಿರಸಂಗಿಯ ಶ್ರೀ ಲಿಂಗರಾಜರಂಥ ಉದಾರಿ ದಾನಿಗಳೂ ಆಗಿ ಹೋಗಿದ್ದಾರೆ.
ಪೂಜ್ಯ ಶಿವಯೋಗಿಗಳ ಮಾಲಿಕೆಯಲ್ಲಿ ಹಾವೇರಿಯ ಹುಕ್ಕೇರಿ ಮಠದ ಲಿಂ ಶ್ರೀ ಶಿವಬಸವ ಮಹಾಸ್ವಾಮಿಗಳವರು ತಪೋನಿಷ್ಠರೂ, ವೈರಾಗ್ಯಸಂಪನ್ನರೂ ಕರುಣಾಳುಗಳೂ ಆಗಿದ್ದು ಜಗದ್ವಂದ್ಯರಾಗಿದ್ದಾರೆ. ಅವರು ಶಿವಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಹಾಶಿವಯೋಗಿಗಳಾದರು. ಅಷ್ಟೆ ಅಲ್ಲದೆ, ಶಿವಯೋಗದ ರಹಸ್ಯವನ್ನು ಸಾಧಕರಿಗೆ ಅರುಹಲು ಶಿವಯೋಗಮಂದಿರದಂಥ ಅಧ್ಯಾತ್ಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಆ ಮಹಾಸಂಸ್ಥೆಯ ಅಂಗವಾಗಿ ಉದಯಿಸಿದ ಅನೇಕ ಶಾಖಾಮಂದಿರಗಳು ಹಾವೇರಿ ಶ್ರೀಗಳವರ ತಪಃ ಸಾಮರ್ಥ್ಯದ ಹೆಗ್ಗುರುತಾಗಿವೆ ಅವರಲ್ಲಿದ್ದ ಸಮಾಜ ಕಲ್ಯಾಣ ಭಾವನೆ, ಅದಕ್ಕಾಗಿ ಅವರು ತೋರಿದ ವಿರತಿ, ವ್ಯಕ್ತಿಯ ಉದ್ಧಾರಕ್ಕಾಗಿಯೇ ಇದ್ದ ಅವರ ಕೃಪಾಬಲ, ಭಕ್ತವೃಂದದ ಮೇಲೆ ಅವರಿಟ್ಟ ಪ್ರೀತಿ ಮೊದಲಾದವು ಚಿರಸ್ಮರಣೀಯವಾದವು.
ಜನನ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಸಪ್ತಸಾಗರವೆಂಬ ಗ್ರಾಮ, ಅಲ್ಲಿಯ ಹಿರಿಯಮಠದ ಶಿವಗಂಗಮ್ಮ ಗಿರಿಮಲ್ಲಯ್ಯನವರೆಂಬ ಮಾಹೇಶ್ವರ ದಂಪತಿಗಳ ಪವಿತ್ರ ಉದರಾಂಬುಧಿಯಲ್ಲಿ ‘ಶಿವಬಸವ’ ಎಂಬ ಶಿಶುರತ್ನ ಕ್ರಿ ಶ 1857 ಆನಂದನಾಮ ಸಂವತ್ಸರ ಮಾಘ ಬ ೧4 ಶುಕ್ರವಾರ ಶಿವರಾತ್ರಿಯಂದು ಅಶ್ವಿನೀ ನಕ್ಷತ್ರ ಬೆಳಗುಜಾವದ ೪ ಘಂಟೆಗೆ ಉದಯಿಸಿತು. ಶಿವಪೂಜಾ ಪ್ರೇಮಿ ಶಿವಗಂಗವ್ವ ತಾಯಿಗೆ ಮೊದಲೇ ತಪಸ್ವಿ ಶಿವಯೋಗಿಯೊಬ್ಬರು ಜನಿಸುವ ಶಿಶು ಸಾಮಾನ್ಯ ಮಾನವನಾಗದೆ ‘ಪರಮವಿರಾಗಿ ಲೋಕೋದ್ಧಾರಿ ಶಿವಯೋಗಿ’ ಎಂದು ಭವಿಷ್ಯ ನುಡಿದಿದ್ದರಂತೆ ಮಹಾತಾಯಿ ಈ ಲೋಕೋತ್ತರ ಶಿಶುವನ್ನು ಹೆಚ್ಚಿನ ಮಮತೆ ಮತ್ತು ಭಕ್ತಿಯಿಂದ ಸಲುಹಿದಳು ಶಿವಬಸವೇಶನ ಬಾಲಲೀಲೆಗಳನ್ನು ಕಂಡು ಸಪ್ತಸಾಗರದ ಸಮಸ್ತ ಜನರೂ ಅಚ್ಚರಿ ಪಡುತ್ತಿದ್ದರು.

ಚಿತ್ರ ಸಂಖ್ಯೆ ೧: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಜನ್ಮ ಸ್ಥಳ ಒಳ ಭಾಗ

ಚಿತ್ರ ಸಂಖ್ಯೆ ೨: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಜನ್ಮ ಸ್ಥಳ ಹೊರ ಭಾಗ
ಬಾಲ್ಯ
ಐದು ವರ್ಷದ ಶಿವಬಸವೇಶನು ಕನ್ನಡ ಓದುಮಠದಲ್ಲಿ ಪ್ರವೇಶ ಪಡೆದನು ಬಾಲಕ ಶಿವಬಸವೇಶನ ಬುದ್ಧಿ ಜ್ಞಾಪಕಶಕ್ತಿಯನ್ನು ಗುರುಗಳು ಕಂಡು ಮೆಚ್ಚಿದರು ಉಳಿದ ಬಾಲಕರಂತೆ ಅವನಿಗೆ ಸಲ್ಲದ ಆಟನೋಟಗಳಲ್ಲಿ ಆಸಕ್ತಿಯಿರಲಿಲ್ಲ ಓದಿನಲ್ಲಿ ಮುಂದುವರಿದಂತೆ ಶಿವಬಸವೇಶನು ಶಾರೀರಿಕ ಚಟುವಟಿಕೆಗಳಲ್ಲಿಯೂ ಮೇಲಾಗಿದ್ದನು ಸುಂದರವಾದ ಮೈಕಟ್ಟು ಗಟ್ಟಿಮುಟ್ಟಾದ ಆಳು, ಕುಸ್ತಿಯಾಡುವುದೆಂದರೆ ಶಿವಬಸವೇಶನಿಗೆ ಬಲು ಹಿಗ್ಗು ತನಗಿಂತಲೂ ಮಿಗಿಲಾದ ಹುಡುಗರನ್ನು ಸ್ಪರ್ಧೆಯಲ್ಲಿ ಸೋಲಿಸದೆ ಬಿಡುತ್ತಿರಲಿಲ್ಲ ಎಲ್ಲ ಸರಿಕರಲ್ಲಿ ಪ್ರಿತಿಯಿಂದ ವರ್ತಿಸುವುದು ಶಿವಬಸವೇಶನ ಗುರುಗಳಿಗೆ ಬಹಳ ಸಂತೋಷವನ್ನುಂಟು ಮಾಡಿತ್ತು ವಿದ್ಯೆ, ಬುದ್ದಿ ಸದ್ಗುಣಗಳಿಂದ ಶೋಭಿಸುವ ಮಗುವನ್ನು ಕಂಡು ತಂದೆತಾಯಿಗಳಿಗೆ ಸಂತೋಷವಾಯಿತು, ಗ್ರಾಮಸ್ಥರಿಗೆ ಹೆಮ್ಮೆಯೆನಿಸಿತು, ಶಿವಬಸವೇಶ ಎಲ್ಲರ ಕಣ್ಮಣಿಯಾಗಿದ್ದ .
ಶಿಕ್ಷಣ
ಶಿವಬಸವೇಶ ಕುಲಕೋಟಿಯನ್ನು ಉದ್ಧಿರಿಸಲು ಅವತರಿಸಿದ ಮಹಾಪುರುಷನೆಂದು ಭಕ್ತರೆಲ್ಲ ಬಗೆದಿದ್ದರು ಬಾಲ್ಯದಲ್ಲಿಯೇ ಅವನ ವಿಲಕ್ಷಣ ಲೀಲೆಗಳನ್ನು ಕಂಡು ಜನ ಅವನನ್ನು ಸಾಮಾನ್ಯ ಬಾಲಕನೆಂದು ಎಣಿಸಿರಲಿಲ್ಲ. ಒಂದು ದಿನ ಪರಮ ಶಿವಯೋಗಿಗಳಾದ ಅಥಣಿಯ ಶೆಟ್ಟರಮಠದ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳವರು ಸಪ್ತಸಾಗರಕ್ಕೆ ದಯಮಾಡಿಸಿದರು, ಹಿರಿಯಮಠದಲ್ಲಿ ಶಿವಲಿಂಗಾರ್ಚನೆಗೆ ಗಿರಿಮಲ್ಲಯ್ಯನವರು ಎಲ್ಲವನ್ನು ಅಣಿ ಮಾಡಿದ್ದರು, ಅರ್ಚನೆ-ಅರ್ಪಣ-ಅನು ಭಾವಗಳನ್ನು ಮುಗಿಸಿ ಭಕ್ತರ ಕ್ಷೇಮವನ್ನು ವಿಚಾರಿಸುತ್ತಿರುವಾಗ ಮುಗ್ಧ ಬಾಲಕ ಶಿವಬಸವೇಶನ ಮೇಲೆ ಪೂಜ್ಯರ ದೃಷ್ಟಿಹರಿಯಿತು ಅವನ ಮುದ್ದಾದ ಮಾತುಗಳು, ವಿನೀತ ನಡೆ ಶ್ರೀಗಳವರ ಮನವನ್ನು ಸೆಳೆದವು ಆ ಬಾಲಕನಲ್ಲಿ ಶಿವಯೋಗಿಯಾಗುವ ಲಕ್ಷಣಗಳನ್ನು ದಿವ್ಯದೃಷ್ಟಿಯಿಂದ ತಿಳಿದ ಶ್ರೀಗಳವರು ಭಕ್ತರನ್ನು ತಂದೆ-ತಾಯಿಗಳನ್ನು ಒಪ್ಪಿಸಿ ಶಿವಬಸವೇಶನನ್ನು ಕರೆದುಕೊಂಡು ಅಥಣಿಗೆ ದಯಮಾಡಿಸಿದರು.

ಚಿತ್ರ ಸಂಖ್ಯೆ ೩: ಅಥಣಿಯ ಶೆಟ್ಟರಮಠದ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳವರ ಗದ್ದುಗೆ

ಚಿತ್ರ ಸಂಖ್ಯೆ ೪: ಅಥಣಿಯ ಶೆಟ್ಟರಮಠದ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳವರು
ಶ್ರೀ ಮರುಳಸಿದ್ದ ಶಿವಯೋಗಿಗಳೇ ಶಿವಬಸವೇಶನ ತಂದೆ-ತಾಯಿಯಾದರು, ಶಿವಬಸವೇಶನು ಗುರುವಿನ ಕೃಪಾಶ್ರಯದಲ್ಲಿ ಬೆಳೆಯಹತ್ತಿದ, ಗುರುಕುವರ ಶಿವಬಸವೇಶ ಕನ್ನಡ ಪ್ರಾಥಮಿಕ ಶಿಕ್ಷಣ ಪಡೆಯಹತ್ತಿದ, ಹತ್ತನೆಯ ವರ್ಷದಲ್ಲಿ ಶ್ರೀಗಳವರು ಅಡಹಳ್ಳಿಯ ಹಿರಿಯಮಠದ ಗುರುಗಳಿಂದ ವಿಧಿಪ್ರಕಾರ ಲಿಂಗದೀಕ್ಷೆಯನ್ನು ಕೊಡಿಸಿದರು, ಬಿಳಿಯ ಟೊಪ್ಪಿಗೆ ಕಪನಿಗಳನ್ನು ಧರಿಸಿ ಶಿವಬಸವಾರ್ಯ ಗುರುವಿಗೆ ತಕ್ಕ ಶಿಷ್ಯನಾಗುವ ರೀತಿ-ನೀತಿಗಳನ್ನು ಕಲಿಯಹತ್ತಿದ, ತಪ್ಪದೆ ಶುಚಿಯಾಗಿ ಲಿಂಗಪೂಜೆಯನ್ನು ಮಾಡಿಕೊಳ್ಳುವುದು, ವಿನಯದಿಂದ ವರ್ತಿಸುವುದು, ಜೀವಿಗಳಲ್ಲಿ ದಯೆ ತೋರುವುದು, ಸತ್ಯ-ಕ್ಷಮೆ ದಯೆಗುಣಗಳನ್ನು ಒಂದೊಂದನ್ನಾಗಿಯೇ ಗುರೂಪದಿಷ್ಟ ರೀತಿಯಲ್ಲಿ ಸಾಧಿಸುವುದು ಹೀಗೆ ಶಿವಬಸವಾರ್ಯನ ಸಾಧನೆಯ ಮಾರ್ಗವಾಯಿತು.
ಶಿವಬಸವಾರ್ಯರಿಗೆ ದೈವದತ್ತವಾದ ಮಂಜುಳ ಕಂಠವಿತ್ತು, ಶಿವಪೂಜೆಯ ಕಾಲದಲ್ಲಿ, ಪ್ರತಿನಿತ್ಯ ಮುಂಜಾನೆ ಏಳುವಾಗಲೂ ಮಲಗುವಾಗಲೂ ಮಂಜುಳವಾಗಿ ನಿಜಗುಣ-ಸರ್ಪಭೂಷಣ-ಘನಮಠಾರ್ಯರ ಅನುಭವದ ಪದಗಳನ್ನು ಹಾಡುವುದು ಶಿವಬಸವಾರ್ಯರ ನಿಯಮವಾಗಿತ್ತು, ಮಠದಲ್ಲಿ ಇನ್ನು ಅನೇಕ ಶಿಷ್ಯರು, ವಟುಗಳು ಇದ್ದರು ಅವರೆಲ್ಲರಲ್ಲಿ ಶಿವಬಸವಾರ್ಯರು ಹಿರಿಯ ಮಣಿಯಂತೆ ಬೆಳಗುತ್ತಿದ್ದರು ಶ್ರೀಗಳವರ ನೆಚ್ಚಿನ ಗುರುಕರಜಾತರಾಗಿದ್ದರು.
ಶ್ರೀಗಳವರ ಅಪ್ಪಣೆಯಂತೆ ಶಿವಬಸವದೇವರು ಕೆಲವು ವರ್ಷ, ಮಿರಜಿಯಲ್ಲಿದ್ದು ಸಂಗೀತಶಾಸ್ತ್ರವನ್ನು ಕಲಿತರು ಪ್ರೌಢವಿದ್ಯೆಯ ವ್ಯಾಸಂಗಕ್ಕಾಗಿ ಬಳ್ಳಾರಿಯಲ್ಲಿಯ ಸಕ್ಕರಿ ಕರಡೆಪ್ಪ ಮಹಾಶಿವಶರಣರ ಸಂಸ್ಕೃತ ಪಾಠಶಾಲೆಗೆ ಬಂದರು, ಅಲ್ಲಿ ಕನ್ನಡ-ಸಂಸ್ಕೃತ ಕಾವ್ಯಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ 1900ರಲ್ಲಿ ಸಂಸ್ಕೃತದಲ್ಲಿ ಹೆಚ್ಚಿನ ವಿದ್ವತ್ತನ್ನು ಸಂಪಾದಿಸಲು ಕಾಶಿಗೆ ದಯಮಾಡಿಸದರು, ಭಕ್ತರು ತಮಗೆ ಕಳಿಸುತ್ತಿದ್ದ ಹಣದಲ್ಲಿ ಮಿತವಾಗಿ ಇದ್ದು, ಉಳಿದುದನ್ನು ಬಡವಿದ್ಯಾರ್ಥಿಗಳಿಗೆ ಕೊಟ್ಟು ಶಿವಬಸವದೇವರು ಕಾಶಿಯಲ್ಲಿ ಆದರ್ಶ ‘ಶಾಸ್ತ್ರಿ’ಗಳೆಂದು (ಕನ್ನಡ ನಾಡಿನಿಂದ ಕಾಶಿಗೆ ಸಂಸ್ಕೃತ ಶಾಸ್ತ್ರಾಭ್ಯಾಸ ಮಾಡಲು ಹೋದ ಮಠಾಧಿಪತಿ ವಿದ್ಯಾರ್ಥಿಗಳನ್ನು ಅಲ್ಲಿಯ ಜನರ ‘ಶಾಸ್ತ್ರಿ’ಗಳೆಂದು ಕರೆಯುವುದು ವಾಡಿಕೆ) ಹೆಸರಾಗಿದ್ದರು. ಶ್ರೀ ಶಿವಬಸವದೇವರು ಆರು ವರ್ಷಗಳವರೆಗೆ ಕಾಶಿಯಲ್ಲಿದ್ದು ವ್ಯಾಕರಣ ಅಲಂಕಾರ ಶಾಸ್ತ್ರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ದೇಶಕ್ಕೆ ಮರಳಿದರು

ಚಿತ್ರ ಸಂಖ್ಯೆ ೫: ಬಳ್ಳಾರಿಯಲ್ಲಿಯ ಸಕ್ಕರಿ ಕರಡೆಪ್ಪ ಮಹಾಶಿವಶರಣರು ಮತ್ತು ಸಂಸ್ಕೃತ ಪಾಠಶಾಲೆ

ಚಿತ್ರ ಸಂಖ್ಯೆ ೬: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಕಾಶಿ ವಿದ್ಯಾ ಕೇಂದ್ರ ಕಾಶಿ ಜಂಗಮವಾಡಿ ಮಠ
ಶ್ರೀಮರುಳಸಿದ್ದ ಶಿವಯೋಗಿಗಳು ತಮ್ಮ ನೆಚ್ಚಿನ ಶಿಷ್ಯನ ಬರುವನ್ನೆ ನಿರೀಕ್ಷಿಸಿದ್ದರು, ಅವರಿಗೆ ಆಗಲೆ ಮುಪ್ಪು ಆವರಿಸಿತ್ತು, ಶಾರೀರಿಕ ಬಲ ಉಡುಗಿತ್ತು, ಆಗ ಅವರ ಅನುಗ್ರಹವನ್ನು ಪಡೆದ ಬಿದರಿಯ ಶ್ರೀ ಕುಮಾರ ಮಹಾಸ್ವಾಮಿಗಳವರು ಅಥಣಿಗೆ ದಯಮಾಡಿಸಿದರು. ಗುರುವರ್ಯರ ಅನುಜ್ಞೆಯಂತೆ ಶಿವಬಸವ ದೇವರಿಗೆ ಅನುಗ್ರಹ-ಅಧಿಕಾರಗಳನ್ನು ಕೊಡುವ ಹೊಣೆಯನ್ನು ಹೊತ್ತರು. ಶ್ರೀ ಮರುಳಸಿದ್ಧ ಶಿವಯೋಗಿಗಳು ಲಿಂಗೈಕ್ಯವಾದರು ಗುರುವಿನ ಕೃಪೆಗೆ ಪಾತ್ರರಾದ ಉಭಯ ಗುರುಕರಜಾತರೂ ಬಹುವಾಗಿ ಪರಿತಪಿಸಿದರು.
ಗುರುವಿನ ಉಪದೇಶವನ್ನು ನೆನೆದು ಮುಂದಿನ ಸಾಧನೆಗೆ ಸನ್ನಧ್ಧರಾದರು ಬಿದರಿ ಶ್ರೀಗಳವರು ಬಹುವಾಗಿ ಸಂತಯಿಸಿ ಶಿವಬಸವದೇವರ ದು:ಖವನ್ನು ಕಳೆದರು ಕೆಲವು ಕಾಲ ಅಥಿಣಿಯಲ್ಲಿಯೇ ವಾಸವಾಗಿದ್ದರು ನಂತರ ಶಿವಬಸವ ದೇವರು ಬಿದರಿ ಶ್ರೀಗಳವರ ಸೇವೆಯಲ್ಲಿಯೇ ನಿಂತರು ಗುರುವಿನ ಸೇವೆಯನ್ನು ಮನಮುಟ್ಟಿ ಮಾಡುತ್ತ ಬಿಡುವಿನ ವೇಳೆಯಲ್ಲಿ ಲಿಂಗಾಯತ ಸಿದ್ದಾಂತ ಮತ್ತು ಶಿವಾನುಭವಶಾಸ್ತ್ರವನ್ನು ಗುರುಮುಖವಾಗಿ ತಿಳಿದು ಆಚರಿಸಹತ್ತಿದರು.

ಚಿತ್ರ ಸಂಖ್ಯೆ ೭: ಪೂಜ್ಯಶ್ರೀ ಕುಮಾರ ಮಹಾಸ್ವಾಮಿಗಳು ಬಿದರಿ

ಚಿತ್ರ ಸಂಖ್ಯೆ ೮: ಶ್ರೀ ಕಲ್ಮಠ ಬಿದರಿ ಸವದತ್ತಿ ೧೯೦೩ ರಲ್ಲಿ ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳು ಶ್ರೀ ಬಸವ ಪುರಾಣ ಪ್ರವಚನ ಮಾಡಿದ ಸ್ಥಳ
ಬಿದರಿ ಶ್ರೀ ಕುಮಾರ ಮಹಾಸ್ವಾಮಿಗಳು ಸವದತ್ತಿ ಗ್ರಾಮದ ತಮ್ಮ ಮಠದಲ್ಲಿ ಭೀಮಕವಿಯ ಬಸವಪುರಾಣ ವನ್ನು ಪ್ರಾರಂಭಿಸಬೇಕೆಂದು ವಿಚಾರ ಮಾಡಿದರು ಅದಕ್ಕೆ ಭಕ್ತರೆಲ್ಲ ಒಪ್ಪಿದರು ಶ್ರೀಮಠದಲ್ಲಿ ವಿಶಾಲವಾದ ಮಂಟಪವನ್ನು ನಿರ್ಮಿಸಿದರು ಪುರಾಣವನ್ನು ಶ್ರೀ ಶಿವಬಸವದೇವರೇ ಹೇಳಬೇಕೆಂದು ಶ್ರೀಗಳವರ ಅಪ್ಪಣೆಯಾಗಿತ್ತು ಕಾರ್ತಿಕ ಮಾಸದ ಶುದ್ಧ ಪ್ರತಿಪದೆಯಿಂದ ಪುರಾಣವು ಪ್ರಾರಂಭವಾಗಿ ಅಖಂಡ ಆರು ತಿಂಗಳು ನಡೆಯಿತು ಶ್ರೀ ಶಿವಬಸವದೇವರ ಸಂಸ್ಕೃತ –ಕನ್ನಡ ಸಾಹಿತ್ಯಗಳ ಆಳವಾದ ಅಭ್ಯಾಸ, ಲಿಂಗಾಯತ ಸಿದ್ಧಾಂತಗಳ ಮನನ, ಸಂಗೀತದ ಮೇಳ ಎಲ್ಲವೂ ಅವರ ಪುರಾಣ ಹೇಳುವ ಕಲೆಗೆ ಬಹು ಮೆರಗನ್ನು ತಂದುಕೊಟ್ಟಿದ್ದವು ಭಕ್ತರ ಆನಂದಕ್ಕೆ ಮೇರೆ ಇರಲಿಲ್ಲ.

ಚಿತ್ರ ಸಂಖ್ಯೆ ೯: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಪ್ರವಚನದ ಚಿತ್ರ
ಶ್ರೀಗಳವರೂ ಪುರಾಣ ಸಮಾಪ್ತಿಯ ಕಾಲಕ್ಕೆ ಶಿವಬಸವದೇರಿಗೆ ಅನುಗ್ರಗವನ್ನು ಮಾಡಿ ನಿರಂಜನ ಚರಪಟ್ಟಾಧಿಕಾರವನ್ನು ಕೊಟ್ಟು ಲಿಂಗಾಗ ಸಾಮರಸ್ಯ ರಹಸ್ಯವನ್ನು ಸಕೀಲವಾಗಿ ಅರುಹಿದರು ಶ್ರೀ ಶಿವಬಸವದೇವರು ಗುರುದೇವನ ಕರುಣೆಯಿಂದ ಗುರುಸ್ವರೂಪವೇ ಆದರು, ನಿರಂಜನ ಪ್ರಣವಸ್ವರೂಪಿಗಳಾದರು – ಶ್ರೀ ಶಿವಬಸವ ಸ್ವಾಮಿಗಳೆಂದು ಸಂಪೂಜ್ಯರಾದರು ಯೋಗ್ಯ ಗುರುಗಳಿಗೆ ಯೋಗ್ಯಶಿಷ್ಯರು, ಕುಂದಣಕ್ಕೆ ಸುಗಂಧವಿಟ್ಟಂತೆ ಅಪೂರ್ವ ಕಳೆ ಬಂದಿತು.
ಶ್ರೀ ಶಿವಬಸವ ಸ್ವಾಮಿಗಳವರ ವೀರ ವಿರತಿ, ಶಿವಲಿಂಗ ಪೂಜಾನುರಕ್ತಿ, ಭಕ್ತನುಗ್ರಹಶಕ್ತಿ ಮೊದಲಾದ ಸಾತ್ವಿಕ ಗುಣಗಳನ್ನು ಕಂಡು ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಮೆಚ್ಚಿದರು, ತಮ್ಮ ಗುರುಗಳಿಗೆ ಯೋಗ್ಯತಾ ಸಂಪನ್ನರಾದ ಉತ್ತಮ ಶಿಷ್ಯರೆಂದು ಬಗೆದು ಶ್ರೀ ಶಿವಬಸವ ಸ್ವಾಮಿಗಳವರನ್ನು ಪೂಜ್ಯ ಗುರುಗಳ ಅಪ್ಪಣೆ ಪಡೆದು ಹಾನಗಲ್ಲ ಪ್ರಾಂತಕ್ಕೆ ಕರೆದುಕೊಂಡು ಬಂದರು ಶ್ರೀ ಶಿವಬಸವ ಮಹಾಸ್ವಾಮಿಗಳವರ ಉಫದೇಶಾಮೃತವನ್ನು ಸವಿದು ಭಕ್ತರು ಸಂತಸಗೊಂಡರು.
ಹಾವೇರಿಯಲ್ಲಿ ಹುಕ್ಕೇರಿ ವಿರಕ್ತಮಠವು ಬಹುಪ್ರಸಿದ್ಧವಾದ ವಿರಕ್ತಪೀಠ, ಅದಕ್ಕೆ ಬಹುವರ್ಷಗಳಿಂದ ಯೋಗ್ಯ ಅಧಿಕಾರಿಗಳಿರಲಿಲ್ಲ. ಶ್ರೀಮಠದ ಭಕ್ತರು ಬಹಳ ಚಿಂತೆಯಲ್ಲಿದ್ದರು. ಶ್ರೀಗಳವರ ಸಾತ್ವಿಕವೃತ್ತಿ ಮತ್ತು ಲಿಂಗಪೂಜಾನಿಷ್ಠೆಯ ಕೀರ್ತಿವಾರ್ತೆಯನ್ನು ಕೇಳಿದ ಹಾವೇರಿಯ ಸದ್ಭಕ್ತರೆಲ್ಲ ಹಾನಗಲ್ಲ ಶ್ರೀಗಳವರಲ್ಲಿ ವಿನಯದಿಂದ ಬಿನ್ನಯಿಸಿಕೊಂಡರು. ಭಕ್ತರ ಆಗ್ರಹಕ್ಕೆ ಮೆಚ್ಚಿ ಹಾನಗಲ್ಲ ಶ್ರೀಗಳವರು ಯಕ್ಕುಂಡಿಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳವರನ್ನು ಕರೆಯಿಸಿ ಅವರ ಸನ್ನಿಧಿಯಲ್ಲಿ ಹಾವೇರಿ ಹುಕ್ಕೇರಿಮಠದ ನಿರಂಜನ ಚರಪಟ್ಟಾಧಿಕಾರ ಮಹೋತ್ಸವವನ್ನು 1905ರಲ್ಲಿ ಬಹು ವಿಜೃಂಭಣೆಯಿಂದ ನೆರವೇರಿಸದರು.
ಧರ್ಮೋತ್ತೇಜಕ ಸಭೆಯನ್ನು ಈ ಪ್ರಸಂಗದಲ್ಲಿ ಏರ್ಪಡಿಸಿ ಅದರ ಮುಖಾಂತರ ನೀತಿ ಮತ್ತು ಧರ್ಮಗಳ ಉಪದೇಶವು ಭಕ್ತರಿಗೆ ದೊರಕುವಂತೆ ಮಾಡಿದರು ಶ್ರೀ ಶಿವಬಸವ ಸ್ವಾಮಿಗಳು ಅಧಿಕಾರದ ಉತ್ಸವದಲ್ಲಿ ಭಕ್ತರಿಂದ ಬಂದ ಕಾಣಿಕೆಯನ್ನು ಮಠದಲ್ಲಿ ಸಂಸ್ಕೃತ ಪಾಠಶಾಲೆಯನ್ನು ಸ್ಥಾಪಿಸಲು ವಿನಿಯೋಗಿಸಿದರು; ತಮ್ಮ ನೂತನ ಗುರುಗಳ ಉದಾರ ಹೃದಯವನ್ನು ಸಮಾಜ ಸೇವಾಭಾವವನ್ನು ಕಂಡು ಹಾವೇರಿಯ ಭಕ್ತರು ಬಹು ಹಿಗ್ಗಿದರು.

ಚಿತ್ರ ಸಂಖ್ಯೆ ೧೦: ಹಾವೇರಿಯಲ್ಲಿ ಹುಕ್ಕೇರಿಮಠ ಮೂಲ ಕರ್ತೃ ಲಿಂ ಶ್ರೀ ಮ ನಿ ಪ್ರ ರಾಚೋಟಿ ಮಹಾಸ್ವಾಮಿಗಳ ಗದ್ದುಗೆ

ಚಿತ್ರ ಸಂಖ್ಯೆ ೧೧: ಹಾವೇರಿಯಲ್ಲಿ ಹುಕ್ಕೇರಿಮಠ

ಚಿತ್ರ ಸಂಖ್ಯೆ ೧೨: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳು
ಕ್ರೀ. ಶ. 1911ರಲ್ಲಿ ಪರಮಪೂಜ್ಯ ಬಿದರಿಯ ಶ್ರೀ ಕುಮಾರ ಮಾಹಾಸ್ವಾಮಿಗಳವರು ಮುಪ್ಪಿನ ತಮ್ಮ ಅನಾರೋಗ್ಯವನ್ನು ಕಂಡು ತಮ್ಮ ಪ್ರಿಯ ಶಿಷ್ಯರಾದ ಉಭಯ ಶ್ರೀಗಳವರನ್ನು ಕರೆಯಿಸಿದರು.

ಚಿತ್ರ ಸಂಖ್ಯೆ ೧೩: ಶಿವಯೋಗಮಂದಿರ ಟ್ರಸ್ಟ್ ಕಮಿಟಿ ಮೊದಲ ಅಧ್ಯಕ್ಷರಾದ ಪೂಜ್ಯ ಶಿವಬಸವ ಸ್ವಾಮಿಗಳು ಹಾವೇರಿ ಮತ್ತು ಅನುಗ್ರಹ ಗುರುಗಳಾದ ಪೂಜ್ಯ ಬಿದರಿ ಕುಮಾರ ಶಿವಯೋಗಿಗಳ ಜೊತೆ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು
ಖಿನ್ನವಾಗುತ್ತಿರುವ ಸಮಾಜ ಉದ್ದಾರಕ್ಕಾಗಿ ಇನ್ನು ಹೆಚ್ಚು ಪ್ರಯತ್ನಿಸುವಂತೆ ಅನುಗ್ರಹಿಸಿ ತಮ್ಮ ತರುವಾಯ ಮಠಕ್ಕೆ ಅಪ್ಪಯ್ಯದೇವರನ್ನು ಅಧಿಕಾರಿಗಳನ್ನಾಗಿ ಮಾಡುವಂತೆ ಅಪ್ಪಣೆ ಕೊಡಿಸಿ ಪುಷ್ಯ ಶು. 5 ರಂದು ಲಿಂಗೈಕ್ಯರಾದರು, ಉಭಯ ಶ್ರೀಗಳವರು ಗುರುವರ್ಯರನ್ನು ಕಳೆದುಕೊಂಡು ಬಹುವಾಗಿ ನೊಂದುಕೊಂಡರು. ಆದರೆ ಅವರ ಧ್ಯೇಯಮೂರ್ತಿಯನ್ನು ತಮ್ಮ ಹೃದಯಮಂದಿರದಲ್ಲಿರಿಸಕೊಂಡ ಧೈರ್ಯ ತಂದುಕೊಂಡರು ಅವರ ಉಪದೇಶಗಳನ್ನು ಕಾರ್ಯರೂಪದಲ್ಲಿ ತರಲು ಪ್ರಯತ್ತಿಸಿದರು.
ಉಭಯ ಶ್ರೀಗಳವರು ನಾಡಿನ ತುಂಬೆಲ್ಲ ಸಂಚರಿಸಿ ಭಕ್ತರಲ್ಲಿ ಅರುವಿನ ಬೆಳಗನ್ನು ಮೂಡಿಸಿದರು; ಮಂದಿರದ ಅಭಿವೃದ್ದಿಗಾಗಿ ಧನವನ್ನು ಶೇಖರಿಸಿದರು ಅಲ್ಲಲ್ಲಿ ಶಾಖಾಮಂದರಿಗಳನ್ನು ಸ್ಥಾಪಿಸಿ ಅವುಗಳ ಮುಖಾಂತರ ಧಾರ್ಮಿಕ ವಿಚಾರಗಳ ಪ್ರಚಾರವನ್ನು ಮಾಡಿದರು.
ಹಾನಗಲ್ಲ ಮತ್ತು ಹಾವೇರಿಯ ಉಭಯ ಶ್ರೀಗಳವರು ಒಂದು ಹೃದಯ, ಎರಡು ಶರೀರವಾಗಿದ್ದು ಉಭಯ ಶ್ರೀಗಳವರು ಒಂದುಗೂಡಿ ಅನೇಕ ಸಮಾಜ ಕಾರ್ಯಗಳನ್ನು ನೆರವೇರಿಸಿದರು ಈ ಕಾರ್ಯಗಳಲ್ಲಿ ಹಾವೇರಿಯ ಶ್ರೀಗಳವರು ಹಾನಗಲ್ಲ ಶ್ರೀಗಳವರಿಗೆ ಬಲಭುಜವಾಗಿದ್ದರು, ಈ ಮಹಾಕಾರ್ಯಗಳಲ್ಲಿ 1909ರಲ್ಲಿ ಶಿವಯೋಗಮಂದಿರ ಸಂಸ್ಥೆಯ ಸ್ಥಾಪನೆಯು ಬಹುಮುಖ್ಯವಾದುದು, ಅದೇ ಸ್ಥಾಪಿತವಾಗಿದ್ದ ಶಿವಯೋಗಮಂದಿರವೆಂಬ ‘ಶಿಶು’ ವಿಗೆ ಹಾನಗಲ್ಲ ಶ್ರೀಗಳವರು ತಂದೆಯಾಗಿದ್ದರೆ ಹಾವೇರಿಯ ಶ್ರೀಗಳವರು ತಾಯಿಯಂತಿದ್ದರು ಅವರೀರ್ವರ ಸತ್‌ಪ್ರಯತ್ನಗಳ ಪರಿಣಾಮವಾಗಿ ಆ ಸಂಸ್ಥೆಯು ಮಹೋದ್ದೇಶಗಳ ಸಾಧನೆಗಾಗಿ ವಿಶಾಲವಾಗಿ ಬೆಳೆಯಿತು

ಚಿತ್ರ ಸಂಖ್ಯೆ ೧೪: ಶ್ರೀ ಕುಮಾರ ಶಿವಯೋಗಿಗಳೊಂದಿಗೆ ಕಾಲ್ನಡಿಗೆಯ ಯಡೆಯೂರು ಯಾತ್ರೆಯಲ್ಲಿ ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳು

ಚಿತ್ರ ಸಂಖ್ಯೆ ೧೫: ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಮತ್ತು ಹಾವೇರಿಯ ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳು ಉಭಯ ಶ್ರೀಗಳವರು ಒಂದು ಹೃದಯ, ಎರಡು ಪವಿತ್ರ ಶರೀರಗಳು
ಶ್ರೀಗಳವರಲ್ಲಿ ಹಾನಗಲ್ಲ ಪೂಜ್ಯರ ಬಗೆಗೆ ಅಪಾರವಾದ ಪ್ರೀತಿ ವಿಶ್ವಾಸಗಳಿದ್ದವು ಉಭಯ ಶ್ರೀಗಳವರು ಪರಸ್ಪರಂ ಭಾವಯಂತಃ ಪರಮ ಶ್ರೇಯಸ್ಸನ್ನು ಪಡೆದವರು ಹಾನಗಲ್ಲ ಶ್ರೀಗಳವರೂ ಹಾವೇರಿ ಶ್ರೀಗಳವರ ಇಚ್ಛೇಗೆ ತಪಸ್ಸಿಗೆ ಯಾವ ಆತಂಕವೂ ಬಾರದಂತೆ ವ್ಯವಹರಿಸುತ್ತಿದ್ದರು ಯಾವ ಕಾರ್ಯಕ್ಕೂ ಹಾವೇರಿ ಶ್ರೀಗಳವರ ಅನುಮತಿಯಿಲ್ಲದೆ ಕೈಹಾಕುತ್ತಿರಲಿಲ್ಲ ಉಭಯ ಶ್ರೀಗಳವರು ಶಿವಯೋಗಮಂದಿರ ಪುರುಷನ ಎರಡು ಕಣ್ಣುಗಳಂತೆ ಅಗಲದೆ ಇದ್ದು ಸಮಾಜದ ಆಗು-ಹೋಗುಗಳನ್ನು ಅರ್ಥೈಸಿ ಉಪಾಯಗಳನ್ನು ಕಂಡು ಹಿಡಿದರು ಸಾಧಕರ ಅಧಿಕಾರ-ಅನುಗ್ರಹ ಕಾರ್ಯಗಳನ್ನು ಹಾನಗಲ್ಲ ಶ್ರೀಗಳವರು ಹಾವೇರಿ ಶ್ರೀಗಳವರಿಗೇ ಒಪ್ಪಿಸಿ ಬಿಡುವರು ನವಿಲುಗುಂದ ಶ್ರೀಗಳ ಮತ್ತು ಶ್ರೀ ಅಪ್ಪಯ್ಯ ಸ್ವಾಮಿಗಳ ಅನುಗ್ರಹ ಕಾರ್ಯ ಹಾವೇರಿ ಶ್ರೀಗಳವರಿಂದ ಹಾನಗಲ್ಲ ಶ್ರೀಗಳವರ ಪ್ರೇರಣೆಯಿಂದ ನೆರವೇರಿತು.
ಹಾನಗಲ್ಲ ಶ್ರೀಗಳವರು ಅವಿಶ್ರಾಂತ ಸಮಾಜ ಸೇವೆಯನ್ನುಮಾಡಿ ಬಳಲಿದ್ದರು. ಮುದೇನೂರಿನಿಂದ ಕಾಯಿಲೆಯಾಗಿ ಶ್ರೀಗಳವರು ಹಾವೇರಿಗೆ ದಯಮಾಡಿಸಿದರು ಆಗ ಹಾವೇರಿ ಶ್ರೀಗಳವರು ಹಾನಗಲ್ಲ ಶ್ರೀಗಳವರ ಶುಶ್ರೂಷೆಯನ್ನು ಬಹುವಾಗಿ ನಿರ್ವಹಿಸಿದರು. ಸಮಾಜದ ಉದ್ಧಾರಕ ಮಹಾವಿಭೂತಿಯು ಇನ್ನು ಅಪೂರ್ಣವಾಗಿ ಉಳಿದ ಮಹತ್ಕಾರ್ಯಗಳ ಸಂಪೂರ್ತಿಗಾಗಿ ಉಳಿಯಬೇಕೆಂದು ಬಗೆದು ಶ್ರೀಗಳವರು ಸರ್ವಪ್ರಯತ್ನಗಳನ್ನು ಮಾಡಿದರು ಎಲ್ಲ ಸಾತ್ವಿಕ ಔಷಧೋಪಚಾರಗಳನ್ನು ಮಾಡಿಸಿದರು ಆದರೆ ಶ್ರೀಗಳವರ ಪ್ರಕೃತಿ ಗುಣಮುಖವಾಗಲಿಲ್ಲ.
ಹಾನಗಲ್ಲ ಶ್ರೀಗಳವರಿಗೆ ತಮ್ಮ ದೇಹಾಲಸ್ಯದ ಯೋಚನೆಯಿರಲಿಲ್ಲ. ಸಮಾಜದ ಉದ್ಧಾರವಾಗುವ ಬಗೆಗೆ ಸಮಾಜದಲ್ಲಿ ಪರಸ್ಪರ ತಿಳಿವಳಿಕೆ ಐಕ್ಯಭಾವ ಮೂಡಿ ಬರುವ ಬಗೆಗೆ ಬಹು ಯೋಚನೆಯಲ್ಲಿದ್ದರು. ಆಗ ಹಾವೇರಿ ಶ್ರೀಗಳವರು ಸಾಧ್ಯವಿದ್ದ ಮಟ್ಟಿಗೂ ಅವರ ಮಹಾಕಾರ್ಯಗಳನ್ನು ಕೈಗೂಡಿಸಲು ಪ್ರಯತ್ನಿಸುವುದಾಗಿಯೂ ಶಿವಯೋಗಮಂದಿರದ ಭಾರವನ್ನು ನಿರ್ವಹಿಸುವುದಾಗಿಯೂ ಭರವಸೆಯಿತ್ತು ಹಾನಗಲ್ಲ ಶ್ರೀಗಳವರ ಕೊನೆಯ ಇಚ್ಛೆಯಂತೆ ಅವರನ್ನು ಶಿವಯೋಗಮಂದಿರಕ್ಕೆ ಕಾರಿನಲ್ಲಿ ಕರೆತಂದರು. ಶ್ರೀಗಳವರ ಶೀಲಾಚರಣೆಗೆ ಸ್ವಲ್ಪವೂ ಚ್ಯುತಿ ಬಾರದಂತೆ ಅಂತ್ಯವಿಧಿಗಳನ್ನು ಮಾಡಿಸಿದರು; ಶ್ರೀಗಳವರು ಲಿಂಗೈಕ್ಯರಾದುದಕ್ಕೆ ಶರೀರರೂಪದಿಂದ ಅಗಲಿದುದಕ್ಕೆ ಸಮಾಧಿಯ ಗುದ್ದಲಿಯನ್ನು ಎತ್ತಿದಾಗ ನನ್ನ ಬಲಗೈ ಹೋಯಿತೆಂದು ಬಹುವಾಗಿ ಪರಿತಪಿಸಿದರು; ಆದರೂ ಧೈರ್ಯ ತಂದುಕೊಂಡು ಮಂದಿರದ ಅಭ್ಯುದಯವನ್ನು ತನ್ಮೂಲಕ ಸಮಾಜದ ಹಿತವನ್ನುಮಾಡಿ ಶ್ರೀಗಳವರ ಧ್ಯೇಯಗಳನ್ನು ಸಾಧಿಸಲು ಪ್ರಯತ್ನಿಸಿದರು.

ಚಿತ್ರ ಸಂಖ್ಯೆ ೧೬: ಶ್ರೀ ಕುಮಾರ ಶಿವಯೋಗಿಗಳ ಗದ್ದುಗೆ ಶಿವಯೋಗಮಂದಿರ
ಶತಮಾನಗಳಿಂದ ಸಮಾಜದಲ್ಲಿ ಕವಿದ ಮೌಢ್ಯದ ಮಬ್ಬನ್ನು ಕರಗಿಸಲು ಜ್ಞಾನದ ತಿಳಿಬೆಳಗು ಮೂಡುವಂತಾಯಿತು 1930ರಲ್ಲಿ ಹಾನಗಲ್ಲ ಶ್ರೀ ಕುಮಾರ ಮಾಹಾಸ್ವಾಮಿಗಳವರು ಲಿಂಗೈಕ್ಯರಾದ ಮೇಲೆ ಶಿವಯೋಗಮಂದಿರದ ಭಾರವೆಲ್ಲ ಹಾವೇರಿ ಶ್ರೀಗಳವರ ಮೇಲೆ ಬಿದ್ದಿತು ಹಾನಗಲ್ಲ ಶ್ರೀಗಳವರ ಇಚ್ಚೆಯಂತೆ ಅವರೇ ಆ ಸಂಸ್ಥೆಯ ಆಜೀವ ಅಧ್ಯಕ್ಷರಾಗಿದ್ದು ಬಿಕ್ಕಟ್ಟಿನ ಪ್ರಸಂಗಗಳಲ್ಲಿಯೂ ಸಂಸ್ಥೆಗೆ ಯಾವ ಕೊರತೆಯೂ ಬಾರದಂತೆ ನಡೆಯಿಸಿಕೊಂಡು ಬಂದರು.
ಶಿವಯೋಗಮಂದಿರದ ಅಭ್ಯುದಯ
ಪ್ರಾರಂಭದಲ್ಲಿ ಏಳು ಜನ ಸಾಧಕರಿದ್ದರು (೧ ವ್ಯಾಕರಣಾಳ ಸಿದ್ಧಲಿಂಗ ಪಟ್ಟಾಧ್ಯಕ್ಷರು; ೨ ಸವದತ್ತಿ ಅಪ್ಪಯ್ಯದೇವರು ; ೩ ಕಂಚಗಲ್ಲ ಬಿದರೆಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ೪ ಮಹಾದೇವ ದೇಶಿಕರು (ಕುರುವತ್ತಿ ಶ್ರೀಗಳು) ೫ ಮಮದಾಪುರದ ಗುರುಸಿದ್ದದೇವರು ೬ ಬಸವಲಿಂಗದೇವರು ನವಿಲಗುಂದ ೭ ಶಿವಮೂರ್ತಿದೇವರು ಚರಂತಿಮಠ ಬಾಗಲಕೋಟಿ) ಹಾವೇರಿ ಶ್ರೀಗಳವರೇ ಇವರೆಲ್ಲರ ಯೋಗಕ್ಷಮವನ್ನು ವಹಿಸಿದ್ದರು ನಿಬಿಡವಾದ ಕಾಡಿನಲ್ಲಿ ಕಲ್ಲು-ಮುಳ್ಳುಗಳನ್ನು ತೆಗೆದು ಪರ್ಣಕುಟೀರಗಳನ್ನು ನಿರ್ಮಿಸಿ ಸಾಧಕರಿಗೆ ಯಾವ ತೆರನಾದ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಿದ್ದರು ಹಾನಗಲ್ಲ ಶ್ರೀಗಳವರು ತಂದೆಯಂತೆ ನಾಡಿನ ಮೂಲೆಮೂಲೆಯಲ್ಲಿ ಸಂಚರಿಸಿ ಧರ್ಮಜಾಗೃತಿಯೊಂದಿಗೆ ಮಂದಿರಕ್ಕಾಗಿ ಭೀಕ್ಷೆಯನ್ನು ಮಾಡಿದರು.

ಚಿತ್ರ ಸಂಖ್ಯೆ ೧೭ : ಶಿವಯೋಗ ಮಂದಿರ ಸ್ಥಾಪನೆಯಾದ ಮೊದಲ ವರ್ಷದಲ್ಲಿ ಪ್ರವೇಶ ಪಡೆದ ಮೊದಲ ಶಿವಯೋಗ ಸಾಧಕರು
ಹಾವೇರಿ ಶ್ರೀಗಳವರು ತಾಯಿಯಂತೆ ಪ್ರೀತಿಯಿಂದ ಮಂದಿರದ ವಟುಗಳನ್ನು ಸಾಧಕರನ್ನು ಸಲಹಿದರು ಮೊದಮೊದಲು ಮಂದಿರದಲ್ಲಿ ಕಟ್ಟಡಗಳಿಗಾಗಿ ಗುಡ್ಡದಿಂದ ಕಲ್ಲು-ಕಟ್ಟಿಗೆಗಳನ್ನು ತಾವೇ ಸ್ವತಃ ಸಾಧಕರೊಂದಿಗೆ ಹೊತ್ತು ತಂದರು ಗ್ರಂಥ ಸಂಗ್ರಹ, ಕೀರ್ತನಕಾರರು ಮತ್ತು ಗವಾಯಿಗಳ ಶಿಕ್ಷಣ ಮುಂತಾಗಿ ಎಲ್ಲ ವ್ಯವಸ್ಥೆಯನ್ನು ಮಾಡಿದರು; ತಂದೆ ತಾಯಂದಿರನ್ನು ಅಗಲಿದ ಚಿಕ್ಕ ಚಿಕ್ಕ ವಟುಗಳ ಮನವು ಮನೆಯತ್ತ ವಿಹಾರದೊಂದಿಗೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಸಮಾಧಿಯೆಂಬ ಅಷ್ಟಾಂಗಯೋಗದ ಸಾಧನೆಯೊಂದಿಗೆ ದೃಷ್ಟಿಯೋಗವನ್ನು ಸಾಧಿಸಿ ಶಿವಯೋಗದಲ್ಲಿ ಪರಿಣಿತರಾಗುವಂತೆ ಶ್ರೀಗಳವರು ಯೋಜಿಸಿದರು.
ಶ್ರೀಗಳವರ ಪ್ರಯತ್ನಗಳಿಂದಾಗಿ ಮಂದಿರವು ಪ್ರಶಾಂತವಾದ ಆಶ್ರಮವಾಗಿ, ಆದರ್ಶ ಧಾರ್ಮಿಕ ವಿದ್ಯಾಕೇಂದ್ರವಾಗಿ ರೂಪುಗೊಂಡಿತು ಶ್ರೀಗಳವರ ಕಾರ್ಯಕ್ಷಮತೆಯನ್ನು ಕಂಡೇ ಹಾನಗಲ್ಲ ಪೂಜ್ಯರು ಇವರನ್ನು ಅಜೀವ ಅಧ್ಯಕ್ಷರನ್ನಾಗಿ ಮಾಡಿದ್ದರು ) ಹಾನಗಲ್ಲ ಶ್ರೀಗಳವರು ಲಿಂಗೈಕ್ಯರಾದ ಮೇಲೆ ಶ್ರೀಗಳವರು ಸ್ವತಃ ಬಿಕ್ಷೆ ಮಾಡಿ ಶಿವಯೋಗಮಂದಿರದ ಸರ್ವತೋಮುಖ ಅಭಿವೃದ್ಧಿಯನ್ನು ಲಿಂಗೈಕ್ಯರಾಗುವವರೆಗೂ ಸಾಧಿಸಿದರು.
ವಟುವಾತ್ಸಲ್ಯ
ಶ್ರೀಗಳವರದು ಮಾತೃಹೃದಯ ಮಂದಿರದ ವಟುಗಳನ್ನು ಸಾಧಕರನ್ನು ಬಹುಪ್ರೀತಿಯಿಂದ ಸಾಕಿ ಸಲುಹಿದರು ವಟುಗಳ ಸಾಧಕರ ಶಾರೀರಿಕ ಪೋಷಣೆಯೊಂದಿಗೆ ಅವರ ಭೌದ್ಧಿಕ ಮತ್ತು ಆಧ್ಯಾತ್ಮ ವಿಕಾಸಕ್ಕೂ ಅವರು ಕಾರಣರಾದರು ತಪ್ಪಿದಾಗ ಒಮ್ಮೊಮ್ಮೆ ಸಿಟ್ಟು ಮಾಡಿದರೂ ಅವರ ಸ್ವಭಾವ ಕುಸುಮಾದಪಿ ಮೃದುವಾಗಿತ್ತು ಉಷ್ಣತ್ವಮಗ್ನ್ಯಾತಪ ಸಂಪ್ರಯೋಗಾತ್ ಶೈತ್ಯಂ ಹಿಯತ್ ಸಾ ಪ್ರಕೃತಿರ್ಜಲಸ್ಯ ಎಂದು ಮಹಾಕವಿ ಕಾಳಿದಾಸು ಹೇಳುವಂತೆ ಶ್ರೀಗಳವರ ಸ್ವಭಾವ ಬೆಂಕಿ-ಬಿಸಿಲುಗಳ ಸಂಪರ್ಕದಿಂದ ನೀರು ಕೆಲವು ಕ್ಷಣ ಕಾದರೂ ಅದು ಆರಿ ತನ್ನ ಸಹಜ ಗುಣದಂತೆ ತಣ್ಣಗಾಗುವ ಹಾಗೆ ದಯಾರ್ದ್ರವಾಗಿದ್ದಿತು.
ಸಾಧಕರಿಗೆ ತಮ್ಮ ಕಟು ಅನುಭವಗಳನ್ನು ವಿವರಿಸಿ, ಹೇಗೆ ಇಂದ್ರಿಯನಿಗ್ರಹವನ್ನು ಸಾಧಿಸಬೇಕು, ಶಿವಯೋಗಾನುಷ್ಠಾನವನ್ನು ಮಾಡಬೇಕೆನ್ನುವುದನ್ನು ಹೃದಯಕ್ಕೆ ತಾಕುವಂತೆ ಆತ್ಮೀಯತೆಯಿಂದ ತಿಳಿಸಿ ಹೇಳುತ್ತಿದ್ದರು ಅದೆಷ್ಟೋ ಶಿವಯೋಗ ಸಾಧಕರು ಶ್ರೀಗಳವರಿಂದ ಸ್ಪೂರ್ತಿ ಪಡೆದು ಶಿವಯೋಗದ ಸಾಧನೆಯಲ್ಲಿ ತೊಡಗಿ ಸಿದ್ಧಿ ಪಡೆದರು.
ಲಿಂಗಪೂಜಾನಿಷ್ಠೆ
ಶ್ರೀಗಳವರಿಗೆ ಲಿಂಗಪೂಜೆಯೆಂದರೆ ಮಹದಾನಂದ, ಬಿಲ್ಪಪತ್ರಿ ಪುಷ್ಪಗಳ ಬನ, ನದಿ-ಜರಿಗಳ ಸೊಂಪಾದ ತಾಣಗಳನ್ನು ಕಂಡು ಶ್ರೀಗಳರವರ ಅನುಷ್ಠಾನ ಮಾಡುವ ಲವಲವಿಕೆ ಹೆಚ್ಚುತ್ತಿತ್ತು ಅಲ್ಲಿಯೇ ಒಂದು ಪರ್ಣಕುಟಿಯನ್ನು ಕಟ್ಟಿ ಶಿವಯೋಗಾನಂದದಲ್ಲಿ ತಲ್ಲೀನರಾಗಿ ಬಿಡುವರು ಎಂತಹ ರೋಗ ಬಂದರೂ ಜಾಡ್ಯ ಬಂದರೂ ಅವರು ಲಿಂಗಪೂಜೆಯನ್ನು ಬಿಡುತ್ತಿರಲ್ಲಿಲ್ಲ. ಅವರು ಪೂಜೆಯಲ್ಲಿ ಅಂಗೈಯೊಳಗಣ ಲಿಂಗಯ್ಯನನ್ನು ನೆಟ್ಟ ದೃಷ್ಟಿಯಿಂದ ನೋಡುತ್ತ ಗಂಟೆಗಟ್ಟೆಲೆ ನಿಶ್ಚಲವಾಗಿ ಬಿಡುತ್ತಿದ್ದರು. ದೃಷ್ಟಿಯೋಗದಲ್ಲಿ ಅವರು ಸಿದ್ದಿಯನ್ನು ಪಡೆದಿದ್ದರು. ಶಿವಯೋಗ ಸಿದ್ದಿಗೆ ದೃಷ್ಟಿಯೋಗ ತಳಹದಿಯೆಂದು ಅವರು ಮಂದಿರದ ಸಾಧಕರಿಗೆ ಪದೇ ಪದೇ ಅಪ್ಪಣೆಕೊಡಿಸುತ್ತಿದ್ದರು. ಎಲ್ಲಿಯಾದರೂ ಪ್ರಯಾಣ ಮಾಡುವಾಗ ಮಾರ್ಗದಲ್ಲಿ ಜಲ ಪತ್ರಿ-ಪುಷ್ಪಗಳಿಂದ ಸಮೃದ್ಧವಾದ ನಿಸರ್ಗವನ್ನು ಕಂಡರೆ ಸಾಕು, ಅಲ್ಲಿಯೇ ಉಳಿದು ಶಿವಾರ್ಚನೆಯನ್ನು ಮನದುಂಬಿ ಮುಗಿಸಿ ಮುಂದೆ ಪ್ರಯಾಣ ಬೆಳೆಸುವದು ಶ್ರೀಗಳವರ ಸ್ವಭಾವವಾಗಿದ್ದತು.

ಚಿತ್ರ ಸಂಖ್ಯೆ ೧೮: ಮಹಾಕೂಟದ ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ತಪೋಭೂಮಿ
ಒಂದು ಸಲ ಶಿವಯೋಗಮಂದಿರದಲ್ಲಿ ಬೆಳಗು ಮುಂಜಾನೆ ಮಹಾಕೂಟದ ಕಡೆ ಸಂಚಾರಕ್ಕೆ ಹೊರಟಾಗ, ಅಲ್ಲಿಯ ಪ್ರಶಾಂತ ಸ್ಥಾನವನ್ನು ಕಂಡು ಶಿವಾರ್ಚನೆಯನ್ನು ಮಾಡಬೇಕೆಂದು ಬಯಸಿದರು; ಅಂದವಾದ ಸುಗಂಧಮಯ ಪುಷ್ಪಗಳು, ಕೋಮಲವಾದ ಬಿಲ್ವದಳಗಳು, ಜುಳುಜುಳು ಹರಿಯುವ ನಿರ್ಮಲ ಜಲಧಾರೆ-ಮತ್ತೇನು ಬೇಕು ಶಿವನಿಗೆ? ಸ್ನಾನ ಮಾಡಿ ಅಲ್ಲಿಯೇ ಒಂದು ಮರದಡಿ ಶಿವಪೂಜೆಯನ್ನು ಮನದಣಿ ಮಾಡಿದರು.
ಅಷ್ಟರಲ್ಲಿ ಅವರ ಲಿಂಗನಿಷ್ಠೆಯಿಂದ ಬಂದ ಶಿವಪ್ರಸಾದವನ್ನು ಸೇವಿಸಿ ಮಂದಿರಕ್ಕೆ ದಯಮಾಡಿಸಿದರು ಅವರ ಲಿಂಗಪೂಜೆಯ ಪ್ರಭಾವದಿಂದಲೇ ಕಪನಳ್ಳಿಯ ಶಿವಯೋಗಾಶ್ರಮ, ಕೊಪ್ಪದ ಶಾಖಾ ಶಿವಯೋಗಮಂದಿರ, ಹಿರೇಹಾಳ-ಬದಾಮಿಯ ಶಾಖಾಮಂದಿರಗಳು, ತೊದಲಬಗಿ ಹಳ್ಳದ ದಂಡೆಯ ಆಶ್ರಮ ಮೊದಲಾದವು ಶಿವಯೋಗಿಯಿರ್ದ ಕ್ಷೇತ್ರಗಳಾಗಿ ಭಕ್ತರನ್ನು ಆಕರ್ಷಿಸಿವೆ.

ಚಿತ್ರ ಸಂಖ್ಯೆ ೧೯: ಶಿವಬಸವ ಕೊಳ್ಳ, ಶಿವಯೋಗ ಮಂದಿರ, ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ತಪೋಭೂಮಿ
ಶಿವಲಿಂಗ ಪೂಜೆಯು ಭವರೋಗಕ್ಕೆ ಸಿದ್ಧೌಷದಿಯೆಂದು ಶ್ರೀಗಳವರು ಅಪ್ಪಣೆ ಕೊಡಿಸುತ್ತಿದ್ದರು ಅನುವು ಆಪತ್ತುಗಳಿಂದ ಬಳಲಿ ಬಂದ ಭಕ್ತರಿಗೆ ಲಿಂಗಪೂಜೆ ಮಾಡಿರಪ್ಪ! ನಿಮ್ಮ ಕಷ್ಟ ಪರಿಹಾರವಾಗುವುದು’ ಎಂದು ಕೃಪಾದೃಷ್ಟಿ ಬೀರಿ ಸಂತೈಸುತ್ತಿದ್ದರು.
ಮಣ್ಣನ್ನು ಅವರು ಕೈಯಿಂದ ಮುಟ್ಟಿದವರಲ್ಲ. ಯಾವ ಆಸ್ತಿ-ಪಾಸ್ತಿಗಳಿಗೂ ಮನಸ್ಸು ಮಾಡಿದವರಲ್ಲ; ಅವರೆಲ್ಲಿಯೂ ಬಹಳ ದಿನವಿರುತ್ತಿರಲಿಲ್ಲ ಭಕ್ತರನ್ನು ಉದ್ಧರಿಸುತ್ತ ಸಂಚರಿಸುವುದೇ ಲೇಸೆಂದು ಅವರು ಬಗೆದಿದ್ದರು ಜಂಗಮರೂಪದಲ್ಲಿ ಪರಶಿವನು ಸಾಕಾರನಾಗಿ ಅತಿಥಿರೂಪದಲ್ಲಿ ಸಂಚರಿಸುವನೆಂದು ಹೇಳುವರು. ಅಂತಹ ನಿರಾಭಾರ ಜಂಗಮತ್ವವನ್ನು ಶ್ರೀಗಳವರು ಪಡೆದಿದ್ದರು. ಸರ್ವಜನ ಸಂಪೂಜ್ಯರಾಗಿದ್ದರು. ಮಠವನ್ನು ಹಿಡಿದು ಕುಳಿತವರಲ್ಲ ಸ್ವಂತ ಮಠದ ಏಳ್ಗೆಗಾಗಿಯಲ್ಲ. ಸಮಾಜವೆಂಬ ಸದೃಢವಾದ ಮಹಾಮಠವನ್ನು ಕಟ್ಟಲು ಹೆಣಗಿದರು ಹಾವೇರಿಯ ನೂತನ ಮಠವನ್ನು ಬಿಕ್ಷೆ ಬೇಡಿ ದುಡ್ಡು ತಂದು ಕಟ್ಟಿಸಲಿಲ್ಲ ಅದನ್ನು ಶಿವನೇ ಭಕ್ತರ ರೂಪದಲ್ಲಿ ಬಂದು ಕಟ್ಟಿರಬೇಕು.

ಚಿತ್ರ ಸಂಖ್ಯೆ ೨೦: ನಿಡಗುಂದಿ ಕೊಪ್ಪದ ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ತಪೋಭೂಮಿ
ಕಷ್ಟದಲ್ಲಿ ಬಿದ್ದ ಪ್ರತಿಯೊಂದು ಪ್ರಾಣಿಯಲ್ಲಿ ಶ್ರೀಗಳವರು ದಯಾರ್ದ್ರ ಭಾವನೆಯುಳ್ಳವರಾಗಿದ್ದರು ಮೌನಿಯೂ ಭೂತ ದಯಾಯುಕ್ತನೂ ಆದ ನಿರಾಭಾರನೇ ನಿಜ ಜಂಗಮನೆಂಬ ವಚನೋಕ್ತಿಗೆ ಶ್ರೀಗಳವರ ದಯಾಳು ಭಾವ ಸರಿದೂಗುವಂತಿತ್ತು ಬಡವರಿಗೆ ಆರ್ತರಿಗೆ ಕೈಲಾದ ಮಟ್ಟಿಗೆ ಸಹಾಯ ನೀಡುವುದು ಶ್ರೀಗಳವರ ಸ್ವಭಾವವಾಗಿದ್ದಿತು ಶ್ರೀಗಳವರ ಉದಾರತೆಯಿಂದ ಕೃತಾರ್ಥರಾದ ಶಾಸ್ತ್ರೀಗಳೆಷ್ಟೋ? ಭಕ್ತರೆಷ್ಟೋ? ದೀನ-ದರಿದ್ರರೆಷ್ಟು ಜನರೋ? ಅಗಣಿತವಾದುದು.
ಶ್ರೀಗಳವರು ಶಿವಯೋಗಮಂದಿರದ ಸ್ಥಾಪನೆಯ ಕಾಲದಲ್ಲಿ ಸಂಸ್ಥೆಯ ಆಕಳು – ದನ – ಕರುಗಳನ್ನು ತಾವೇ ಸ್ವತಃ ಮೇಯಿಸಿ ಜೋಪಾನ ಮಾಡಿದ್ದು ಅವರ ಪ್ರಾಣಿ ದಯಾಪರತೆಯ ಕುರುಹಾಗಿದೆ ದಯೆಯೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರು ಹೇಳಿದ ತತ್ವದ ಮರ್ಮವನ್ನು ಅರಿತು ಶ್ರೀಗಳವರು ಆದರ್ಶ ದಯಾಳುವಾಗಿ ಬಾಳಿ ಬೆಳಗಿದರು.
ತಪೋಜೀವನ
ಮಾಡಲಿಲ್ಲವೆ ತಪವ ಮಾಡಲಿಲ್ಲವೆ
ಕೂಡೆ ಸುಗುಣದೊಡನೆ ತಿಳಿದು
ನೋಡಿ ತ್ರಿವಿಧ ಕರಣ ದಲ್ಲಿ ||ಪ||
ಗುರುಭಜನೆ ಸುಕರ್ಮವೃತ್ತಿ
ಹರನ ಪೂಜೆ ಶರಣ ಸೇವೆ
ಪರಮ ಸಾತ್ವಿಕಂಗಳೆಂಟು ನೆರೆದು ನೆಲಸಿ ತನುವಿನಲ್ಲಿ ||ಪ||
ವಿನಯವನ್ಯಹಿತವತರ್ಕ
ವನಪಶಬ್ಧವಚಲಿತಾರ್ಥ
ವನಘಮಂತ್ರವಾಗಮಂಗಳಿನಿತುವಿಡಿದು ವಚನದಲ್ಲಿ ||ಪ||
ಶಮೆ ವಿವೇಕವಾತ್ಮವಿದ್ಯೆ
ದಮೆ ದಯಾವಿರಕ್ತಿಯೋಗ
ವಮರರೂಪು ಶಂಭುಲಿಂಗವಮರ್ದು
ತೋರಿ ಸಮನದಲ್ಲಿ ||ಪ||

ಚಿತ್ರ ಸಂಖ್ಯೆ ೨೧: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಗದ್ದುಗೆ ಹುಕ್ಕೇರಿಮಠ ಹಾವೇರಿ
ಎಂದು ನಿಜಗುಣ ಶಿವಯೋಗಿಗಗಳು ಅಪ್ಪಣೆ ಕೊಡಿಸಿದಂತೆ ಶ್ರೀಗಳವರು ಪ್ರತನಿತ್ಯ ಪ್ರಾತಃಕಾಲ ಎದ್ದು ಗುರುಸೋತ್ರವನ್ನು ಮಧುರ ಕಂಠದಿಂದ ಭಕ್ತಿಭಾವದಿಂದ ಹಾಡುತ್ತಿದ್ದರು ಗುರುಸೇವೆ ಮೊದಲಾದ ಸಾತ್ವಿಕಾಚರಣೆಯಲ್ಲಿ ನಿಷ್ಠೆಯುಳ್ಳವರು ಲಿಂಗಪೂಜೆಯನ್ನು ಜೀವನದ ಮುಖ್ಯ ಧ್ಯೇಯವನ್ನಾಗಿಟ್ಟುಕೊಂಡವರು; ಅಥಣಿಯ ಶ್ರೀ ಮರುಳಸಿದ್ಧ ಶಿವಯೋಗಿಗಳು ಮತ್ತು ಬಿದರಿಯ ಶ್ರೀ ಕುಮಾರ ಶಿವಯೋಗಿಗಳಂತಹ ಮಹಾತ್ಮರ ಸೇವೆಯನ್ನು ಭಕ್ತಿಪೂರ್ವಕವಾಗಿ ಮಾಡಿ ತನು ತಪಸ್ಸನ್ನು ಸಾಧಿಸಿದರು; ವಿನಯಶೀಲರು ಮತ್ತು ಪರೋಪಕಾರಿಗಳೂ ಆಗಿದ್ದು ಯಾರ ಮನವನ್ನೂ ಬಿರುನುಡಿಗಳಿಂದ ನೋಯಿಸದೆ, ಷಡಕ್ಷರ ಮಂತ್ರಾನುರಾಗಿಗಳಾಗಿ, ಆದ್ಯರ ವಚನಗಳನ್ನು ಹೇಳುವಲ್ಲಿ ಕೇಳುವಲ್ಲಿ ಅನುರಕ್ತಿಯುಳ್ಳವರಾಗಿದ್ದು ವಾಚಿಕ ತಪವನ್ನು ಮಾಡಿದರು; ಅಂತರ್ಬಹಿರಿಂದ್ರಿಯ ನಿಗ್ರಹವನ್ನು ಸಾಧಿಸಿ, ಸ್ವಸ್ವರೂಪಜ್ಞಾನ-ದಯೆ-ಅಪರಿಗ್ರಹ-ಶಿವಯೋಗ ಮೊದಲಾದ ಸದ್ಗುಣಗಳನ್ನು ಪಡೆದು ಮಾನಸತಪವನ್ನು ಮಾಡಿದರು.
ಹಾವೇರಿಯ ಹುಕ್ಕೇರಿಮಠದ ಉತ್ತಾರಾಧಿಕಾರಿಗಳು

ಚಿತ್ರ ಸಂಖ್ಯೆ ೨೨: ಪೂಜ್ಯ ಶ್ರೀ ಮ ನಿ ಪ್ರ ಲಿಂ ಶಿವಲಿಂಗ ಮಹಾಸ್ವಾಮಿಗಳವರು

ಚಿತ್ರ ಸಂಖ್ಯೆ ೨೩: ಪೂಜ್ಯ ಶ್ರೀ ಮ ನಿ ಪ್ರ ಸದಾಶಿವ ಮಹಾಸ್ವಾಮಿಗಳವರು (ಸಧ್ಯದ ಪೀಠಾಧಿಪತಿಗಳು)
ಭಕ್ತ ವಾತ್ಸಲ್ಯ
ಶ್ರೀಗಳವರ ದರ್ಶನಕ್ಕೆ ಅನೇಕ ಭಕ್ತರು ಬರುತ್ತಿದ್ದರು ಬಂದವರ ಯೋಗಕ್ಷೇಮವನ್ನು ಕೇಳಿ ಅವರಿಗೆ ಬಂದಿರುವ ಕಷ್ಟಗಳ ಪರಿಹಾರವನ್ನು ಹೇಳುತ್ತಿದ್ದರು ಅವರ ನುಡಿ, ಅವರ ಕರುಣಾಕಟಾಕ್ಷ, ಅವರ ಸ್ಪರ್ಶನ-ದರ್ಶನ ಮಾತ್ರದಿಂದಲೇ ಎಷ್ಟೋ ಜನರ ತಾಪತ್ರಯಗಳು ತೊಲಗುತ್ತಿದ್ದವು ಯಾರಾದರೂ ಭಕ್ತರು ಆಕಸ್ಮಾತ್ತಾಗಿ ಬಹುದಿನಗಳ ಮೇಲೆ ಬೇಟಿಯಾದರೆ ಅವರ ಅಜ್ಜ- ಮುತ್ತಜ್ಜಂದಿರ ಇಡಿಯ ಪರಿಚಯವನ್ನೇ ಹೇಳಿ ಬಿಡುವರು ಕೇಡು ಬಗೆದವರಿಗೂ ಪ್ರೀತಿಯಿಂದ ಕರೆದು ಪ್ರಸಾದ ಕರುಣಿಸಿ ಕಳಿಸುವರು ಉದಾರಚರಿತಾನಾಂ ತು ವಸುದೈವ ಕುಟುಂಬಕಂ ಎಂಬಂತೆ ಶ್ರೀಗಳವರು ಲೋಕೋತ್ತರ ಚರಿತರು ಅವರ ಹೃದಯ ಶುದ್ಧ ಹಾಲಿನಂತಹದು; ಅವರೊಬ್ಬ ಪತಿತ ಪಾವನರಾದ ಮಹಾಸಂತರಾಗಿದ್ದರು.
ಶ್ರೀಗಳವರು ಭಕ್ತರ ಮನೋಭಿಷ್ಟಗಳನ್ನು ಪೂರೈಸುತ್ತ ಅಲ್ಲಲ್ಲಿ ಪ್ರಶಾಂತವಾದ ಸ್ಥಾನಗಳಲ್ಲಿ ಅನುಷ್ಠಾನ ಮಾಡಿ ಅನೇಕ ಶಾಖಾ ಶಿವಯೋಗಮಂದಿರಗಳು ತಾವಾಗಿಯೇ ಬೆಳೆದು ಬರುವಂತೆ ಅನುಗ್ರಹಿಸಿದರು; ಆ ಪುಣ್ಯಾಶ್ರಮಗಳಲ್ಲಿ ಅನೇಕರು ಶಿವಯೋಗ ಸಾಧನೆ ಮಾಡಿ ಸಿದ್ಧಿಪಡೆದರು; ತಮ್ಮ ಕೊನೆಯುಸಿರಿರುವರೆಗೂ ಅವರು ಭಕ್ತರ ಹಿತಕ್ಕಾಗಿ, ಶಿವಯೋಗಮಂದಿರದ ಶ್ರೇಯಸ್ಸಿಗಾಗಿ ಹೆಣಗಿದರು, ಲಿಂಗಪೂಜೆಯೇ ಅಧ್ಯಾತ್ಮಸಾಧನೆಯೇ ಜೀವನದ ಸಾರಸರ್ವಸ್ವವೆಂದು ಜನರಿಗೆ ತೋರಿದ ಮಹಾಮಹಿಮರವರು ಶ್ರೀಗಳವರು ತಮ್ಮ 89ನೇಯ ವಯೋಮಾನದಲ್ಲಿ ಶಾ. ಶಕ 1868 ಪುಷ್ಯ ಶು. 11, 13-1-1946 ರಂದು ಹಾವೇರಿಯ ಹುಕ್ಕೇರಿಮಠದಲ್ಲಿ ಉರಿಯೊಳಗೈದ ಕರ್ಪೂರದಂತೆ ಲಿಂಗದೊಳೈಕ್ಯವಾದರು.
ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಅಪರೂಪದ ಚಿತ್ರಗಳು

ಚಿತ್ರ ಸಂಖ್ಯೆ ೨೪: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಅಪರೂಪದ ಚಿತ್ರ

ಚಿತ್ರ ಸಂಖ್ಯೆ ೨೫: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಅನುಷ್ಠಾನದ ಅಪರೂಪದ ಚಿತ್ರ (ಅಥಣಿ)

ಚಿತ್ರ ಸಂಖ್ಯೆ ೨೬: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಅಪರೂಪದ ಚಿತ್ರ (ಸವದತ್ತಿ)

ಚಿತ್ರ ಸಂಖ್ಯೆ ೨೭: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಪಾದರಕ್ಷೆಗಳು (ವಳಸಂಗದ ಅವರ ಮನೆ ಹಾವೇರಿ)

ಚಿತ್ರ ಸಂಖ್ಯೆ ೨೮: ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ರುದ್ರಾಕ್ಷಿ ಕಿರೀಟ (ಅಥಣಿ)
ಪೂಜ್ಯ ಶ್ರೀ ಶಿವಬಸವ ಶಿವಯೊಗಿಗಳ ಹಸ್ತಾಕ್ಷರ
