ಪರಮ ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು.

ಲೇಖಕ:ಶ್ರೀಕಂಠ.ಚೌಕೀಮಠ.

 

ದೂರದೃಷ್ಟಿ ಮತ್ತು ಮುಂದಾಲೋಚನೆಗಳು ಒಬ್ಬ ಪ್ರಭುದ್ಧ ನಾಯಕನ ಲಕ್ಷಣಗಳು. ರಾಜಕಾರಣ ,ಕ್ರೀಡೆ ಮತ್ತು ಸಾಮಾಜಿಕ ಸಂಘಟನೆಗಳ ಕ್ಷೇತ್ರದಲ್ಲಿ ಈ ನಾಯಕತ್ವದ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಬಹುದು ಮತ್ತು ಕೇಳಬಹುದು.
ಆದರೆ
ಒಬ್ಬ ವಿರಕ್ತ ಶಿವಯೋಗಿಯ ನಿಸ್ವಾರ್ಥ ಬದುಕಿನ ಪ್ರತಿಯೊಂದು ಹೆಜ್ಜೆಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳ ಯೋಜನೆ, ದೂರದೃಷ್ಟಿ ಮತ್ತು ಮುಂದಾಲೋಚನೆಗಳನ್ನು ಕಾಣುವುದು ವಿರಳ.
ಶಿವಯೋಗಿಗಳು ಪ್ರಕಟಗೊಳಿಸಿದ ಆ ಅಪೂರ್ವ ಸಂಗಮದ ಅದ್ಭುತ ಶಕ್ತಿ ಈ ಯುಗದ ವಿಸ್ಮಯವಾಗಿ ಕಾಣುತ್ತದೆ.
ಯುಗ ಪುರುಷ ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳು ಆ ಅಪೂರ್ವ ಸಂಗಮದ ಮೇರು ಪರ್ವತ.

ಬಹಿರಂಗದ ಪರಿಶ್ರಮದ ಅನುಭವ ಮತ್ತು ಅಂತರಂಗದ ಪರಿಶುದ್ಧತೆಯ ಅನುಭಾವಗಳು ಶ್ರೀ ಕುಮಾರ ಶಿವಯೋಗಿಗಳ ದೂರದೃಷ್ಟಿ ಮತ್ತು ಮುಂದಾಲೋಚನೆಗಳ ಫಲಶೃತಿಗಳು .
ಅಖಿಲ ಭಾರತ ಶ್ರೀಮದ್ವೀರಶೈವ ಮಹಾಸಭಾ ಮತ್ತು ಶ್ರೀಮದ್ವೀರಶೈವ ಶಿವಯೋಗಮಂದಿರಗಳೆಂಬ ಸಂಸ್ಥೆಗಳನ್ನು ಸ್ಥಾಪಿಸಿ ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಪವಾಡ ಸದೃಶವಾಗಿ ನಡೆದ ವೀರಶೈವ-ಲಿಂಗಾಯತ ಸಮಾಜದ ಉನ್ನತಿ, ಶ್ರೀ ಕುಮಾರ ಶಿವಯೋಗಿಗಳ ತ್ಯಾಗ ಜೀವನದ ಮಹೊನ್ನತ ಕೊಡುಗೆಗಳು.
ಈ ಯುಗದ ವಿಸ್ಮಯ ಮತ್ತು ಅಪೂರ್ವ ಸಂಗಮದ ಮೇರು ಪರ್ವತದ ಸೃಷ್ಟಿ ಇನ್ನೂ ಅದ್ಭುತ !.
ತ್ಯಾಗ ಮೂರ್ತಿಗಳು ಭೌತಿಕವಾಗಿ ಜೀವಿಸಿದ್ದು ಕೇವಲ 63 ವರ್ಷಗಳು ಮಾತ್ರ.
ಪೂಜ್ಯರ ಸಾಧನೆಯ ಬದುಕು ಅತ್ಯಂತ ಕೌತುಕಮಯವಾಗಿ ಕಾಣಿಸುತ್ತದೆ.
ಯಾರು ಈ ಗುರುಗಳಿಗೆ ವಿದ್ಯೆ ಮತ್ತು ಜ್ಞಾನಗಳನ್ನು ಕೊಟ್ಟರು?. ಹೇಗೆ ಶ್ರೀ ಕುಮಾರ ಶಿವಯೋಗಿಗಳು ಅಪೂರ್ವ ಸಂಗಮದ ವಿಸ್ಮಯ ಶಕ್ತಿಗಳನ್ನು ಪಡೆದುಕೊಂಡರು ?, ಎಂಬೆಲ್ಲ ಪ್ರಶ್ನೆ ಗಳಿಗೆ ಉತ್ತರ ಗಳನ್ನು ಹುಡುಕುತ್ತ ಹೋದಂತೆ ವಿವರಗಳು ಕೂತೂಹಲದಾಯಕ .
ಜನ್ಮ ಸ್ಥಳ ಜೋಯಿಸರಹಳ್ಳಿಯ ಮನೆಯಲ್ಲಿಯೇ ಇದ್ದ ಗಾಂವಟಿ ಶಾಲೆಯ ಮೂರನೆಯ ಇಯತ್ತೆವರೆಗೆ ಶಿಕ್ಷಣ ಕೊಟ್ಟ ಅಜ್ಜ ಕೊಟ್ಟೂರಪ್ಪಯ್ಯ,
ಶ್ರೀ ಕುಮಾರ ಶಿವಯೋಗಿಗಳ 12 ನೇ ವಯಸ್ಸಿನಲ್ಲಿ ಕಂತೆ ಭಿಕ್ಷೆಯ ಸಂದರ್ಭದಲ್ಲಿ ಶ್ರೀಗಳಿಗೆ ಅಪಮಾನಿಸಿದರೂ ಶ್ರೀಗಳ ಸ್ವಾಭಿಮಾನವನ್ನು ಜಾಗೃತಗೊಳಿಸಿದ ಜೋಯಿಸರಹಳ್ಳಿಯ ಶ್ರೀ ಭರಮಪ್ಪ,
ಕರ್ಜರಿ ಗ್ರಾಮದಲ್ಲಿ ಆಶ್ರಯಕೊಟ್ಟ ಶ್ರೀ ರಾಚಯ್ಯ ಹಿರೇಮಠ ಮತ್ತು ಮುಲ್ಕಿ ಪರೀಕ್ಷೆಯವರೆಗೆ ಶಿಕ್ಷಣ ಕೊಟ್ಟ ಶ್ರೀ ಮಹದೇವ ಪಂತ ಜೋಗಳೇಕರ,
ನಿಜಗುಣ ಶಿವಯೋಗಿಗಳ ಸಾಹಿತ್ಯದ ತಿರಳನ್ನು ಪ್ರಪ್ರಥಮವಾಗಿ ಶ್ರೀ ಕುಮಾರ ಶಿವಯೋಗಿಗಳಿಗೆ ಪರಿಚಯಿಸಿದ ಲಿಂಗದಹಳ್ಳಿಯ ಶ್ರೀ ಸಮಾಳದ ಬಸಯ್ಯ ನವರು,
ನಿಜಗುಣ ಶಿವಯೋಗಿಗಳ ಷಟ್ ಶಾಸ್ತ್ರ ಬೋಧಿಸಿದ ಶ್ರೀ ಸಿದ್ಧಾರೂಡರು,
ಇಷ್ಟ ಲಿಂಗದ ಮಹತ್ವವನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟ ಯಮ್ಮಿಗನೂರ ಶ್ರೀ ಜಡೆಸಿದ್ದರು,
ಸತತ ಹನ್ನೆರಡು ವರ್ಷ ಅನುಷ್ಠಾನಕ್ಕೆ ಜೊತೆಯಲ್ಲಿ ಕರೆದೋಯ್ದು ಯೋಗ,ಆಯುರ್ವೆದ,ಶಿವಯೋಗ ಮತ್ತು ಚಿನ್ಮಯ ದೀಕ್ಷೆ ನೀಡಿದ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು ,ಶ್ರೀ ಕುಮಾರ ಶಿವಯೋಗಿಗಳ ಭವ್ಯ ವ್ಯಕ್ತಿತ್ವದ ಶಿಲ್ಪಿಗಳು !.
ಶ್ರೀ ಕುಮಾರ ಶಿವಯೋಗಿಗಳ ಭವ್ಯ ವ್ಯಕ್ತಿತ್ವದ ಶಿಲ್ಪಿಗಳನ್ನು ಭಕ್ತಿಯಿಂದ ನೆನೆಯುತ್ತ , ಗುರುವಿನ ಮಹಾಗುರು ಪರಮ ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನ ಈ ಲೇಖನ.

ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು ಯಾರು ?
ಈ ಪ್ರಶ್ನೆಗೆ ಉತ್ತರ ಸರಳವಲ್ಲ.ಬಹುಶಃ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು , ಶ್ರೀ ಕುಮಾರ ಶಿವಯೋಗಿಗಳ ಗುರುಗಳಾಗದೇ ಹೋಗಿದ್ದರೆ, ಪ್ರಚಾರ ಪ್ರಿಯರಲ್ಲದ ಶಿವಯೋಗವೇ ಉಸಿರನ್ನಾಗಿಸಿಕೊಂಡಿದ್ದ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು ಬಯಲಿನಲ್ಲಿ ಬಯಲಾಗುತ್ತಿದ್ದರೇನೊ ?. ಋಷಿ ಮುನಿಗಳ ಚರಿತ್ರೆ ಮತ್ತು ಆರಂಭಿಕ ಜೀವನ ಮಾಹಿತಿಗಳು ಸಂಶೋಧಕನ ಸಂಶೋಧನೆಗೆ ಮೀರಿದ ಹಾಗೂ ಕಲ್ಪನೆಗೂ ಎಟುಕದ ಶೂನ್ಯ ಸಂಪಾದನೆ !. ಒಂದೇ ಒಂದು ಚಿಕ್ಕ 60 ಪುಟಗಳ ಕ್ರೌನ 1/8 ಆಕಾರದ ಪುಸ್ತಕ “ಲಿಂ.ಯಳಂದೂರು ಶ್ರೀ ಬಸವಲಿಂಗ ಸ್ವಾಮಿಗಳು” (ಪ್ರಕಾಶನ: ಶ್ರೀ ಜಗದ್ಗುರು ತೋಂಟದಾರ್ಯ ಮಠ ಅಣ್ಣಿಗೇರಿ) ಹೊರತುಪಡಿಸಿದರೆ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳ ನಿಖರ ಮಾಹಿತಿಯುಳ್ಳ ಚರಿತ್ರೆಯ ಪುಸ್ತಕಗಳಿಲ್ಲ. ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಕುರಿತು ಬಂದ ಹಲವು ಪುಸ್ತಕಗಳಲ್ಲಿ ಶ್ರೀ ಕುಮಾರ ಶಿವಯೋಗಿಗಳ ನಿಕಟವರ್ತಿಗಳು ಮತ್ತು ಅವರ ದರ್ಶನ ಮಾಡಿಕೊಂಡಿದ್ದ ಮೂವರು ಮಹನೀಯರ ಅಮೂಲ್ಯ ಪುಸ್ತಕಗಳನ್ನು ಈ ಲೇಖನಕ್ಕೆ ಆಕರ ಗ್ರಂಥಗಳನ್ನಾಗಿ ಬಳಸಿಕೊಳ್ಳಲಾಗಿದೆ. ಆ ಪುಸ್ತಕಗಳ ವಿವರ ಹೀಗಿವೆ.
1. ಕುಮಾರ ಬೆಳಗು : ಶ್ರೀ ಕಜ್ಜರಿ ಗುರುಮೂರ್ತಿ ಶಾಸ್ತ್ರಿಗಳು.
2. ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ: ಶ್ರೀ ದ್ಯಾಂಪುರ ಚೆನ್ನಕವಿಗಳು.
3. ಕಾರಣಿಕ ಕುಮಾರಯೋಗಿ: ಪೂಜ್ಯ ಶ್ರೀ .ಜ.ಚ.ನಿ.
ಜೊತೆಗೆ 1975 ರಲ್ಲಿ ಪ್ರಕಟವಾದ “ಹವಳ ಮುತ್ತು ಹನ್ನೊಂದು ” ಲೇ.ಪಂಡಿತ ಕಲ್ಲೂರು ಸಂಗಣ್ಣ.ಮತ್ತು ಶ್ರೀ ಹಾನಗಲ್ಲ ಕುಮಾರೇಶ ಚರಿತೆ : ಶ್ರೀ ಗುರುಕಂದ ಗ್ರಂಥಗಳು.

ಜನನ, ಬಾಲ್ಯ ಮತ್ತು ವಿದ್ಯಾಭ್ಯಾಸ

ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳ ತಂದೆ ತಾಯಿಗಳ ಕುರಿತಾಗಲಿ,ಜನನ ದಿನಾಂಕಗಳಾಗಲಿ ಎಲ್ಲಿಯೂ ದಾಖಲಾಗಿಲ್ಲ.
ಶ್ರೀ ಕಜ್ಜರಿ ಗುರುಮೂರ್ತಿ ಶಾಸ್ತ್ರಿಗಳು ಬರೆದಂತೆ ” ಯಳಂದೂರು ಸ್ವಾಮಿಗಳು ಪೂರ್ವದಲ್ಲಿ ಗದುಗಿನ ಶ್ರೀ ಜಗದ್ಗುರು ತೊಂಟದಾರ್ಯರ ಮಠದ ಮರಿಗಳಾಗಿದ್ದು ಯಾವುದೊ ಒಂದು ಕಾರಣದಿಂದ ವೈರಾಗ್ಯವನ್ನು ತಾಳಿ ದೇಶ ಪರ್ಯಟನ ಮಾಡುತ್ತ ಯಳಂದೂರು (ಮೈಸೂರು ಜಿಲ್ಲೆ ಯ ಕೊಳ್ಳೆಗಾಲ ಸಮೀಪದ) ವಿರಕ್ತಮಠಕ್ಕೆ ಅಧಿಕಾರಿಗಳಾಗಿದ್ದರು….”.

ಶ್ರೀ ದ್ಯಾಂಪುರ ಚೆನ್ನ ಕವಿಗಳು ತಮ್ಮ ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣದ ನಾಲ್ಕನೆಯ ಸಂಧಿಯಲ್ಲಿ
ವರ್ಣಿಸಿದಂತೆ
ಇವರು ಗದುಗಿನ ಜಗದ್ಗುರು ತೋಂಟದಾರ್ಯ ಮಠ-
ದವಿಕಲವಟೂತ್ತಂಸರಿರ್ದರಾದಿಯೋಳೊಂದು-
ನೆವದಿಂದ ವೈರಾಗ್ಯಮಂ ತೊಟ್ಟು ದೇಶಪರ್ಯಟನವೆಸಗುತ್ತ ಪೋಗಿ
ತವೆ ಯೆಳಂದೂರ ಮಠದಧಿಕಾರಮಂ ಪಡೆದು ಭುವನದೊಳು ನಿರ್ವಾಣಪದಹೇತುವಾದ ಜ್ಞಾ-
ನವನು ಬೋಧಿಸಿ ಪೊರೆದರಖಿಲ ಶರಣಾಗತರ್ಕಳನು ಕಾರುಣ್ಯದಿಂದ (35)

“ಲಿಂ.ಯಳಂದೂರು ಶ್ರೀ ಬಸವಲಿಂಗ ಸ್ವಾಮಿಗಳು” (ಪ್ರಕಾಶನ: ಶ್ರೀ ಜಗದ್ಗುರು ತೋಂಟದಾರ್ಯ ಮಠ ಅಣ್ಣಿಗೇರಿ) ಪುಸ್ತಕದ ಪುಟ ಸಂಖ್ಯೆ 49 ರಲ್ಲಿ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು ಮತ್ತು ಶ್ರೀ ಕುಮಾರ ಶಿವಯೋಗಿಗಳ ಸಂಭಾಷಣೆ ರೂಪದಲ್ಲಿ ಹೀಗೆ ಬರೆಯಲಾಗಿದೆ.
” ಈಗ ಗದುಗಿನಲ್ಲಿರುವ ಪೀಠ ಪರಂಪರೆಯಲ್ಲಿ 16 ನೆಯವರು, ಅವರ ಹೆಸರು ಶ್ರೀ ತೋಂಟದ ಸಿದ್ಧೇಶ್ವರ ಮಹಾ ಸ್ವಾಮಿಗಳು.
ಡಂಬಳ ಮಠದಲ್ಲಿ ಶಿವಾನುಭವ ಚರಮೂರ್ತಿಗಳು ಬಹಳ,ಅವರಲ್ಲಿ ನಾನೂ ಒಬ್ಬನು.ನಾನು ಅತಿ ಚಿಕ್ಕವನಾಗಿರುವಾಗ ಮಠಕ್ಕೆ ಕೊಡಲ್ಪಟ್ಟಿದ್ದರಿಂದ ನನ್ನ ತಾಯಿ-ತಂದೆಗಳ ಬಗ್ಗೆ ಮತ್ತು ನನ್ನ ಜನ್ಮಸ್ಥಳದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಮಕ್ಕಳಾಗದವರು ಹರಕೆ ಹೊತ್ತು ಮಕ್ಕಳಾದನಂತರ ಆ ಮಕ್ಕಳನ್ನು ತಮ್ಮ ಹರಕೆಯ ಪ್ರಕಾರ ಮಠಕ್ಕೆ ಸಲ್ಲಿಸುವದೊಂದು ರೂಢಿ.ಬಹುತರವಾಗಿ ನಾನೂ ಹಾಗೇ ಕೊಡಲ್ಪಟ್ಟಿರಬೇಕು. ಯೋಗ ಸಾಧನೆಗೆ ಏಕಾಂತವಾಸ ಮುಖ್ಯ .ಈ ಯೋಗದ ಮೇಲಿನ ವಿಶೇಷ ಆಸಕ್ತಿಯಿಂದ ಉದ್ದೇಶಪೂರ್ವಕವಾಗಿ ನಾವು ಯಾವುದೇ ಮಠಗಳಲ್ಲಿ ಇರದೇ ಯಳಂದೂರಲ್ಲಿ ಆಶ್ರಮ ಮಾಡಿ ಇದ್ದೆವು ”

ಲಭ್ಯ ವಿರುವ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳ ಕಪ್ಪು ಬಿಳುಪಿನ ಒಂದು ಭಾವಚಿತ್ರ (ಮುಖಪುಟದಲ್ಲಿ ಬಳಸಿದ ಚಿತ್ರ .80 ವರ್ಷಗಳ ಆಸುಪಾಸಿನ ವಯೋಮಿತಿಯಲ್ಲಿ ತಗೆಯಿಸಿರಬಹುದಾದ ಚಿತ್ರ 1885-95 ಗಳ ಮಧ್ಯದಲ್ಲಿ) ಮತ್ತು ಶ್ರೀ ಗಳು ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಲಿಂಗೈಕ್ಯರಾದ ವರ್ಷ 1894 ಪುಷ್ಯ ಶು.5 (“ಹವಳ ಮುತ್ತು ಹನ್ನೊಂದು ” ಲೇ.ಪಂಡಿತ ಕಲ್ಲೂರು ಸಂಗಣ್ಣ ಪುಟ ಸಂಖ್ಯೆ 148) ಹಾಗು 1895 (ಶ್ರೀ ಹಾನಗಲ್ಲ ಕುಮಾರೇಶ ಚರಿತೆ : ಶ್ರೀ ಗುರುಕಂದ ಪುಟ ಸಂಖ್ಯೆ 279).ಗಳನ್ನು ಗಮನಿಸಿ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು ಕ್ರಿ,ಶ. 1810-15 ನೇ ವರ್ಷಗಳ ಮಧ್ಯದಲ್ಲಿ ಡಂಬಳ ಅಥವಾ ಸುತ್ತು ಮುತ್ತಲಿನ ಗ್ರಾಮಗಳಲ್ಲಿ ಜನಿಸಿರಬಹುದಾಗಿದೆ.ಇದೊಂದು ದೊರಕಿದ ಮಾಹಿತಿಗಳ ಆಧಾರದ ಮೇಲೆ ಲೇಖಕನ ಊಹೆಯೇ ಹೊರತು ನಿಖರ ಮಾಹಿತಿಯಲ್ಲ.

ಗದುಗಿನ ಸಮೀಪವಿರುವ ಡಂಬಳವು ಧಾರ್ಮಿಕವಾಗಿ ಹೆಸರು ಪಡೆದುಕೊಂಡ ಸ್ಥಳ .ಶ್ರೀ ಅರ್ಧನಾರೀಶ್ವರ ಸ್ವಾಮಿಗಳ ಗದ್ದುಗೆಯ ಸ್ಥಾಪನೆಯಿಂದ ಖ್ಯಾತವಾಗಿದೆ. 1675-1725 ರ ಅವಧಿಯಲ್ಲಿ ಶ್ರೀ ತೋಂಟದ ಸಿದ್ಧಲಿಂಗೇಶ್ವರ ಯತಿಗಳ ನಂತರ ಬೆಳೆದ ಪರಂಪರೆಯ ಒಂಬತ್ತನೆಯ ಗುರುಗಳಾದ ಶ್ರೀ ಅರ್ಧನಾರೀಶ್ವರ ಲೋಕಸಂಚಾರಮಾಡುತ್ತ ಡಂಬಳಕ್ಕೆ ಬಂದು ಮಠವನ್ನು ಸ್ಥಾಪಿಸಿರುವರು. ಡಂಬಳ ಮಠವು ಗದುಗಿನ ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಮೂಲಮಠವಾಗಿದ್ದು , ಶ್ರೀ ಕೆಳದಿ ಅರಸರ ನೆರವಿನಿಂದ ಶ್ರೀಮಂತಗೊಂಡು ಐತಿಹಾಸಿಕ ಹೆಸರನ್ನು ಪಡೆದುಕೊಂಡಿರುತ್ತದೆ, ( ಉಲ್ಲೇಖ: ಕಲ್ಯಾಣದ ಹಾದಿ ಸಂಪಾದಕ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ )

ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳ ವಿದ್ಯಾಭ್ಯಾಸ ಕುರಿತು ಆಕರ ಪುಸ್ತಕಗಳ ಆಧಾರದ ಮೇಲೆ ನೋಡುವದಾದರೆ ಅವರು ಡಂಬಳದಲ್ಲಿ ಚರಮೂರ್ತಿಗಳಾಗಿದ್ದ ಸಂಧರ್ಭದಲ್ಲಿ ನಿರಕ್ಷರಿಗಳಾಗಿದ್ದರೂ ಅವರಲ್ಲಿ ಸ್ವಯಂ ಪ್ರಜ್ಞೆ ಇತ್ತು. ಯೋಗಸಾಧನೆಯ ಅನ್ವೇಷಣೆ ಮಾಡುತ್ತ ಲೋಕ ಸಂಚಾರ ಮಾಡುತ್ತ ಕೊಳ್ಳೆಗಾಲ ತಾಲೂಕ ಚಿಲಕವಾಡಿ ಗ್ರಾಮದ ಹತ್ತಿರವಿರುವ ಶಂಭುಲಿಂಗನ ಬೆಟ್ಟದಲ್ಲಿ ಸತತ ಅನುಷ್ಠಾನ ಮಾಡುತ್ತ ನಿಜಗುಣ ಶಿವಯೋಗಿಗಳನ್ನು ಸಾಕ್ಷಾತ್ಕರಿಸಿಕೊಂಡು ಶಂಭುಲಿಂಗನ ಬೆಟ್ಟದಲ್ಲಿದ್ದ ಸಹ ಸಾಧಕರ ಜೊತೆಗೂಡಿ ಅಕ್ಷರಗಳನ್ನು ಕಲಿತು ನಿಜಗುಣ ಶಿವಯೋಗಿಗಳ ಸಮಗ್ರ ಷಟ್ ಶಾಸ್ತ್ರ,ಅಯುರ್ವೇದ ಶಾಸ್ತ್ರ ಮತ್ತು ಪತಂಜಲಿ ಯೋಗ ಶಾಸ್ತ್ರಗಳನ್ನು ಅಧ್ಯಯನ ಮಾಡಿಕೊಂಡವರು.

ಯಳಂದೂರು ವಿರಕ್ತಮಠ (ಕಾರಾಪುರ) ಪೀಠಾಧಿಪತಿಗಳಾಗಿ ಪೀಠಾರೋಹಣ.

ಯಳಂದೂರು ವಿರಕ್ತಮಠ (ಕಾರಾಪುರ)ವು ಚಾಮರಾಜನಗರ ಜಿಲ್ಲೆಯ ಯಳಂದೂರು ಸುವರ್ಣವತಿ ನದಿಯ ದಂಡೆಯ ಮೇಲೆ ಕಂಗೊಳಿಸುವ ನಿಸರ್ಗ ಸೌಂದರ್ಯದ ಮಧ್ಯದಲ್ಲಿ ಸ್ಥಾಪನೆ ಗೊಂಡಿದೆ. ವೀರಶೈವ ವಿರಕ್ತ ಸಂಪ್ರದಾಯದ ಈ ಮಠ ಹಲವು ವಿಶೇಷತೆಗಳಿಂದ ಕೂಡಿದೆ. ಯಳಂದೂರಿನ ವಿರಕ್ತಮಠ 126 ಮಠಗಳನ್ನೊಳಗೊಂಡ ಮಠ.ವಿರಕ್ತ ಮಠದ ಉತ್ತರಕ್ಕೆ ಎಡಭಾಗದಲ್ಲಿ 63 ಹುಲ್ಲಿನ ಮಂಟಪಗಳು .ಬಲಭಾಗಕ್ಕೆ 63 ಕಲ್ಲಿನ ಮಂಟಪಗಳು ನಿರ್ಮಿತವಾದ ಐತಿಹ್ಯವಿದೆ.ಕಲ್ಲಿನಿಂದ ನಿರ್ಮಿತವಾದ ಗದ್ದುಗೆ ಮಠವು ಚೋಳ ಸಾಮ್ರಾಜ್ಯದ ಕೊನೆಯ ರಾಜ ಮೂರನೆ ರಾಜೇಂದ್ರ (ಕ್ರಿ.ಶ. 1279 )ರಿಂದ ನಿರ್ಮಾಣಗೊಂಡು ಕಾಲಂತರದಲ್ಲಿ ಮೈಸೂರು ಒಡೆಯರಿಂದ ದಾನದತ್ತಿಗಳನ್ನು ಪಡೆದು ಯಳಂದೂರು ತಾಲೂಕಿನ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ.
“ಕಾರಾಪುರ” ಹೆಸರಿನ ಹಿನ್ನಲೆ : 126 ಮಠಗಳು ಜ್ಞಾನಿಗಳು ಮತ್ತು ತಪೋನಿಷ್ಠರನ್ನೊಳಗೊಂಡು 12 ನೇ ಶತಮಾನದ ಸಾಮಾಜಿಕ ಚಳುವಳಿಯ ಫಲಶೃತಿಯಾಗಿ ಧರ್ಮಜಾಗೃತಿಯ ಯೋಜನೆಗಳ ಕಾರ್ಯಾಲೋಚನೆ ಮಾಡುವ ಕೇಂದ್ರವಾಗಿತ್ತು .ಕಾರ್ಯಾಲೋಚನೆ ಎಂಬ ಶಬ್ದ ಕಾಲಕ್ರಮೇಣ “ಕಾರಾಪುರ” ವಾಗಿ ಪರಿವರ್ತನೆಯಾಯಿತು ( ಉಲ್ಲೇಖ : ಕರ್ನಾಟಕದ ವೀರಶೈವ ಮಠಗಳು .ಲೇ ಶ್ರೀ ಚಂದ್ರಶೇಖರ ನಾರಾಣಾಪುರ).

ಯಳಂದೂರು ವಿರಕ್ತಮಠ ಪೀಠ ಪರಂಪರೆಯ ಲಭ್ಯವಿರುವ ಮಾಹಿತಿಗಳ ಪ್ರಕಾರ 12 ನೇ ಪೀಠಾಧಿಪತಿಗಳಾಗಿ ಶ್ರೀ ಬಸವಲಿಂಗ ಶಿವಯೋಗಿಗಳು ಅಧಿಕಾರ ಸ್ವೀಕರಿಸಿಕೊಂಡಿರುವರು .ತಲೆಮಾರು ಲೆಕ್ಕ ಹಾಕಿಕೊಂಡರೆ ಬಹುಶಃ ಕ್ರಿ.ಶ. 1850 ರಲ್ಲಿ ಅಧಿಕಾರ ಸ್ವೀಕರಿಸಿಕೊಂಡಿರಬೇಕು. ಯಳಂದೂರುನಿಂದ 12 ಕಿ.ಮಿ. ದೂರದಲ್ಲಿರುವ ಚಿಲಕವಾಡಿ ಗ್ರಾಮದ ಶಂಭುಲಿಂಗ ಬೆಟ್ಟದಲ್ಲಿ ಸತತ ನಿಜಗುಣಶಿವಯೋಗಿಗಳ ಕೃತಿಗಳ ಅಧ್ಯಯನ ಮತ್ತು ನಿರಂತರ ಅನುಷ್ಠಾನದಲ್ಲಿ ನಿರತರಾಗಿದ್ದ ಬಸವಲಿಂಗ ಶಿವಯೋಗಿಗಳನ್ನು ಭಕ್ತರು ಬಹುಶಃ ಒತ್ತಾಯಪೂರ್ವಕವಾಗಿ ಯಳಂದೂರು ವಿರಕ್ತಮಠದ ಅಧಿಕಾರ ಕೊಟ್ಟಿರಬಹುದು.ಏಕೆಂದರೆ ಡಂಬಳ ಸಂಸ್ಥಾನಮಠವನ್ನೇ ಯೋಗದ ಅನ್ವೇóಷಣೆಗೆ ತ್ಯಾಗ ಮಾಡಿ ಲೋಕಸಂಚಾರಿಯಾಗಿದ್ದ ಬಸವಲಿಂಗ ಶಿವಯೋಗಿಗಳಿಗೆ ಮಠದ ಅಧಿಕಾರದ ಅಪೇಕ್ಷೆಯಾಗಲಿ ಅಥವಾ ಅವಶ್ಯಕತೆಯಾಗಲಿ ಇರಲಿಲ್ಲ. ಅಲ್ಲಮಪ್ರಭುಗಳು ಮತ್ತು ಮಲೆಯಮಹದೇಶ್ವರರು ಅನುಷ್ಠಾನಮಾಡಿದ ಪವಿತ್ರ ನೆಲ ಯಳಂದೂರು ವಿರಕ್ತಮಠ,ಶ್ರೀ ಬಸವಲಿಂಗ ಶಿವಯೋಗಿಗಳನ್ನ ಅಯಸ್ಕಾಂತದಂತೆ ಸೆಳದಿರಬಹುದು.
ಯಳಂದೂರು ವಿರಕ್ತಮಠ (ಕಾರಾಪುರ) ಪರಂಪರೆ:
1. ಶ್ರೀ.ಮ.ನಿ.ಪ್ರ. ಚಾಮರಾಜ ದೇಶಿಕೇಂದ್ರ ಸ್ವಾಮಿಗಳು (ಕರ್ತೃ ಗುರುಗಳು)
2. ಶ್ರೀ.ಮ.ನಿ.ಪ್ರ. ಮಹಾಲಿಂಗ ಸ್ವಾಮಿಗಳು
3. ಶ್ರೀ.ಮ.ನಿ.ಪ್ರ. ಗುರುಸಿದ್ದದೇಶಿಕೇಂದ್ರಸ್ವಾಮಿಗಳು
4. ಶ್ರೀ.ಮ.ನಿ.ಪ್ರ. ಶಿವಕುಮಾರೇಂದ್ರ ಸ್ವಾಮಿಗಳು
5. ಶ್ರೀ.ಮ.ನಿ.ಪ್ರ. ಚಂದ್ರಶೇಖರಸ್ವಾಮಿಗಳು
6. ಶ್ರೀ.ಮ.ನಿ.ಪ್ರ. ಶಿವಲಿಂಗಸ್ವಾಮಿಗಳು
7. ಶ್ರೀ.ಮ.ನಿ.ಪ್ರ. ಮಹಾಂತಸ್ವಾಮಿಗಳು
8. ಶ್ರೀ.ಮ.ನಿ.ಪ್ರ. ಚನ್ನಬಸಪ್ಪಸ್ವಾಮಿಗಳು
9. ಶ್ರೀ.ಮ.ನಿ.ಪ್ರ. ಮಹಾಲಿಂಗ ಸ್ವಾಮಿಗಳು
10. ಶ್ರೀ.ಮ.ನಿ.ಪ್ರ. ಶಾಂತಲಿಂಗಸ್ವಾಮಿಗಳು
11. ಶ್ರೀ.ಮ.ನಿ.ಪ್ರ. ಪ್ರಭುಲಿಂಗಸ್ವಾಮಿಗಳು
12. ಶ್ರೀ.ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು (ಚರಿತ್ರೆ ನಾಯಕರು)
13. ಶ್ರೀ.ಮ.ನಿ.ಪ್ರ. ಸಿದ್ಧಲಿಂಗಸ್ವಾಮಿಗಳು
14. ಶ್ರೀ.ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು
15. ಶ್ರೀ.ಮ.ನಿ.ಪ್ರ. ಬಸವರಾಜ ಸ್ವಾಮಿಗಳು (ಈಗಿನ ಗುರುಗಳು)

ಸಾಧನೆ ಮತ್ತು ಕೊಡುಗೆಗಳು.

ಲೋಕಸಂಚಾರಿಗಳಾಗಿ ಪರ್ಯಟನೆ ಮಾಡುತ್ತ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ,ವಿವೇಕಚಿಂತಾಮಣಿ,ಅನುಭವಸಾರ, ಪರಮಾನುಭವ ಬೋಧೆ, ಪರಮಾರ್ಥ ಗೀತೆ,ಪರಮಾರ್ಥ ಪ್ರಕಾಶಿಕೆ ಗ್ರಂಥಗಳನ್ನು ಭಕ್ತರಿಗೆ ಪರಿಚಯಿಸುತ್ತ ವೀರಶೈವ ಧರ್ಮದ ಆಚಾರ ವಿಚಾರಗಳನ್ನು ಪ್ರಸಿದ್ಧಿ ಪಡಿಸುವ ಮಹಾಕಾರ್ಯವನ್ನು ಶ್ರೀ ಬಸವಲಿಂಗ ಶಿವಯೋಗಿಗಳು ಬಹು ಯಶಸ್ವಿಯಾಗಿ ನಿರ್ವಹಿಸಿದರು. .

1885 ರಲ್ಲಿ ಹುಬ್ಬಳ್ಳಿಯ ಸಿದ್ಧಾರೂಡರಲ್ಲಿ ನಿಜಗುಣ ಶಿವಯೋಗಿಗಳ ಕೃತಿಗಳ ಚರ್ಚೆಗೆ ಬಂದಾಗ ಶ್ರೀ ಕುಮಾರ ಶಿವಯೋಗಿಗಳನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, ಸತತ 12 ವರ್ಷಗಳ ಕಾಲ ವಿವಿಧ ತರಬೇತಿ ಮತ್ತು ಚಿನ್ಮಯ ದೀಕ್ಷೆ ನೀಡಿ ಸಮಾಜಕ್ಕೆ ನೀಡಿದ್ದು ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳ ಬಹುದೊಡ್ಡ ಕೊಡುಗೆಯಾಗಿದೆ.

1885 ರಲ್ಲಿ ಇಷ್ಟಲಿಂಗ ಪೂಜೆಯ ಸಂದೇಹ ನಿವಾರಣೆಗೊಸ್ಕರ ತಮ್ಮೆದುರು ನಿಂತುಕೊಂಡಿದ್ದ ಶ್ರೀ ಕುಮಾರ ಶಿವಯೋಗಿಗಳಿಗೆ ಇಷ್ಟಲಿಂಗದ ಮಹತ್ವವನ್ನು ಸಂಜ್ಞೆ ಮೂಲಕ ತಿಳಿಸಿದ ಯಮ್ಮಿಗನೂರು ಜಡೆಸಿದ್ಧರು,ಶ್ರೀ ಕುಮಾರ ಶಿವಯೋಗಿಗಳಿಗೆ “ಎಲ್ಲಿದ್ದಿಯೊ ಅಲ್ಲಿಗೆ ಹೋದರಾಯಿತು”ಎಂದು ಮೂರು ಬಾರಿ ನುಡಿದು ಅಪ್ಪಣೆ ನೀಡಿದರು.ಜಡೆಸಿದ್ಧರ ಆ ಅಪ್ಪಣೆಯನ್ನು ಮೀರದೆ ಶ್ರೀ ಕುಮಾರ ಶಿವಯೋಗಿಗಳು ಮರಳಿ ಹುಬ್ಬಳ್ಳಿಗೆ ಬಂದು ಸಿದ್ಧಾರೂಢರಲ್ಲಿ ತಮ್ಮ ಅಭ್ಯಾಸವನ್ನು ಮುಂದುವರೆಸಿದರು.

“ಎಲ್ಲಿದ್ದಿಯೊ ಅಲ್ಲಿಗೆ ಹೋದರಾಯಿತು” ಅಪ್ಪಣೆಯ ಗುಟ್ಟು ಲೋಕಸಂಚಾರಿಗಳಾದ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳ ಸಿದ್ಧಾರೂಢ ಮಠದ ಸಂದರ್ಶನ ಸಂಧರ್ಬದಲ್ಲಿ ರಟ್ಟಾಯಿತು. ಜ.ಚ.ನಿ.ಯವರ “ಕಾರುಣಿಕ ಕುಮಾರಯೋಗಿ”ಪುಸ್ತಕದ ಪುಟ ಸಂಖ್ಯೆ 28 ರ “ಯೋಗ್ಯ ಗುರುವಿನ ಭಾಗ್ಯ” ತಲೆಬರಹದ ಲೇಖನದಲ್ಲಿ ಅತ್ಯಂತ ಸುಂದರವಾಗಿ ವರ್ಣಿತವಾಗಿದೆ. ಯೋಗ್ಯ ಗುರುವಿನ ಭಾಗ್ಯ ಲೇಖನದ ಭಾವಪೂರ್ಣ ಕೆಲವು ಸಾಲುಗಳು ಹೀಗಿವೆ.
ಶ್ರೀ ಕುಮಾರ ಶಿವಯೋಗಿಗಳು ಅಧ್ಯಯನ ಮಾಡುತ್ತಿದ್ದ ಸಿದ್ಧಾರೂಢರ ಶಿಷ್ಯರೆಲ್ಲರೂ ಇಷ್ಟಲಿಂಗವನ್ನು ಬಿಟ್ಟು ಬಿಟ್ಟಿದ್ದರು.ಅವರು ವೇದಾಂತಬಲ್ಲಿದವರಾಗಿದ್ದರು. ಈ ಒಂದು ಕೊರತೆಯಿಂದ ಶ್ರೀ ಕುಮಾರ ಶಿವಯೋಗಿಗಳು ಯೋಚನಾಕ್ರಾಂತರಾಗಿದ್ದರು.ಅವರ ಮನಸ್ಸು ಅಲ್ಲಿಂದ ಹಿಂಜರಿಯುತ್ತಿತ್ತು.ಯೋಗ್ಯ ಗುರುವಿನ ಬರುವಿಕೆಯನ್ನು ಹಾರೈಸುತ್ತಿತ್ತು. “ಇಲ್ಲಿಯೆ ಇರು” ಎಂದರ್ಥದ ಜಡೆಸಿದ್ಧರ ಅಪ್ಪಣೆಯಿಂದ ಇಲ್ಲಿಯೇ ನನಗೆ ಸದ್ಗುರುವಿನ ಸಂದರ್ಶನ ಭಾಗ್ಯ ಲಭಿಸುತ್ತದೆಯಂಬ ಖಚಿತ ನಂಬಿಕೆಯೊಂದಿಗೆ ಶ್ರೀ ಕುಮಾರ ಶಿವಯೋಗಿಗಳು ಕಾಯುತ್ತ ಕುಳಿತಿದ್ದರು.

ಹೀಗಿರಲು ಒಂದು ದಿನ ಆಕಸ್ಮಿಕವಾಗಿ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳವರು ಆ ಪ್ರಾಂತದಲ್ಲಿ ಪ್ರಯಾಣಮಾಡುತ್ತ ಹುಬ್ಬಳ್ಳಿಗೆ ಬಂದರು.ಅದೇ ಊರಿನಲ್ಲಿ ಪ್ರಸಿದ್ಧರಾದ ಆರೂಢರಿಗೆ ನಿಜಗುಣರ ಕೃತಿಗಳಲ್ಲಿ ಪರಿಣಿತಿಯನ್ನು ಕೇಳಿ ನೋಡಿ ಸಂತೋಷಿಸಬೇಕೆಂದು ಆರೂಢರಲ್ಲಿಗೆ ಆಗಮಿಸಿದರು.ಆರೂಢರೊಡನೆ ಅಧ್ಯಾತ್ಮ ಜಿಜ್ಞಾಸೆ ಆರಂಭವಾಯಿತು.ಶ್ರೀಗಳ ಅಸ್ಖಲಿತವಾದ ಅನನ್ಯ ಅಸಾಧರಣವಾದ ಅನುಭವವನ್ನು ಕಂಡು ಆರೂಢರಿಗೆ ಅಚ್ಚರಿಯಾಯಿತು.ತಾವು ಮೌನ ತಾಳಿ ತಮ್ಮ ಶಿಷ್ಯರನ್ನು ವಾದಕ್ಕೆ ಮುಂದುಮಾಡಿದರು. ಶಿಷ್ಯರಲ್ಲಿ ಅಗ್ರಗಣ್ಯರಾದ ಶ್ರೀ ಕುಮಾರ ಶಿವಯೋಗಿಗಳು ಚುರುಕಾಗಿ ಚರ್ಚೆ ಮಾಡಿದರು.ಚರ್ಚೆಯಲ್ಲಿನ ಅಪಕ್ವತೆಯನ್ನು ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳವರು ಕಂಡುಕೊಂಡರು.ಬರೀ ವಾದ ವಿಮರ್ಶೆಯ ಹೊರತು ಆಳ ಅನುಭವದ ಹುರುಳಿಲ್ಲ.ಕೇವಲ ಬೌದ್ಧಿಕವಾದವು ಆತ್ಮಶಾಂತಿಗೆ ಕಾರಣವಲ್ಲ ಎಂದು ಹೇಳಿ ಹೊರಗೆ ಬಂದು ಒಂದು ತಂಬಿಗೆಯನ್ನು ಕೇಳಿದರು. ಶ್ರೀಗಳ ಅನುಭವಕ್ಕೆ ಮೆಚ್ಚಿದ ಶ್ರೀ ಕುಮಾರ ಶಿವಯೋಗಿಗಳವರೇ ತಂಬಿಗೆಯನ್ನು ತೆಗೆದುಕೊಂಡು ಬಂದರು.ಅವರೊಡನೆ ಬಹಿರ್ದೇಶಕ್ಕೆ ತೆರಳುತ್ತ ತಮ್ಮ ಹಿಂದೆ ಬರುತ್ತಿದ್ದ ಶಿಷ್ಯನ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು.ಅಷ್ಟರಲ್ಲಿ ಜಲಾಶಯವೋಂದು ಹತ್ತಿರ ಕಂಡಿತು .ಶ್ರೀಗಳು ತಂಬಿಗೆಯನ್ನು ತೆಗೆದುಕೊಂಡು ಹೋಗಿ ಬಂದು ಹಸ್ತ ತೊಳೆದರು. ಹಲ್ಲುಜ್ಜಲು ಕಡ್ಡಿ ಯೊಂದನ್ನು ತರಲು ಹೇಳಿದರು. ಆರೂಢರ ಶಿಷ್ಯ ವೃತ್ತಿಯಲ್ಲಿದ್ದ ಶ್ರೀ ಕುಮಾರ ಶಿವಯೋಗಿಗಳಿಗೆ ಹಲ್ಲು ಕಡ್ಡಿಯ ಪರಿಚಯವಿರಲಿಲ್ಲ. ಅನುಮಾನಿಸುತ್ತ ನಾಲ್ಕು ಬೆರಳುದ್ದದ ಕಡ್ಡಿಯನ್ನು ತಂದುಕೊಟ್ಟರು. ಅದನ್ನು ಶ್ರೀಗಳು ನೋಡಿ “ತಮ್ಮಾ ನಿನ್ನ ಬುದ್ದಿ ಯೂ ಸಹ ಇಷ್ಟೇ ಉದ್ದ ಇದೆ. ಅದ್ವೈತದಲ್ಲಿ ಮುಳುಗಿದ್ದ ನಿಮಗೆ ಬಾಹ್ಯ ಶೀಲಾಚರಣೆಯ ಅರಿವಿಲ್ಲ.ಬಾಹ್ಯ ಶೌಚಾಚರಣೆಯ ಮಾಡದವನು ಆತ್ಮ ನನ್ನು ಅರಿತು ಫಲವಿಲ್ಲ. ತಾನು ಶುಚಿಯಾಗಿದ್ದು ಮನೆಯ ಮೂಲೆಗಳಲ್ಲಿ ಅಶುಚಿಯಾಗಿದ್ದರೇ ಸಾಕೇನು ? ತನ್ನ ಮನೆ ಶುಚಿಯಾಗಿರಬೇಡವೆ? ತಾನು ಶುಚಿಯಾಗಿದ್ದರೆ ಆರೋಗ್ಯ ಬರುವುದೇನು ? ತಾನು ತನ್ನ ಮೈ ತೊಳೆದು ಬಿಳಿಯಬಟ್ಟೆಯನ್ನು ತೊಡುವಂತೆ ಮನೆಯ ಶುಭ್ರತೆ ಮಾಡಿ ಸುಣ್ಣ ಬಣ್ಣ ಬಳಿದರಲ್ಲವೆ? ಹಾಗೆ ಆತ್ಮನಿಗೆ ಅರುವಿನ ಬೆಳಗು ಒಂದಿದ್ದರೆ ಸಾಲದು. ಶರೀರೇಂದ್ರಿಯಗಳು ಶುಭ್ರವಾಗಿರಬೇಕು. ಸುಣ್ಣ ಬಣ್ಣ ಬಳಿಯುವ ಕುಂಚು ಎಷ್ಟುದ್ದವಿದ್ದರೆ ಲೇಸೆಂಬುದನ್ನು ತಿಳಿಯಬೇಡವೆ? ಹಾಗೆ ಹಲ್ಲುಜ್ಜುವ ಕಡ್ಡಿ ಹನ್ನೆರಡು ಅಂಗುಲ ಉದ್ದಿರಬೇಕು ಇದು ಶಾಸ್ತ್ರ,ಆತ್ಮ ವಿಚಾರ ಮಾತ್ರ ಹೇಳುವುದು ಶಾಸ್ತ್ರವಲ್ಲ.ದೇಹಾತ್ಮಗಳ ಆಚಾರ ವಿಚಾರಗಳೆರಡನ್ನು ಹೇಳುವುದೇ ಶಾಸ್ತ್ರ, ಶರೀರೆಂದ್ರಿಯಗಳನ್ನು ಮೋಹ ತೈಜಿಸುವುದೆಂದರೆ ನೀವೆಲ್ಲ ತಿಳಿದಿರುವಂತೆ ಶರೀರೆಂದ್ರಿಯಗಳನ್ನು ಕೊಳೆಯಾಗಿ ಇರಿಸುವದಲ್ಲ. ಶೌಚ-ಸ್ನಾನ,ಹಲ್ಲುಜ್ಜುವಿಕೆ ಮುಂತಾದ ಬಾಹ್ಯ ಶೌಚಾಚಾರಗಳನ್ನು ಯಥಾವಿದಿಯಾಗಿ ಆಚರಿಸಲೇಬೇಕು.ಆಚರಿಸದೇ ಇರುವದರಿಂದ ನಿಮೆಗೆಲ್ಲ ಹಲ್ಲುಜ್ಜುವ ಕಡ್ಡಿ ಎಷ್ಟಿರಬೇಕೆಂದು ಗೊತ್ತಿಲ್ಲ.”
ಈ ನೇರ ಮತ್ತು ಕಠೋರ ಮಾತುಗಳನ್ನು ಕೇಳಿದ ಶ್ರೀ ಕುಮಾರ ಶಿವಯೋಗಿಗಳವರ ಮನಸ್ಸು ಪರಿವರ್ತನೆಯಾಯಿತು.ಶಾರೀರಿಕ ಶೌಚವಿಧಾನವನ್ನೇ ಅರಿಯದ ಆತ್ಮ ವಿಚಾರದಿಂದೇನೂ ತಿರುಳಿಲ್ಲ ಎಂಬ ವಾದ ಶ್ರೀ ಕುಮಾರ ಶಿವಯೋಗಿಗಳವರ ಮನಸ್ಸಿಗೆ ಅಚ್ಚೋತ್ತಿದಂತಾಯಿತು.ಅದನರಿಯಲು ಉತ್ಸುಕಗೊಂಡರು.ತಮ್ಮನ್ನು ಶಿಷ್ಯನಾಗಿ ಸ್ವೀಕರಿಸಿಕೊಳ್ಳಲು ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳವರಲ್ಲಿ ಪ್ರಾರ್ಥಿಸಿಕೊಂಡರು. ಯೋಗದುರಂಧರರಾದ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು ಮೊದ ಮೊದಲಿಗೆ ಶ್ರೀ ಕುಮಾರ ಶಿವಯೋಗಿಗಳವರ ಶಿಷ್ಯತ್ವದ ಅಹವಾಲನ್ನು ನಿರಾಕರಿಸಿ ” ತಮ್ಮಾ ನಮ್ಮ ಸೇವೆ ತೀರ ಕಠಿಣವಾದುದು,ನೀನಾದರೊ ಆರೂಢರ ಶಿಥಿಲಾಚಾರ ಶಿಕ್ಷಣದಲ್ಲಿದ್ದವನು.ಕಷ್ಟದ ಸೇವೆಗೆ ಒಳಪಟ್ಟು ತೊಳಲಬೇಕಾದೀತು !. ತುಂಬಾ ವಿಚಾರಿಸಿ ಹೇಳು ” ಎನ್ನಲು ಶ್ರೀ ಕುಮಾರ ಶಿವಯೋಗಿಗಳವರ ಕಣ್ಣಲ್ಲಿ ನೀರೂರಿ “ಮಹಿಮರೆ ,ಶಿವಯೋಗದ ಕಟ್ಟುಗಳು ಎಷ್ಟೇ ಕಷ್ಟದಾಯಕಗಳಾಗಿದ್ದರೂ ಸಹಿಸಬಲ್ಲೆನು,ಸೇವಿಸಬಲ್ಲೆನು ತಮ್ಮೊಡನೆ ಬರಲು ತಮ್ಮ ಶಿಷ್ಯನಾಗಿರಲು ಅಪ್ಪಣೆ ಆಗಿಯೇ ತೀರಬೇಕೆಂದು ಸಾಷ್ಟಾಂಗ ನಮಸ್ಕಾರ ಮಾಡಿದರು.ಶ್ರೀ ಕುಮಾರ ಶಿವಯೋಗಿಗಳವರ ದೃಡ ನಿಶ್ಚಯ ಮತ್ತು ಸತ್ಯ ಸಂಕಲ್ಪವನ್ನು ಅಂತಃಚಕ್ಷುಗಳಿಂದ ಕಂಡು ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು ಶ್ರೀ ಕುಮಾರ ಶಿವಯೋಗಿಗಳವರನ್ನು ಶಿಷ್ಯನನ್ನಾಗಿ ಪರಿಗ್ರಹಿಸಿದರು. ಈ ಅಭೂತಪೂರ್ವ ಮತ್ತು ಚಾರಿತ್ರಿಕ ಶಿಷ್ಯತ್ವ ಪರಿಗ್ರಹಣವನ್ನು ಶ್ರೀ ದ್ಯಾಂಪುರ ಚೆನ್ನ ಕವಿಗಳು ತಮ್ಮ ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣದ ನಾಲ್ಕನೆಯ ಸಂಧಿಯಲ್ಲಿ ಅತ್ಯಂತ ಸುಂದರವಾಗಿ ವರ್ಣಿಸಲ್ಪಟ್ಟಿರುತ್ತದೆ.
ವಿನಯಂ ಸಾಷ್ಟಾಂಗವೆರಗಿ ಮಹನೀಯ ನಿ-
ಮ್ಮನುಪಮಾಚಾರಂಗಳೆನಿತು ಬಿಗುವಿರ್ದೊಡುಂ
ಸನುಮತದೊಳಾಚರಿಸವೆನು ಕರುಣಿಸೆನಲಾಶ್ರಯಂಗೊಟ್ಟರಾಯತಿಗಳು
ಮನಮೊಪ್ಪಿ ಸಂಶಯಾಂಬೋಧಿಯಂ ದಾಂಟಿದೆನು
ಘನಚಿತ್ಕ್ರಿಯಾಮಾರ್ಗಮಂ ಪಿಡಿಯಲಾದೆನಾ-
ನೆನುತ ಬಸವೇಶ್ವರಾದಿಪ್ರಮಥರಂ ನೆನೆದು ಬಿಟ್ಟನಾರೂಢಮಠವ (45).

ಶ್ರೀ ಬಸವಲಿಂಗ ಶಿವಯೋಗಿಗಳಿಗೆ ಶ್ರೀ ಕುಮಾರ ಶಿವಯೋಗಿಗಳವರನ್ನು ಕಂಡು ಅರಸುವ ಬಳ್ಳಿ ಕಾಲ್ತೊಡಕಿದಂತಾಗಿ ತಮ್ಮ ಅಂತರಂಗದಲ್ಲಿ ಶ್ರೀ ಕುಮಾರ ಶಿವಯೋಗಿಗಳವರಿಗೆ ಹಿರಿದಾದ ಸ್ಥಾನಕೊಟ್ಟರು. ಪೂರ್ವಜನ್ಮದ ಪುಣ್ಯವೆಂಬಂತೆ ಎರಡು ಆತ್ಮಗಳು ಒಂದಾಗಿ ಗುರು-ಶಿಷ್ಯರ ರೂಪದಲ್ಲಿ ಒಬ್ಬರನೊಬ್ಬರು ಕಂಡಂತಾಯಿತು. ನಿಬ್ಬೆರಗೊಂಡ ಶ್ರೀ ಕುಮಾರ ಶಿವಯೋಗಿಗಳವರು ಗುರುವಿನ ಪಾದಗಳಿಗೆ ತಮ್ಮನ್ನೆ ತಾವು ಅರ್ಪಿಸಿಕೊಂಡರು.
ಶ್ರೀ ಕುಮಾರ ಶಿವಯೋಗಿಗಳವರು ಹಾಗೂ ಗುರುಗಳಾದ ಶ್ರೀ ಬಸವಲಿಂಗ ಶಿವಯೋಗಿಗಳು ಹುಬ್ಬಳ್ಳಿಯ ಸಿದ್ಧಾರೂಢಮಠದಿಂದ ತಮ್ಮ ಆಧ್ಯಾತ್ಮ ಜೀವನದ ಯಾತ್ರೆಯನ್ನಾರಂಭಿಸಿ ಆತ್ಮಸಾಕ್ಷಾತ್ಕಾರದ ಹಸಿವು ಹಿಂಗಿಸಿಕೊಳ್ಳಲು ಶಪಥಮಾಡಿ ಮುಂದುವರೆದರು. ಪರಸ್ಪರರಲ್ಲಿರುವ ಸತ್ಯ ಸಂಶೋಧನೆಯ ಹಸಿವು ಇಬ್ಬರನ್ನೂ ಒಂದುಗೂಡಿಸಿತು. ದೇಹಗಳೆರಡು ಆತ್ಮ ಒಂದೇ ಎಂಬಂತೆ

 

.
ಶಿವಯೋಗ ಸಾಮರಸ್ಯವನ್ನು ಸವಿದ ನಂತರ ಗುರುಶಿಷ್ಯರ ಆಧ್ಯಾತ್ಮ ಜೀವನದ ಯಾತ್ರೆ ಯಾವ ಆತಂಕವಿಲ್ಲದೆ ಶಿವಧ್ಯಾನದಲ್ಲಿಯೇ ಮುಂದುವರೆಯಿತು. ಪವಿತ್ರ ವಾತಾವರಣದ ದಿನವೊಂದರಂದು ಶ್ರೀ ಕುಮಾರ ಶಿವಯೋಗಿಗಳವರಿಗೆ ಗುರೋಪದೇಶ ಮತ್ತು ಚಿನ್ಮಯ ದೀಕ್ಷೆಯಾಯಿತು. ಶಿವಯೋಗಿಯೆಂದರೆ ಶಿವಯೋಗದಾನಂದವನ್ನು ತನ್ನಷ್ಟಕ್ಕೆ ತಾನೆ ಸವಿಯುವಾತನಲ್ಲ, ಅದನ್ನು ಇತರರೆಲ್ಲರಿಗೂ ಉಣಬಡಿಸಬೇಕು. ಆಜ್ಞಾನ ಅಂಧಕಾರದಲ್ಲಿ ಮುಳುಗಿದ್ದ ಸಮಾಜದ ಮೇಲೆ ಶಿವಯೋಗ ಜ್ಞಾನವೆಂಬ ಬೆಳಕು ಚೆಲ್ಲಿ ಸುಜ್ಞಾನದೊಡನೆ ಕರೆದೊಯ್ಯಬೇಕು. ಮುಳುಗಿ ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಪುನರುತ್ಥಾನಗೊಳಿಸಿ ಸಮಾಜದ ಸರ್ವರೂ ಸವಿಯುವ ಅವಕಾಶಕ್ಕೆ ಅನುವುಮಾಡಿಕೊಡಬೇಕು.ಇದು ಶ್ರೀ ಬಸವಲಿಂಗ ಶಿವಯೋಗಿಗಳು ಶ್ರೀ ಕುಮಾರ ಶಿವಯೋಗಿಗಳವರಲ್ಲಿ 1894 ರಲ್ಲಿ ಬಿತ್ತಿದ ದೀಕ್ಷೆ. ಅದು ಮುಂದೆ 1904 ಮತ್ತು 1909 ರಲ್ಲಿ ಅಖಿಲ ಭಾರತ ಶ್ರೀಮದ್ವೀರಶೈವ ಮಹಾಸಭಾ ಮತ್ತು ಶ್ರೀಮದ್ವೀರಶೈವ ಶಿವಯೋಗಮಂದಿರಗಳೆಂಬ ಸಂಸ್ಥೆ ಗಳು ಬಾಗಲಕೋಟೆಯ ಮಲ್ಲಣಾರ್ಯ ಚರ ಜಂಗಮರ ಪ್ರೇರಣೆಯಿಂದ . ಮುಳುಗಿ ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಪುನರುತ್ಥಾನಗೊಳಿಸಿ ಸಮಾಜದ ಸರ್ವರೂ ಸವಿಯುವ ಅವಕಾಶಕ್ಕೆ ಅನುವುಮಾಡಿಕೊಡಲಾಯಿತು. ಅಜ್ಞಾನ ಅಂಧಕಾರದಲ್ಲಿ ಮುಳುಗಿದ್ದ ಸಮಾಜದ ಮೇಲೆ ಶಿವಯೋಗ ಜ್ಞಾನವೆಂಬ ಬೆಳಕು ಚೆಲ್ಲಿ ಸುಜ್ಞಾನದೊಡನೆ ಕರೆದೊಯ್ಯಲಾಯಿತು. ಆದರೆ ಎರಡೂ ಸಮಗ್ರ ಕ್ರಾಂತಿ ಗಳನ್ನು ನೋಡಿ ಕಣ್ತುಂಬಿಕೊಳ್ಳಲು ಶ್ರೀ ಬಸವಲಿಂಗ ಶಿವಯೋಗಿಗಳು ಭೌತಿಕ ಶರೀರಧಾರಿಯಾಗಿರದಿದ್ದರೂ ಶ್ರೀ ಕುಮಾರ ಶಿವಂiÉ ೂೀಗಿಗಳ ದಿವ್ಯ ಚಕ್ಷುಗಳ ಮೂಲಕ ಕಂಡು ಇಡೀ ಸಮಾಜಕ್ಕೆ ಬಹು ದೊಡ್ಡ ಕೊಡುಗೆಯನ್ನಿತ್ತಿದರು.

.
ಶ್ರೀ ಕುಮಾರ ಶಿವಯೋಗಿಗಳಿಗೆ ಚಿನ್ಮಯ ದೀಕ್ಷೆಯಾದಮೇಲೆ ಶಂಭುಲಿಂಗನ ಬೆಟ್ಟದ ನಿಜಗುಣ ಶಿವಯೋಗಿಗಳ ಗವಿಯಲ್ಲಿ ಗುರು-ಶಿಷ್ಯರ ಅನುಷ್ಠಾನ ಬಹುಕಾಲ ನಡೆಯಿತು.ಗುರುಶಿಷ್ಯರು ಸತತ 12 ವರ್µ ಅನುಷ್ಠಾನ ಮಾಡಿ ಅಷ್ಟಾವರಣಗಳನ್ನು ಆತ್ಮವಾಗಿಸಿಕೊಂಡು ಲಿಂಗಾಂಗದ ಸಾಮರಸ್ಯವನ್ನು ಸವಿದರು ಅನುಷ್ಠಾನ ಪೂರ್ತಿಯಾದಮೇಲೆ ದೇಶ ಸಂಚಾರ ಕೈಗೊಂಡರು .ಸಂಚಾರದ ಮೊದಲು ಮೈಸೂರು ಒಡೆಯರು ಯಳಂದೂರು ಮಠದ ಭಕ್ತರಾಗಿದ್ದರಿಂದ ಶ್ರೀ ಬಸವಲಿಂಗ ಶಿವಯೋಗಿಗಳಿಗೆ ಆಮಂತ್ರಣವಿತ್ತು ,ಒಂದು ಆನೆಯನ್ನು ಭಕ್ತಿ ಕಾಣಿಕೆಯಾಗಿ ಸಮರ್ಪಿಸಿದರು.ಶ್ರೀ ಬಸವಲಿಂಗ ಶಿವಯೋಗಿಗಳು ಆ ಕಾಣಿಕೆಯನ್ನು ತಮ್ಮ ಮೂಲ ಮಠವಾದ ಡಂಬಳದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠಕ್ಕೆ ಕಳುಹಿಸಿ ಕೊಟ್ಟರು ಅದರ ಹೆಸರು “ಸಿದ್ಧ ಗಂಗಾ” ಈ ಆನೆಯ ಬಗೆಗೆ ಇಂದಿಗೂ ಅನೇಕ ಕಥೆಗಳು ಡಂಬಳ ಭಾಗಗಳಲ್ಲಿ ಪ್ರಚಲಿತವಿವೆ.ಡಂಬಳ ಶ್ರೀ ಮಠದಲ್ಲಿ ಈಗಲೂ ಆನೆಯ ಮನೆಯ ಕುರುಹು ಇದೆ.(ಉಲ್ಲೇಖ : “ಲಿಂ.ಎಳಂದೂರು ಶ್ರೀ ಬಸವಲಿಂಗ ಸ್ವಾಮಿಗಳು” (ಪ್ರಕಾಶನ: ಶ್ರೀ ಜಗದ್ಗುರು ತೋಂಟದಾರ್ಯ ಮಠ ಅಣ್ಣಿಗೇರಿ) ).
ಗುರು ಶಿಷ್ಯರಿಬ್ಬರೂ ಸೇರಿ ಸಂಚರಿಸುತ್ತ ಭಕ್ತ ಸಮೂಹಕ್ಕೆ ಸದ್ಭೋದನೆಯನ್ನು ಮಾಡುತ್ತ 1895 ರಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಗ್ರಾಮಕ್ಕೆ ಬರುತ್ತಾರೆ.

ಅಣ್ಣಿಗೇರಿ ಗ್ರಾಮದ ಡಂಬಳದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಶಾಖಾ ಮಠದಲ್ಲಿ ಉಭಯತರು ವಾಸ್ತವ್ಯ ಮಾಡುತ್ತಾರೆ. . ಈ ಶಾಖಾಮಠದಲ್ಲಿ 10 ನೇಯ ಪೀಠಾಧಿಪತಿಗಳಾಗಿದ್ದ ಶ್ರೀ ಈಸೂರು ನಂದೀಶ್ವರ ಸ್ವಾಮಿಗಳು ,11ನೆಯ ಪೀಠಾಧಿಪತಿಗಳಾಗಿದ್ದ ಶ್ರೀ ಉಗ್ಗದ ತೋಂಟದಾರ್ಯ ಸ್ವಾಮಿಗಳು ಮತ್ತು ಶ್ರೀ ಅನ್ನದಾನೇಶ್ವರ ಚರಮೂರ್ತಿಗಳ ಗದ್ದುಗೆಗಳು ಸ್ಥಾಪಿತಗೊಂಡಿವೆ. ಈ ಮಠಕ್ಕೆ ಅಣ್ಣಿಗೇರಿ ದೇಶಪಾಂಡೆ ಯವರು ಮತ್ತು ದೇಸಾಯಿಯವರಿಂದ ದಾನದತ್ತಿಗಳು ಕೊಡಲ್ಪಟ್ಟಿವೆ. ಈ ಕ್ಷೇತ್ರ ದಲ್ಲಿ ವಾಸ್ತವ್ಯ ಹೂಡಿದ್ದ ಶ್ರೀ ಬಸವಲಿಂಗ ಸ್ವಾಮಿಗಳವರಿಗೆ ದೇಹಲಾಸ್ಯಯುಂಟಾಗುತ್ತದೆ.ಗುರುಶಿಷ್ಯರ ಜೀವನವಾಹಿನಿ ಮುಂದುವರಿಯುತ್ತಿರುವಾಗ ದೇಹಲಾಸ್ಯ ಉಲ್ಬಣಿಸಿ ಅನೀರಿಕ್ಷಿತವಾಗಿ ಶ್ರೀ ಬಸವಲಿಂಗ ಶಿವಯೋಗಿಗಳು ಶಿವನ ಕರೆಗೆ ಒಗೊಟ್ಟು ಲಿಂಗದೊಳಗಾದರು. ಈ ಅನಿರೀಕ್ಷಿತ ಘಟನೆ ಶ್ರೀ ಕುಮಾರ ಶಿವಯೋಗಿಗಳಿಗೆ ಮಾತೆಯನ್ನೇ ಕಳೆದುಕೊಂಡ ಹಸುಗೂಸಿನ ಪರಿಸ್ಥಿತಿಯನ್ನು ತಂದೊಡ್ಡಿತು. ತಾಯಿಯನ್ನು ಕಳೆದುಕೊಂಡ ಕರುವಿನಂತಾದ ಶ್ರೀ ಕುಮಾರ ಶಿವಯೋಗಿಗಳು ದುಃಖತಪ್ತರಾಗಿ ಗುರುಗಳ ಅಂತೇಷ್ಟಿ ವಿಧಿಗಳನ್ನೆಲ್ಲ ಪೂರೈಸಿದರು.

ಶ್ರೀ ಕುಮಾರ ಶಿವಯೋಗಿಗಳಿಗೆ ಕಾರ್ಗತ್ತಲೆ ಆವರಿಸಿದಂತಾಗಿ ದುಖಃದ ಮಡುವಿನಲ್ಲಿ ಕಾಲಕಳೆಯಬೇಕಾಯಿತು. ಆಂತರಿಕ ದುಖಃದಿಂದ ಹೊರಗೆ ಬರುವ ಒಂದೇ ಒಂದು ಹಾದಿಯು ಅನುಷ್ಠಾನ ಎಂದು ಅರಿತ ಶ್ರೀ ಕುಮಾರ ಶಿವಯೋಗಿಗಳು ಶಿವಧ್ಯಾನದ ಮೊರೆ ಹೋಗಬೇಕಾಯಿತು.ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸೊರಬ ಪ್ರದೇಶದಲ್ಲಿ ಅನುಷ್ಠಾನದಲ್ಲಿ ತಲ್ಲೀನಗೊಂಡರು.

ದೇವರು ಅಗೋಚರ, ಆತನ ಸ್ಪರ್ಶ – ಸಂತೊಷ ಪಡೆಯುವುದಂತೂ ಅಸಾಧ್ಯವೇ ಸರಿ. ಆದರೆ ಆತನು ಅಗೋಚರವಾಗಿದ್ದರೂ ಆತನ ದೃಷ್ಠಿ ಆತನಲ್ಲಿಯೇ ಮುಳುಗಿದವರ ಮೇಲೆ ಬೀಳುವುದು. ಆತನ ಅಸ್ತಿತ್ವದಷ್ಟೇ ಸತ್ಯ, ದೇವಭಾಷೆಯನ್ನು ಅರಿತು ಅರ್ಥಮಾಡಿಕೊಳ್ಳುವುದು ಅಸಾಧ್ಯ. ದೇವವಾಣಿ ದೈವೀ ಸೂತ್ರದ ಸಂಗೀತ ಸಂಕೇತಗಳ ಅಂತ್ಯ ಆಳವನ್ನು ಅರಿಯುವುದು ಅಸಾಧ್ಯ. ಮಾನವನ ಅಳತೆ ಪ್ರಮಾಣಗಳಿಗೆ ದೈವಿಶಕ್ತಿ ಸಿಗುವುದು ಅಸಾಧ್ಯವೇ ಸರಿ.

ಪೂಜ್ಯ ಫಕೀರಸ್ವಾಮಿಗಳವರ ವಿಶ್ವಾಸ ಅನುಕಂಪಗಳನ್ನು ಹೊತ್ತು,ಪೂಜ್ಯ ಬಿದರಿ ಕುಮಾರ ಸ್ವಾಮಿಗಳಿಂದ ಅನುಗ್ರಹಿತರಾಗಿ ಕುಮಾರ ಸಮಯಾಂತರ್ಗತ ಹಾನಗಲ್ಲ ವಿರಕ್ತ ಪೀಠದ ಅಧಿಪತಿಗಳಾದರು. ಹಣತೆ ಆಧಾರದಿಂದ ಜ್ಯೋತಿ ಬೆಳಗುವಂತೆ ಹಾನಗಲ್ಲ ಮಠವನ್ನು ಆಧಾರವನ್ನಾಗಿಟ್ಟುಕೊಂಡು ಸಮಾಜಕ್ಕೆ ಬೆಳಕು ನೀಡಿದವರು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು.
ಈ ಬೆಳಕಿನ ಹಿಂದೆ ಇರುವದು ಆ ಅಗೋಚರ ಮಹಾ ಚೈತನ್ಯ,
“ಗುರುವಿನ ಮಹಾಗುರು” ಪರಮ ಪೂಜ್ಯ ಯೆಳಂದೂರು ಬಸವಲಿಂಗ ಶಿವಯೋಗಿಗಳು.

ಶಿವಯೋಗಿಯೆಂದರೆ ಶಿವಯೋಗದಾನಂದವನ್ನು ತನ್ನಷ್ಟಕ್ಕೆ ತಾನೆ ಸವಿಯುವಾತನಲ್ಲ, ಅದನ್ನು ಇತರರೆಲ್ಲರಿಗೂ ಉಣಬಡಿಸಬೇಕು. ಆಜ್ಞಾನ ಅಂಧಕಾರದಲ್ಲಿ ಮುಳುಗಿದ್ದ ಸಮಾಜದ ಮೇಲೆ ಶಿವಯೋಗ ಜ್ಞಾನವೆಂಬ ಬೆಳಕು ಚೆಲ್ಲಿ ಸುಜ್ಞಾನದೊಡನೆ ಕರೆದೊಯ್ಯಬೇಕು. ಮುಳುಗಿ ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಪುನರುತ್ಥಾನಗೊಳಿಸಿ ಸಮಾಜದ ಸರ್ವರೂ ಸವಿಯುವ ಅವಕಾಶಕ್ಕೆ ಅನುವುಮಾಡಿಕೊಡಬೇಕು.ಇದು ಶ್ರೀ ಬಸವಲಿಂಗ ಶಿವಯೋಗಿಗಳು ಶ್ರೀ ಕುಮಾರ ಶಿವಯೋಗಿಗಳಿಗೆ ನೀಡಿದ ಗುರುದೀಕ್ಷೆ ಆ ಗುರು ದೀಕ್ಷೆಯ ಫಲವಾಗಿ ಶ್ರೀ ಕುಮಾರ ಶಿವಯೋಗಿಗಳು ಸ್ಥಾಪಿಸಿದ “ಶಿವಯೋಗಮಂದಿರ” 1909

ವಿಭೂತಿ ಪುರುಷ ಪರಮ ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ನೆನಹುವಿನಲ್ಲಿ ಶ್ರೀ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಪರಿಶುದ್ಧ ವಿಭೂತಿ ತಯಾರಿಕಾ ಕೇಂದ್ರ ಶಿವಯೋಗಮಂದಿರ

error: Content is protected !!