
ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ
ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ
ಡಾ. ಜಿ.ಕೆ. ಹಿರೇಮಠ
ಸಾತಂತ್ರ್ಯ ಪೂರ್ವದಲ್ಲಿ ಉಸಿರಾಡುತ್ತಿದ್ದರೂ ಪ್ರಾಣ ಕಳೆದುಕೊಂಡತ್ತಿದ್ದ, ಜಿಡ್ಡುಗಟ್ಟಿ ಜೋಮು ಹಿಡಿದಿದ್ದ ಗೆದ್ದಲು ಕಟ್ಟಿದ್ದ ವೀರಶೈವ ಸಮಾಜವನ್ನು ಶ್ರೀ ಕುಮಾರಶಿವಯೋಗಿಗಳ ಪ್ರಜ್ಞೆಯಿಂದ ಬಡಿದೆಬ್ಬಿಸಿದರು. ಸಮಾಜವು ನಾನಾಸ್ಥರಗಳಲ್ಲಿ
ಚಾಲನೆಗೊಳ್ಳುವಂತೆ ಮಾಡಿ ತಮ್ಮ ತಪಃಶಕ್ತಿಯನ್ನೆಲ್ಲ ವಿನಿಯೋಗಿಸಲು ಮುಂದಾದರು. ಸಂಘಟನೆ, ಸಿದ್ಧಾಂತ ಇತ್ಯಾದಿಗಳು ʼಐತಿಹಾಸಿಕ ಅಗತ್ಯದ ಸೃಷ್ಟಿ’ ಎಂಬುದನ್ನು ಅರಿತರು. ಆ ಕಾಲದ ಸಂದರ್ಭದಲ್ಲಿ ವೀರಶೈವರ ಅಸ್ತಿತ್ವವೇನು? ವೀರಶೈವರ ನಿಜವಾದ ಧಾರ್ಮಿಕ, ಸಾಮಾಜಿಕ ಸಂಪತ್ತು ಯಾವುದು? ವೀರಶೈವರ ತನ್ಮಯತೆ ಧಾರ್ಮಿಕ ಕುರುಹುಗಳೇನು? ಈ ಮೊದಲಾದ ಪ್ರಶ್ನೆಗಳಿಗೆ ಉತ್ತರ ಹುಡುಕಾಡಲೆತ್ನಿಸಿದರು . ಉತ್ತರಿಸಲು ಮುಂದಾದ ಪ್ರಾತಿನಿಧಿಕ ಸಂಸ್ಥೆಯೇ ‘ಶ್ರೀಮದ್ವೀರಶೈವ ಮಹಾಸಭೆ’. ಹನ್ನೆರಡನೆಯ ಶತಮಾನದ ಶ್ರೀ ಬಸವೇಶ್ವರರ ಅನುಭವ ಮಂಟಪದ ತರುವಾಯ ಇಪ್ಪತ್ತನೆಯ ಶತಮಾನದಲ್ಲಿ ಮತ್ತೆ ಅನುಭವ ಮಂಪಟ’ ಸಂಸ್ಕೃತಿಯನ್ನು ಸಜೀವಗೊಳಿಸಿದ ಸಾಧನೆಯು ಶ್ರೀ ಕುಮಾರಶಿವಯೋಗಿಗಳದಾಗಿತ್ತು.
ಅಂದು ದೇಶಕ್ಕೆ ಒದಗಿದ ಪೀಡೆಗಳು, ಹಿಂಸೆಗಳು ವೀರಶೈವ ಸಮಾಜಕ್ಕೂ ಕಾಡದೇ ಬಿಡಲಿಲ್ಲ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸೌಲಭ್ಯ ವಂಚಿತ ಈ ಸಮಾಜವು ಬಡತನ, ದಾರಿದ್ರ ಮೂಢನಂಬಿಕೆ, ಅಂದಶ್ರದ್ಧೆಗಳಲ್ಲಿ ಸಿಲುಕಿ ನರಳಹತ್ತಿತ್ತು. ಸಂಘಟನೆಯಿಲ್ಲದೆ ಸಮಾಜವು ಶೋಷಣೆಗೊಳಗಾಗಿತ್ತು. ಬಹುಕಾಲದಿಂದ ಮೈಸೂರು ಸೀಮೆಯವರೂ, ಮಹಾರಾಷ್ಟ್ರದವರೂ, ಮದ್ರಾಸು (ಈಗಿನ ಚೆನ್ನೈ) ಇಲಾಖೆಯವರೂ, ಮುಂಬಯಿ ಅಧಿಕಾರಕ್ಕೆ ಒಳಪಟ್ಟ ಉತ್ತರ ಕರ್ನಾಟಕದವರೂ, ನಿಝಾಮ್ ಸಂಸ್ಥಾನಕ್ಕೆ ಸೇರಿದವರೂ ಪರಸ್ಪರ ಬಳಕೆ ಇಲ್ಲದೆ; ಒಬ್ಬರ ಪರಿಚಯವು ಸಹ ಒಬ್ಬರಿಗಲ್ಲದೆ ಇರುತ್ತ ಬಂದಿದ್ದರಿಂದ ವೀರಶೈವ ಸಮಾಜದ ಧಾರ್ಮಿಕ ಮತ್ತು ಸಾಮಾಜಿಕ ಸಂಬಂಧ ಇಲ್ಲದಾಗಿತ್ತು.’ ಎಂಬ; ಎಂ.ಎಸ್.ಕೇಸರಿ ಅವರು ಈ ಕಾಲಘಟ್ಟದಲ್ಲಿ ವೀರಶೈವ ಸಂಖ್ಯೆಯು ಮೂವತ್ತೈದು ಲಕ್ಷ ಮೀರುತ್ತದೆ”’ ಎಂದೂ, ಡಾ. ಜ.ಚ.ನಿ.ಯವರೂ ನೂರಾರು ವರ್ಷಗಳಿಂದ ಅಂದರೆ ಹತ್ತೊಂಬತ್ತನೆಯ ಶತಮಾನದಲ್ಲಿ ಉತ್ತರಾರ್ಧ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವದಲ್ಲಿ ಸುಮಾರು ಐವತ್ತು ಲಕ್ಷ ಜನಸಂಖ್ಯೆಯುಳ್ಳ ವೀರಶೈವ ಸಮಾಜಕ್ಕೆ ಯಾವುದೇ ಅಸ್ತಿತ್ವ, ಸ್ವತಂತ್ರತೆ ಇರಲಿಲ್ಲ” ಎಂಬ ಅಭಿಪ್ರಾಯಗಳನ್ನು ಗಮನಿಸಿದಾಗ ವೀರಶೈವರ ಬದುಕಿನ ಅಂದಿನ ಬವಣೆಯನ್ನು ಸ್ಪಷ್ಟವಾಗಿ ತಿಳಿಯಬಹುದಾಗಿದೆ.
ಸ್ಥಾಪನೆಯ ಉದ್ದೇಶ:
ಸಮಾಜದ ಗೊತ್ತು-ಗುರಿ, ಏಳು-ಬೀಳು, ಸಂಘಟನೆ-ಸುಧಾರಣೆಗಳ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೈಂಕರ್ಯ ತುರ್ತಾಗಿ ಕಾಣಿಸಿಕೊಂಡ ಇಪ್ಪತ್ತನೆಯ ಶತಮಾನ ವೀರಶೈವ ಸಮಾಜದ ಅಭ್ಯುದಯದ ಯುಗವಾಗಿದೆ. ಜನಪರ-ಪ್ರಗತಿಪರ ಬೀಜಗಳನ್ನು ತಮ್ಮಲ್ಲಿ ಹುದುಗಿಸಿಕೊಂಡಿದ್ದ ಶ್ರೀ ಕುಮಾರ ಶಿವಯೋಗಿಗಳು ಈ ಆಂದೋಲನದ ನೇತಾರರು. ವ್ಯವಸ್ಥಾಬದ್ಧ ಸಮಾಜದ ಏಳ್ಗೆಗಾಗಿ ದುಡಿದ ಕೇಂದ್ರ ವ್ಯಕ್ತಿಯಾಗಿದ್ದವರು. ಶ್ರೀ ಕುಮಾರ ಶಿವಯೋಗಿಗಳು ಸಾಮಾಜಿಕ ಪ್ರಜ್ಞೆಯು ಸಮಾಜ ಸುಧಾರಕರ ಮನಸ್ಸಿನಂತಹದ್ದು. ಅವರು ಸಮಾಜ ಕುರಿತು ಚಿಂತಿಸಿದ್ದು; ಸಮಾಜದ ಸ್ವಭಾವ ಕುರಿತು ಯೋಚಿಸಿದ್ದು; ಸಮಾಜದ ಸಕಾರಾತ್ಮಕ ಅಭ್ಯುದಯದಾಗಿತ್ತು. ಸಮಾಜದ ಅಂತರ್ಯದಲ್ಲಿಯೇ ತಾಕಲಾಡುತ್ತಿದ್ದ ಒಳಪಂಗಡ ಗುರುವಿರಕ್ತರ ಸಮಯಭೇದ ಸಮಾಜ ಸಂಘಟಿಸುವಲ್ಲಿನ ಮುಖಂಡರ ಉಪೇಕ್ಷೆ ಸರ್ವ ಸಾಮಾನ್ಯವಾದಂತಿದ್ದ ವಿದ್ಯೆ ಉದ್ಯೋಗಗಳಿಲ್ಲದೆ ನಿಸ್ತೇಜವಾಗಿದ್ದ ಸಮಾಜದ ದಯನೀಯ ಸ್ಥಿತಿ ಹಾಗೂ ನೈತಿಕ ಪತನದಂಥ ಅನೇಕ ಸಮಸ್ಯೆಗಳು ಅವರನ್ನು ಕಾಡಿದವು.
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಕಟ್ಟಬಯಸಿದ್ದ ಸಮಾಜವನ್ನು ಕಣ್ಮುಂದೆ ತಂದುಕೊಂಡು ಸಧ್ಯದ ಸಮಾಜವನ್ನು ಪುನರಚಿಸಿದ ಕಾರ್ಯಕ್ಕೆ ಶ್ರೀ ಕುಮಾರ ಶಿವಯೋಗಿಗಳು ಮುಂದಾದರು. ಸಾಮಾನ್ಯ ಮನುಷ್ಯನ ಮನಃಸ್ಥಿತಿ ಪ್ರಜ್ಞಾವಂತ ಮನುಷ್ಯನ ಮನಃಸ್ಥಿತಿ ಎರಡನ್ನೂ ಅರ್ಥೈಸಿಕೊಂಡರು. ಸಮಾಜದಿಂದ ನಾನು ಪ್ರಯೋಜನ ಪಡೆಯುವುದಕ್ಕಿಂತ ಮಿಗಿಲಾದುದು ನನ್ನಿಂದ ಸಮಾಜಕ್ಕೆ ಆಗಬಹುದಾದ ಪ್ರಯೋಜನ, ಎಲ್ಲದರಲ್ಲೂ ಸೋತು ಹೋಗುತ್ತಲಿದ್ದ ಸಮಾಜದ ಮನಃಸ್ಥಿತಿಯನ್ನು ತಿರುಗಿ ಹೊಂದಿಸುವತ್ತ ಮನಸ್ಸು ಮಾಡಿದರು.
ವ್ಯಷ್ಠಿ-ಸಮಷ್ಟಿ ಇವುಗಳ ಅಂತಿಮಗುರಿ ಸಾಧನೆಯ ಸೂಕ್ಷ್ಮತೆಯ ಅರಿವಿದ್ದ ಶ್ರೀ ಕುಮಾರ ಶಿವಯೋಗಿಗಳಿಗೆ ಗೋಚರಿಸಿದ್ದು ಆ ಕಾಲ ಸಂದಿಗ್ಧದಲ್ಲಿ ವ್ಯಕ್ತಿಯಲ್ಲ ಸಮಾಜ’. ಏಕೆಂದರೆ ಕುಲ, ವೃತ್ತಿ, ಜಾತಿ, ಮತ, ಅಧಿಕಾರ-ಅಂತಸ್ತುಗಳ ಕಟ್ಟು ಹರಿದು, ಮೇಲು-ಕೀಳುಗಳ ಅಸಮಾನತೆಯನ್ನು ಕಿತ್ತೆಸೆದು ಕಾಯಕ, ದಾಸೋಹ, ಸಮಾನತೆ, ಅನುಭಾವ ಮೊದಲಾದ ಮೌಲ್ಯಗಳೇ ಪ್ರಧಾನವಾಗಿದ್ದ ಶರಣರ ವಿಚಾರಧಾರೆಗಳ ಪ್ರಭಾವ ಶ್ರೀ ಕುಮಾರಶಿವಯೋಗಿಗಳು ಮೇಲೆ ದಟ್ಟವಾಗಿ ಆಗಿತ್ತೆಂಬುದನ್ನು ಅವರ ದಿನಚರಿ ಸಾಧನೆಗಳಿಂದಲೇ ಅರಿಯಬಹುದಾಗಿದೆ. ತಮ್ಮ ಕರ್ತೃತ್ವ ಶಕ್ತಿ, ಸಂಘಟನಾ ಸಾಮರ್ಥ್ಯ ಪರಿಶುದ್ಧ ಚಾರಿತ್ರ್ಯ ಹಾಗೂ ಆತ್ಮಬಲದಿಂದಲೇ ಸಮಾಜವನ್ನು ಒಂದೆಡೆ ಕೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಅಲ್ಲಿ ವ್ಯಷ್ಟಿ-ಸಮಷ್ಟಿ ಸಮಸ್ಯೆಗಳನ್ನು ಚರ್ಚಿಸಿ ‘ಸುಂದರ ಸಮಾಜ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವು ‘ಮಹಾಸಭೆ’ ಎಂಬ ಪ್ರಾತಿನಿಧಿಕ ಸಂಸ್ಥೆಯೊಂದನ್ನು ರೂಪಿಸಲು ಮುಂದಾದರು. ಅದಕ್ಕೆ ಸಮಕಾಲೀನ ಸಂದರ್ಭ, ಪರಿಸರ ಒತ್ತಡ ಮತ್ತು ಪ್ರೇರಣೆಗಳೂ ಕಾರಣವಾಗಿದ್ದವು. ಶ್ರೀ ಕುಮಾರ ಶಿವಯೋಗಿಗಳು ಅಂದಿನ ಸಮಾಜದ ಅಗತ್ಯತೆಗಳನ್ನು ಚೆನ್ನಾಗಿ ಅರಿತು ಸಮಾನ ಮನೋಧರ್ಮದ ವ್ಯಕ್ತಿಗಳ ಸಂಘಟನೆ ತೀರ ಅವಶ್ಯಕವೆಂದು ಮನಗಂಡು ‘ಮಹಾಸಭೆ’
ಅಂತಹ ವಿಶಾಲವ್ಯಾಪ್ತಿಯ ಪ್ರಾತಿನಿಧಿಕ ಸಂಸ್ಥೆಯೊಂದರ ಸ್ಥಾಪನೆಗೆ ಪ್ರೇರಣೆಯಾಗಿ ನಿಂತರು.
ಮೂಲತಃ ಲೇಸನ್ನು ಬಯಸುವ ಗುಣಗಳನ್ನೇ ರಕ್ತಗತ ಮಾಡಿಕೊಂಡ ಶ್ರೀ ಕುಮಾರ ಶಿವಯೋಗಿಗಳು ವೀರಶೈವ ಸಮಾಜ, ಧರ್ಮ, ತತ್ವಗಳನ್ನು ಕರಗತ ಮಾಡಿಕೊಂಡು ಸಮಾಜದ ಪುನಃಶ್ವೇತನ ಕಾರ್ಯದಲ್ಲಿ ತೊಡಗಿದ್ದಾಗಲೇ ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರ ಸಮಾಗಮವಾಗಿ ಅವರಲ್ಲಿ ಸುಪ್ತವಾಗಿದ್ದ ಸಂಘಟನಾ ಶಕ್ತಿಯನ್ನು ಅನಾವರಣಗೊಳಿಸುತ್ತದೆ. ಸದಾಸಂಚಾರಿಗಳಾಗಿದ್ದ ಮಲ್ಲಣಾರ್ಯರು ಜಿಡ್ಡುಗಟ್ಟಿದ, ಅಂಧಶ್ರದ್ಧೆಗಳಿಗೆ ಬಲಿಯಾಗಿ, ಹಣೆಯಲ್ಲಿ ವಿಭೂತಿಯಿಲ್ಲದ, ಕೊರಳಲ್ಲಿ ಲಿಂಗವಿಲ್ಲದ ವೀರಶೈವರನ್ನು ಕಂಡು ಕಳವಳಕೊಂಡರು. ಈ ಪರಿಸ್ಥಿತಿಯನ್ನು ಕಳೆಯಬೇಕೆಂದರೆ ಮೊದಲು ಮಠಾಧೀಶರನ್ನು ಜಾಗೃತಗೊಳಿಸಬೇಕೆಂಬ ಉದ್ದೇಶದಿಂದ ವೀರಶೈವರನ್ನು ಎಚ್ಚರಿಸುತ್ತ; ಬಸವ ಪುರಾಣ ಬೋಧಿಸುತ್ತ, ಶರಣರ ತತ್ವಗಳನ್ನು ಜನಮಾನಸದಲ್ಲಿ ಬಿತ್ತುತ್ತ ಇಲಕಲ್ಲ, ಮಂಟೂರ ಮುಂತಾದ ಮಠಗಳ ಮಠಾಧೀಶರನ್ನು ಕಾಣುತ್ತ, ಚರ್ಚಿಸುತ್ತ ಹಾನಗಲ್ಲ ವಿರಕ್ತಮಠಕ್ಕೆ ಆಗಮಮಿಸಿ ಶ್ರೀ ಕುಮಾರಶಿವಯೋಗಿಗಳ ಜತೆಗೂ ಗಾಢವಾಗಿ ಚರ್ಚಿಸಿದರು.
ವೀರವಿರಾಗಿ ಮಲ್ಲಣಾರ್ಯರ ವ್ಯಕ್ತಿತ್ವ ಮತ್ತು ಸಿಡಿಲಕಿಡಿಯಂಥ ಮಾತುಗಳನ್ನು ಆಲಿಸಿದ ಶ್ರೀ ಕುಮಾರಶಿವಯೋಗಿಗಳು ‘ಬಾ ಸಮಾಜ ಪ್ರೇಮಿ, ಬಾ ಹತ್ತಿರ ಎಂದು ಎದ್ದು ಮೈದಡವಿದರು. ನಿನ್ನ ಕೆಚ್ಚಿನ ನುಡಿಗಳು ಎಂಥವರನ್ನೂ ಜಾಗೃತಗೊಳಿಸುವಪ್ಪಾ! ನಿನ್ನ ಸ್ಪಷ್ಟ ಎದೆಗಾರಿಕೆಯ ಮಾತುಗಳನ್ನು ತುಂಬಾ ಮೆಚ್ಚಿರುವೆ.?” ಎಂಬುದಾಗಿ ಮನದುಂಬಿ ನುಡಿದರು. ಪ್ರತಿಯಾಗಿ ಮಲ್ಲಣಾರ್ಯರು ಕೂಡ ಶ್ರೀಗಳೇ ನಮ್ಮ ಸಮಾಜ ಯಾವ ಮಟ್ಟಕ್ಕೆ ಬಂದಿದೆ ಎಂಬುದನ್ನು ಯೋಚಿಸಿದ್ದೀರಾ? ಸಮಾಜವನ್ನು, ಧರ್ಮವನ್ನು ರಕ್ಷಿಸುವ ಮಠಾಧಿಪತಿಗಳೇ ಕೈಕಟ್ಟಿಕೊಂಡು ಕುಳಿತರೆ ಗತಿ ಏನು?” ಎಂಬ ಸಮಾಜದ ಜವಾಬ್ದಾರಿಯನ್ನು ಶ್ರೀ ಕುಮಾರಶಿವಯೋಗಿಗಳ ಮುಂದಿಟ್ಟರು.
ಶ್ರೀ ಕುಮಾರಶಿವಯೋಗಿಗಳು ಮತ್ತು ಮಲ್ಲಣಾರ್ಯರೀರ್ವರೂ ಸಮಾಜ ಜವಾಬ್ದಾರಿಯನ್ನು ಕುರಿತು ಸುದೀರ್ಘವಾಗಿ ಆಲೋಚಿಸಿದ್ದಾರೆ. ಈರ್ವರ ಧೈಯ, ಉದ್ದೇಶಗಳು ಒಂದೇ ಆದವು. ಆದರೆ ಸಂಘಟನೆಯ ಸಂಬಂಧವಾಗಿ ಹಣದ ಕೊರತೆಯ ಪ್ರಶ್ನೆ ಬಂದಾಗ ಈರ್ವರೂ ಕೂಡಿ ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿಗೆ ಬರುತ್ತಾರೆ. ಮಲ್ಲಣಾರ್ಯರು ಬಸವಪುರಾಣದ ಮೂಲಕ ಜನರನ್ನು ಎಚ್ಚರಗೊಳಿಸುವಲ್ಲಿ ಮುಂದಾದರು. ಶ್ರೀ ಕುಮಾರಶಿವಯೋಗಿಗಳು ಹಳ್ಳಿ-ಹಳ್ಳಿಗೆ ಸಂಚರಿಸಿ ‘ಧರ್ಮೊತ್ತೇಜಕ ಸಭೆ’ ಗಳನ್ನು ಏರ್ಪಡಿಸಲು ಮುಂದಾದರು.
೧೯೦೩ನೇ ಇಸ್ವಿಯ ಆರಂಭದಲ್ಲಿಯೇ ಧಾರವಾರಡದಲ್ಲಿ ವೀರಶೈವ ಪ್ರಮುಖರ ನೇಕರು ವಾರಕ್ಕೊಮ್ಮೆ ಧರ್ಮೋಪದೇಶ ಮಾಡುವ ಉದ್ದೇಶವಾಗಿ ‘ವೀರಶೈವಮತ ಪ್ರಚಾರಕ ಸಂಘ’ವನ್ನು ರೂಪಿಸಿದ್ದರು. ಬೇರೆ ಬೇರೆ ಪ್ರಾಂತಗಳಲ್ಲಿರುವ ವೀರಶೈವರು ಮಾಡುತ್ತಿರುವ ಉದ್ಯೋಗ ವಿಶೇಷವಾಗಿ ಸಮಾಜೋನ್ನತಿಯ ಉದ್ಯೋಗಗಳನ್ನು ಮತ್ತು ಧಾರ್ಮಿಕ, ಸಾಮಾಜಿಕ ಸಮಸ್ಯೆಗಳನ್ನು ಒಂದೆಡೆ ಕೂಡಿ ಚರ್ಚಿಸಿ ಧರ್ಮ ಪ್ರಸಾರ ಮಾಡುವ ಉದ್ದೇಶದಿಂದ ಆರಂಭವಾದ ಈ ವೀರಶೈವ ಮತಪ್ರಚಾರ ಸಂಘಕ್ಕೆ ತುಮಕೂರಿನ ವಕೀಲರಾದ ಶ್ರೀ ಪಿ.ಮಹಾದೇವಯ್ಯನವರು. ಶ್ರೀ ಜಿ. ಶಾಂತವೀರಪ್ಪ ನವರು ಆಗಮಿಸಿದ್ದರು. ಇವರ ಉದ್ದೇಶವೂ ಇದೇ ಆಗಿತ್ತು.
ಇದೇ ವೇಳೆ ಶ್ರೀ ಅರಟಾಳ ರುದ್ರಗೌಡರು ಶ್ರೀ ಲಿಂಗರಾಜ ಸರದೇಸಾಯಿ ಅವರೊಡನೆ ವೀರಶೈವ ವಿದ್ಯಾಪ್ರಾಬಲ್ಯ, ಧರ್ಮರಕ್ಷಣೆ ಕುರಿತು ಆಲೋಚಿಸುವಷ್ಟರಲ್ಲಿ ಬಮ್ಮನಹಳ್ಳಿಯಿಂದ ಧಾರವಾಡಕ್ಕೆ ಆಗಮಿಸಿ ಶ್ರೀ ಕುಮಾರಶಿವಯೋಗಿಗಳನ್ನು ಎಲ್ಲರೂ ಕೂಡಿಕೊಂಡು ವಿಷಯ ಚರ್ಚಿಸುತ್ತಾರೆ. ಒಬ್ಬೊಬ್ಬರೂ ತಮ್ಮ ತಮ್ಮ ವಿಚಾರಗಳನ್ನು ಶ್ರೀ ಕುಮಾರಶಿವಯೋಗಿಗಳ ಮುಂದಿಟ್ಟಾಗ ಭಕ್ತಶ್ರೇಷ್ಠರೇ! ಪರಮ ಪಾವನಕರವೂ, ಮೋಕ್ಷೈಕ ಸಾಧನೀಭೂತವೂ ಆದ ನಮ್ಮವೀರಶೈವ ಮತದ ಉತ್ಕರ್ಷವನ್ನು ಚಿಂತಿಸುವ ನಿಮ್ಮ ಆಲೋಚನೆಗಳು ಸರ್ವಜನ ಸಮಂಜಸವಾಗಿರುವವು. ಇವೇ ವಿಚಾರಗಳು ನನ್ನ ಮನೋಂಬುಧಿಯಲ್ಲಿಯೂ ತೆರೆಗಳಂತೆ ತೇಲಾಡುತ್ತಿವೆ. ಮಹನೀಯರ ಮನಸ್ಸಿನಲ್ಲಿರುವ ವಿಚಾರ ತರಂಗಗಳನ್ನು ಎತ್ತಿಹಿಡಿಯಲಿಕ್ಕೆ ಮಹೇಶ್ವರನು ತತ್ವರನಿರುವನು.ನಿಮ್ಮ ಪ್ರಪಂಚ ಸಾಹಸವನ್ನೂ, ಮತ ಸುಧಾರಣಾ ತತ್ಪರತೆಯನ್ನೂ ಕಂಡು ನನಗೆ ಪರಮಾನಂದ ವಾಗಿರುತ್ತದೆ. ‘ವೈದ್ಯ ಹೇಳಿದ್ದು ಹಾಲೋಗರ; ರೋಗಿ ಬಯಸಿದ್ದು ಹಾಲೋಗರ’ ಎಂಬಂತೆ ಉಭಯತಾಪಿ ವಿಚಾರಗಳು ಒಂದೇ ಆಗಿ ನಮ್ಮ ಮನೋದಯ ಸಿದ್ಧಾರ್ಥಗಳನ್ನೇ ಸೂಚಿಸುತ್ತವೆ’”. ಎಂದು ಶ್ರೀ ಕುಮಾರಶಿವಯೋಗಿಗಳು ಸಮಾಜದ ಯೋಚನೆಯ ಯೋಜನೆಗೆ ಚಾಲನೆ ನೀಡಿದುದು ಅವರ ಸಾಮಾಜಿಕ ಸಂಘಟನಾ ಕ್ರಿಯೆಯ ತೀವ್ರತೆಯನ್ನು ಸೂಚಿಸುತ್ತದೆ.
ಸವದತ್ತಿ ಸಂದರ್ಭ:
೧೯೦೩ರ ಮಾರ್ಚ್, ಏಪ್ರೀಲ್, ಮೇ ಈ ಮೂರು ತಿಂಗಳು ಕಾಲ ಸವದತ್ತಿಯ ಕಲ್ಮಠದಲ್ಲಿ ‘ಬಸವ ಮಹಾಪುರಾಣ’ ಜರುಗಿ ಮೇ ತಿಂಗಳು ಕೊನೆಯಲ್ಲಿ ಬಸವಮಹಾಪುರಾಣ ಮಂಗಲೋತ್ಸವ ಸಂದರ್ಭವು ‘ಶ್ರೀಮದ್ವೀರಶೈವ ಮಹಾಸಭೆ’ಯ ಸ್ಥಾಪನೆಯ ತೀರ್ಮಾನದ ಅತ್ಯಪೂರ್ಣ ಸಂದರ್ಭ ಎನಿಸಿತು. ಬಸವ ಮಹಾಪುರಾಣ ಸಮಾಪ್ತಿ ಸಮಾರಂಭಕ್ಕೆ ಹುಬ್ಬಳ್ಳಿಯ ಮೂರುಸಾವಿರಮಠದ ಐದನೆಯ ಪೀಠಾಧಿ ಪತಿಗಳಾದ ಜಗದ್ಗುರು ಶ್ರೀಗಂಗಾಧರಸ್ವಾಮಿಗಳೂ, ಅಥಣಿ ಶ್ರೀ ಮುರುಘಂದ್ರಶಿವಯೋಗಿಗಳೂ, ಬೀಳೂರಿನ ಶ್ರೀ ಗುರುಬಸವಸ್ವಾಮಿಗಳೂ, ಸೊಲ್ಲಾಪುರ ಕಿರೀಟಮಠದ ಶ್ರೀನಿಜಗುಣಶಿವಯೋಗಿಗಳೂ, ಚಿತ್ರದುರ್ಗದ ಶ್ರೀ ಜಯದೇವ ಮುರುಘರಾಜೇಂದ್ರಸ್ವಾಮಿಗಳೂ, ಧಾರವಾಡದ ‘ವೀರಶೈವ ಮತ ಪ್ರಚಾರಕ ಸಂಘ’ ದ ಪ್ರಮುಖರು ಕೂಡಿದ್ದ ಈ ಮಹೋತ್ಸವದಲ್ಲಿ ಶ್ರೀ ಕುಮಾರಶಿವಯೋಗಿಗಳು ‘ಶ್ರೀಮದ್ವೀರಶೈವ ಮಹಾಸಭೆ’ ಸಂಘಟನೆ ಮತ್ತು ಸ್ಥಾಪನೆಯ ಕುರಿತು ಪ್ರಸ್ತಾಪ ಮಾಡುತ್ತಾರೆ. ಸೇರಿದ್ದ ಶ್ರೀಗಳೂ, ಸಮಾಜದ ಮುಖಂಡರೂ ಪರಸ್ಪರ ಚರ್ಚೆಯನ್ನೂಮಾಡುತ್ತಾರೆ. ಸಮಾಜ ಸಂಘಟನೆಯ ವ್ಯಾಪಕತೆಯು ಇಲ್ಲಿ ಸಜ್ಜುಗೊಳ್ಳುತ್ತದೆ. ಅದಕ್ಕೆ ಅಗತ್ಯವಾಗಿದ್ದ ಆರ್ಥಿಕ ಕೊರತೆಯನ್ನು ನೀಗಿಸುವುದಕ್ಕಾಗಿ ಶ್ರೀ ಕುಮಾರಶಿವಯೋಗಿಗಳು ಹಾಗೂ ಸೇರಿದ ಭಕ್ತವೃಂದವೂ, ಮುಖಂಡರೂ ಧನವನ್ನು ಸಂಗ್ರಹಿಸುವ ಮೂಲಕ ಮಹಾಸಭೆಯ ಕಾರ್ಯಗಳು ಚುರುಕುಗೊಳ್ಳುತ್ತವೆ.
೧೯೦೩ ರಲ್ಲಿಯೇ ಅಂಕಲಗಿ ಶ್ರೀ ಅಡವಿಸ್ವಾಮಿಗಳು ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದಲ್ಲಿ ೭೭೯ ಮಂಟಪಪೂಜೆಗಳನ್ನು ಏರ್ಪಡಿಸಿ ಹುಬ್ಬಳ್ಳಿಯ ಮೂರುಸಾವಿರಮಠದ ಜಗದ್ಗುರು ಶ್ರೀ ಗಂಗಾಧರಸ್ವಾಮಿಗಳ ಪಲ್ಲಕ್ಕಿ ಮಹೋತ್ಸವವನ್ನೂ ಜರುಗಿಸುತ್ತಾರೆ. ಇಲ್ಲಿಗೂ ಆಗಮಿಸಿದ್ದ ಶ್ರೀ ಕುಮಾರಶಿವಯೋಗಿಗಳು ಬೇರೆ ಬೇರೆ ಪ್ರಾಂತಗಳಿಂದ ಬಂದಿದ್ದ ಶ್ರೀಗಳೂ, ಸಮಾಜದ ಮುಖಂಡರೂ, ಭಕ್ತವೃಂದದೊಂದಿಗೆ ಚರ್ಚಿಸಿ ‘ಶ್ರೀಮದ್ವೀರಶೈವ ಮಹಾಸಭೆಯ ಸ್ಥಾಪನೆ ಕುರಿತು ಪ್ರಸ್ತಾಪ ಮಾಡಿದರು. ಇಲ್ಲಿ ನಿರ್ದಿಷ್ಟವಾದ ನಿರ್ಣಯವನ್ನೂ ಕೈಕೊಳ್ಳಲಾಯಿತು. ಆ ಪ್ರಕಾರ ಪ್ರಥಮ ಅಧಿವೇಶನ ವನ್ನು ೧೯೦೩ ರ ಡಿಸೆಂಬರ ತಿಂಗಳಲ್ಲಿ ಧಾರವಾಡದಲ್ಲಿ ನಡೆಸುವುದಾಗಿ ಕೂಡಿದ ಸಭೆಯಲ್ಲಿ ಸರ್ವಾನುಮತದ ನಿರ್ಣಯವೂ ಆಯಿತು.
ಈ ಬಗೆಯ ಗುರುತರ ಮಹಾಮಣಿಹವನ್ನು ಹೊತ್ತ ಈ ಕುಮಾರ ಶಿವಯೋಗಿಗಳು ಭಕ್ತರನ್ನು ಉತ್ತೇಜಿಸುವಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡುವಲ್ಲಿ ಮುಖ್ಯವಾಗಿ ಹಣವನ್ನು ವ್ಯವಸ್ಥೆಗೊಳಿಸುವಲ್ಲಿ ಕಾರ್ಯಪ್ರವೃತ್ತರಾದರು. ಸ್ವತಃ ಹಾನಗಲ್ಲ, ಬ್ಯಾಡಗಿ, ಹಾವೇರಿ, ದೇವಿಹೊಸೂರು, ಆಲೂರು ಮುಂತಾದ ಊರುಗಳಲ್ಲಿ ಸಂಚರಿಸಿ ಧನಸಂಗ್ರ ಮಾಡಿದರು. ಶ್ರೀ ಕುಮಾರಶಿವಯೋಗಿಗಳಿಂದ ಪ್ರೇರಿತವಾದ ಹುಬ್ಬಳ್ಳಿ, ಗರಗ, ಮಮ್ಮಿಗಟ್ಟಿ, ಧಾರವಾಡ, ಸಂಶಿ ಅನೇಕ ಗ್ರಾಮಗಳ ಭಕ್ತರು ಸ್ವಇಚ್ಛೆಯಿಂದ ದೇಣಿಗೆ ನೀಡಿದರು. ಸಂಕಲ್ಪಿಸಿದ ಶ್ರೀಮದ್ವೀರಶೈವ ಮಹಾಸಭೆ ೧೯೦೩ ಜೂನ್ ೨೨ರಂದು ಜರುಗಿಸಲು ಮಹಾಸಭೆಯ ಪ್ರಥಮ ಅಧಿವೇಶನ ಧೈಯ ಉದ್ದೇಶಗಳನ್ನು ವಿವರಿಸುವ ವಿವರವಾದ ಪ್ರಕಟಣೆ ಹೊರಡಿಸಲಾಯಿತು.
ಆ ಪ್ರಕಾರ ಪ್ರಕಟನಾ ಪತ್ರಗಳು ನಾಡಿನ ಮೂಲೆ ಮೂಲೆಗೂ ಹೋದವು. ವೀರಶೈವ ಸಮಾಜಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುವ ಕಾರ್ಯವೂ ಭರದಿಂದ ಸಾಗಿತು. ಎಲ್ಲವೂ ಸಿದ್ಧತೆಗೊಂಡು ಶ್ರೀಮದ್ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನವನ್ನು ನಿಗದಿಗೊಳಿಸಿದಂತೆ ೧೯೦೩ರ ಡಿಸೆಂಬರನಲ್ಲಿ ಜರುಗಿಸಬೇಕೆನ್ನುವಷ್ಟರಲ್ಲಿ ಭೀಕರವಾಗಿ ಕಾಣಿಸಿಕೊ೦ಡ ಪ್ಲೇಗ ಹಾವಳಿಯು ಶ್ರೀ ಕುಮಾರಶಿವಯೋಗಿಗಳನ್ನು ಮತ್ತು ವೀರಶೈವ ಮುಖಂಡರನ್ನು ತಬ್ಬಿಬ್ಬುಗೊಳಿಸಿತು. ಕೂಡಲೇ ಉಭಯತರು ಚರ್ಚಿಸಿ ೧೯೦೩ರ ಡಿಸೆ೦ಬರ ಬದಲಾಗಿ ೧೯೦೪ರ ಮೇ ತಿಂಗಳಲ್ಲಿ ಜರುಗಿಸುವ ನಿರ್ಣಯ ಕೈಕೊಂಡು ಆ ಪ್ರಕಾರ ಹೊಸ ಪ್ರಕಟಣೆಯ ಪತ್ರಗಳನ್ನು ಮುದ್ರಿಸಿ ನಾಡಿನ ನಾನಾ ಕಡೆ ಕಳುಹಿಸಿ ಕೊಡಲಾಯಿತು. ವೀರಶೈವ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಹಂಬಲಿಸುತ್ತಿದ್ದ ಮನಸ್ಸುಗಳೆಲ್ಲವನ್ನು ಒಂದೆಡೆ ಸೇರಿಸುವ ಈ ಐತಿಹಾಸಿಕ ಸಂದರ್ಭವು ಹನ್ನೆರಡನೆಯ ಶತಮಾನದ ‘ಅನುಭವ ಮಂಟಪ’ದ ಸಂಘಟನೆಯ ಸಂದರ್ಭವನ್ನು ನೆನಪಿಸುವುದಾಗಿತ್ತು.
ಉತ್ಪಾದನೆ-ಉತ್ಪಾದಕರು:
ಶ್ರೀ ಮದ್ವೀರಶೈವ ಮಹಾಸಭೆಯ ಪ್ರಥಮ ಸಮ್ಮೇಳನದ (ಅಧಿವೇಶನದ) ಕೊನೆಯ ದಿನ ಠರಾವುಗಳನ್ನು ಕೈಕೊಂಡು ಉತ್ಪಾದಕರ, ದಾನಿಗಳ, ಶ್ರಮಿಸಿದವರ ಅಭಾರ ಮನ್ನಿಸುವಿಕೆ ಕುರಿತ ದಾಖಲೆಗಳು ಚಾರಿತ್ರಿಕ ಮಹತ್ವದ್ದಾಗಿದೆ.
“……………………… .ಅನಂತರ ನಮ್ಮ ಸಾರ್ವಭೌಮರಾದ ಎಡ್ವರ್ಡ್ ದೊರೆಗಳ ಹೆಸರಿನಿಂದ ತ್ರಿವಾರ ಜಯಘೋಷವಾಗಿ ಕಡೆಗೆ, ಈ ಸಭೆಯ ಉತ್ಪಾದಕರಾದ ಹಾನಗಲ್ಲದ ಶ್ರೀ ಮನ್ನಿರಂಜನ ಶ್ರೀ ಕುಮಾರಸ್ವಾಮಿಗಳವರು ಇದು ಚಿರಕಾಲ ನಡೆಯುವಂತೆ ಆಶೀರ್ವದಿಸಬೇಕೆಂದು ನೆರೆದ ಜನರು ಭಕ್ತಿಪುರಸ್ಸರವಾಗಿ ಆನಂದೋದ್ಗಾರವನ್ನು ಹೊರಗೆಡಹಿದ ಮೇಲೆ ಮಹಾಸ್ವಾಮಿಗಳಿಗೂ, ಸಮಸ್ತ ಮಹನೀಯರಿಗೂ ಪುಷ್ಪ, ಮಾಲಾದಿಗಳನ್ನು ಸಮರ್ಪಿಸಿದ ತರುವಾಯ ಸಭೆಯ ಕಾರ್ಯವು ಸಾಂಗವಾಗಿ ನೆರವೇರಿತು” ಎಂಬ ಮಾತುಗಳು ಮಹಾಸಭೆಯ ಸ್ಥಾಪನೆಯ ಮತ್ತು ಸ್ಥಾಪಕರ ಕಡೆಗೆ ಬೆರಳು ನೀಡುತ್ತದೆ.
ಶ್ರೀಮದ್ವೀರಶೈವ ಮಹಾಸಭೆಯ ಮೊದಲ ಸಮ್ಮೇಳನದ ಕಾರ್ಯನಿರ್ವಾಹಕ ಸಂಚಾಲಕರಾದ ಧಾರವಾಡದ ಶ್ರೀ ಗುರುಬಸಪ್ಪಾ ಫಕೀರಪ್ಪಾ ಹಳಕಟ್ಟಿ ಮತ್ತು ಶ್ರೀ ವೀರಭದ್ರಪ್ಪಾ ಬಸಪ್ಪಾ ಹಾಲಭಾವಿ ಈ ಮಹನೀಯರು ೧೯೦೪ರಲ್ಲಿ ಶ್ರೀಮದ್ವೀರಶೈವ ಮಹಾಸಭೆಯ ಪ್ರಥಮ ಸಮ್ಮೇಳನದ ವರದಿ ಗ್ರಂಥಕ್ಕೆ ಪೀಠಿಕೆ ಬರೆಯುತ್ತ ಈ ಸಭೆಯ ಮುಖ್ಯ ಚಾಲಕರಾದ ಹಾನಗಲ್ಲದ ಶ್ರೀ ಕುಮಾರಶಿವಯೋಗಿಗಳನ್ನೂ, ಈ ಸಭೆಯ ಯಾವತ್ತೂ ಕೆಲಸಗಳನ್ನೂ, ಉತ್ಸಾಹದಿಂದಲೂ, ಉತ್ಕಂಠತೆಯಿಂದಲೂ ಮಾಡಿದ ಕೊಂಗವಾಡದ ಚೆನ್ನಪ್ಪ ಗೌಡರನ್ನು ಇಲ್ಲಿ ನೆನೆಯದೆ ಇರುವುದಕ್ಕಾಗಿರುವುದಿಲ್ಲ. ಶ್ರೀ ಕುಮಾರಶಿವಯೋಗಿಗಳು ದೀರ್ಘಾಯುತರಾಗಿ ಈ ಸಭೆಯು ಚಿರಕಾಲ ಬಾಳುವಂತೆ ಆಶೀರ್ವದಿಸಲೆಂದು ಪ್ರಾರ್ಥಿಸಿ ಈ ಪೀಠಿಕೆಯನ್ನು ಮುಗಿಸುತ್ತೇವೆ.’ (೧೨ನೆಯ ನವೆಂಬರ ೧೯೦೫ನೇ ಇಸವಿ) ಎಂಬ ಬರಹವು ಕೂಡ ಅದನ್ನೇ ಖಚಿಪಡಿಸುತ್ತದೆ.
ಪಂಡಿತ ರತ್ನ ಬಿ. ಶಿವಮೂರ್ತಿಶಾಸ್ತ್ರಗಳು ಜೀವನ ಸ್ಮೃತಿಗಳು’ ಎಂಬ ತಮ್ಮ ಆತ್ಮಚರಿತ್ರೆಯ ಗ್ರಂಥದಲ್ಲಿ ಅಖಿಲಭಾರತ ಶ್ರೀಮದ್ವೀರಶೈವ ಮಹಾಸಭೆಯ ವಿಷಯವನ್ನು ಪ್ರಸ್ತಾಪಿಸುವುದು ಅನಿವಾರ್ಯವಾಗಿದೆ ಎನ್ನುತ್ತ “ಈ ಶತಮಾನದ ಪ್ರಾರಂಭದಲ್ಲಿ ಪರಮಪೂಜ್ಯರಾದ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳು ವೀರಶೈವ ಧರ್ಮದ ಉನ್ನತಿಗಾಗಿ ೧೯೦೪ರಲ್ಲಿ ಧಾರವಾಡದಲ್ಲಿ ಅಖಿಲ ಭಾರತ ಶ್ರೀಮದ್ವೀರಶೈವ ಮಹಾಸಭೆಯನ್ನು ಸಂಸ್ಥಾಪಿಸಿದರು.ʼʼ ಎಂದು ಉಲ್ಲೇಖಿಸಿರುವ ಮಾತುಗಳು ಇಲ್ಲಿ ಗಮನಾರ್ಹವಾಗುತ್ತದೆ.
‘ಕರ್ನಾಟಕ ಗಾಂಧಿ’ ಎಂದೇ ಪ್ರಸಿದ್ಧರಾಗಿದ್ದ ಹರ್ಡೆಕರ ಮಂಜಪ್ಪನವರು ‘ಬೆಳಗು’ ಗ್ರಂಥದಲ್ಲಿ ವೀರಶೈವ ಮಹಾಸಭೆಯ ಜನ್ಮದಾತ’ ಎಂಬ ಶೀರ್ಷಿಕೆ ಅಡಿಯಲ್ಲಿ ಬರೆಯುತ್ತ ಇಂತಹ ಸಮರ್ಥ ಮಹಾಸಭೆಯನ್ನು ಪಾಶ್ಚಾತ್ಯ ಶಿಕ್ಷಣ ವಿಶಾರದರು ಅಥವಾ ಆಧುನಿಕ ರಾಜಕಾರಣದಲ್ಲಿ ನುರಿತವರು ಸ್ಥಾಪಿಸಿದ್ದರೆ ಅದೇನೂ ಕೌತುಕಾಷ್ಟದ ಎನಿಸುತ್ತಿರಲಿಲ್ಲ. ಈಗಿನಂತೆ ಜನಜಾಗೃತಿ ಉಂಟಾದ ಕಾಲದಲ್ಲಿ ಅದನ್ನು ಯಾರಾದರೂ ಏರ್ಪಡಿಸಿದ್ದರೆ ಅದೇನೋ ಆಶ್ಚರ್ಯಕರವಾಗಿ ತೋರುತ್ತಿರಲಿಲ್ಲ. ಆದರೆ ಪಾಶ್ಚಾತ್ಯ ಶಿಕ್ಷಣದ ಗಾಳಿಯನ್ನು ಕೂಡ ಸೋಂಕಿಸಿಕೊಂಡಿರದ ಮತ್ತು ಆಧುನಿಕ ರಾಜಕಾರಣದ ಸಂಬಂಧವಿಲ್ಲದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳು ಕರ್ನಾಟಕದಲ್ಲಿಯೇ ಯಾವ ವಿಧವಾದ ಸಾರ್ವಜನಿಕ ಸಮ್ಮೇಳನಗಳು ಜರುಗದಿದ್ದ ಕಾಲದಲ್ಲಿ, ಐವತ್ತೈದು ವರ್ಷಗಳ ಹಿಂದೆ ಜನಾಂಗವು ನಿದ್ದೆ ಹೋಗಿದ್ದ ಕಾಲದಲ್ಲಿ ಅಖಿಲ ಭಾರತೀಯ ಶ್ರೀಮದ್ವೀರಶೈವ ಮಹಾಸಭೆಯನ್ನು ಸ್ಥಾಪಿಸಿದುದು ನಿಜವಾಗಿಯೂ ಕೌತುಕಾಸ್ಪದವಾದುದು. ಆ ಶಿವಯೋಗಗಳಲ್ಲಿದ್ದ ಅದ್ವಿತೀಯವಾದ ಮುಂದಾಲೋಚ ನೆಯ ದ್ಯೋತಕವಾದುದು. ಎಂದಿರುವುದು ಈ ಸಂಬಂಧದ ಸ್ಪಷ್ಟವಾದ ಮತ್ತು ಖಚಿತವಾದ ಮಹತ್ವಪೂರ್ಣ ದಾಖಲೆಯಾಗುತ್ತದೆ.
ಆದಾಗ್ಯೂ ಕಾಲ ಗತಿಸಿದಂತೆ ಅಜ್ಞಾನ, ದಾಖಲಾತಿಗಳು ದೊರಕದಿರುವುದು ಮತ್ತು ದುರುದ್ದೇಶದ ಹಿತಾಸಕ್ತ ಬರಹಗಾರರು ಸತ್ಯವನ್ನು ತಿರುಚಿ ತಮತಮಗೆ ತಿಳಿದಂತೆ ಬರೆಯುತ್ತ ಬಂದುದು ಸಮಾಜದ ದುರ್ದೈವವಾಗಿದೆ.
ಶರಣರ ಆದರ್ಶ ಜೀವನ ವಿಧಾನವನ್ನು ತಿಳಿದವರಾಗಿದ್ದ ಶ್ರೀ ಕುಮಾರ ಶಿವಯೋಗಿಗಳು ಸಹ ಜೀವನ, ಸಮೃದ್ಧ ಜೀವನ ಸಮಾಜದಲ್ಲಿ ನೆಲೆಗೊಳ್ಳಬೇಕು. ಔದ್ಯೋಗಿಕ, ಆರ್ಥಿಕ, ಧಾರ್ಮಿಕ, ಸಾಮಾಜಿಕ, ಪರಿಸರಗಳು ಪ್ರಗತಿಯಾಗಬೇಕು. ಕಲೆ, ಸಾಹಿತ್ಯ, ಸಂಗೀತ, ಕೀರ್ತನ, ಪ್ರವಚನ ಸಂಸ್ಕೃತಿಗಳು ಸಂವರ್ಧನೆಗೊಳ್ಳಬೇಕು. ಈ ಶಕ್ತಿ ಸಂವರ್ಧನೆ ಕೇವಲ ಒಂದು ಸಮಾಜದ ಹಿತದೃಷ್ಟಿಯಿಂದಲ್ಲದೆ ನವಸಮಾಜದ ನಿರ್ಮಾಣದ ಮಾರ್ಗಕ್ಕೆ ದಾರಿಯಾಗಬೇಕು’ ಎಂಬ ಘನತರವಾದ ಉದ್ದೇಶವು ‘ಶ್ರೀಮದ್ವೀರಶೈವ ಮಹಾಸಭೆ” ಎಂಬ ಸಂಸ್ಥೆಯೊಂದರ ಮೂಲಕ ಅನುಷ್ಠಾನಗೊಂಡಿತು. ವ್ಯಷ್ಟಿ-ಸಮಷ್ಟಿಯ ಏಳ್ಗೆಯ ಕಮ್ಮಟವೆನಿಸಿದ ಶ್ರೀಮದ್ವೀರಶೈವ ಮಹಾಸಭೆಯು ಶ್ರೀ ಕುಮಾರಶಿವಯೋಗಿಗಳ ವೀರ ನಿಷ್ಠೆಯಾಗಿದೆ. ಉದಾರ ಸೃಷ್ಟಿಯಾಗಿದೆ. ದೂರದೃಷ್ಟಿ ಯಾಗಿದೆ.
ಪ್ರಮುಖ ಧೈಯೋದ್ದೇಶಗಳು:
ಉದ್ದೇಶಿತ ಶ್ರೀ ಮದ್ವೀರಶೈವ ಮಹಾಸಭೆಯು ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುವ ಧೈಯವನ್ನು ಹೊಂದಿರುವ ಸಂಸ್ಥೆಯಾಗಿದೆ. “ವೀರಶೈವ ಮತ ಲೋಕಮತವಾಗಬೇಕು; ವೀರಶೈವ ಪಥ ವಿಶ್ವಪಥವಾಗಬೇಕು; ವೀರಶೈವ ಸಮಾಜ ವಿಶ್ವಸಮಾಜವಾಗಬೇಕು ಎಂಬ ಶ್ರೀ ಕುಮಾರಶಿವಯೋಗಿಗಳ ಗುರಿ ಮತ್ತು ದೃಢ ಸಂಕಲ್ಪವನ್ನು ಸಮಕಾಲೀನ ಸನ್ನಿವೇಶದಲ್ಲಿ ಮುಕ್ತಮನಸ್ಸಿನಿಂದ ಸ್ವೀಕರಿಸಿ ಮತ್ತೆ ಬಿಂಬಿಸುವ ಅವಸರದ ಅಗತ್ಯ ಸಮಾಜದ ಮುಂದಿದೆ. ಈ ಮಣಿಹದ ಮಹಾರಥ ನಡೆಸುವುದಕ್ಕಾಗಿ ಶ್ರೀ ಮದ್ವೀರಶೈವ ಮಹಾಸಭೆಯ ಪ್ರಮುಖ ಧ್ಯೇಯೋದ್ದೇಶಗಳನ್ನು ಇಂದು ಅನುಷ್ಠಾಗೊಳಿಸುವುದು ಸಮಾಜದವರ ಮುಂದಿದೆ.
* ಆಧ್ಯಾತ್ಮಿಕ, ಸೈದ್ಧಾಂತಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಸೇರಿದಂತೆ ಮಾನವ ಸಂಬಂಧದ ಎಲ್ಲ ಕ್ಷೇತ್ರಗಳಲ್ಲೂ ವೀರಶೈವ ಧರ್ಮಾನುಯಾಯಿಗಳ ಕ್ಷೇಮಾಭಿವೃದ್ಧಿ ಸಾಧಿಸುವುದು.
* ವೀರಶೈವ ಧರ್ಮವು ಅಂಗೀಕರಿಸಿರುವ ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡು ವುದು ಮತ್ತು ಯಾವುದೇ ಜಾತಿ, ಮತ ಅಥವಾ ವರ್ಣಭೇದವಿಲ್ಲದೆ ಬಡವರು, ಹಿಂದುಳಿದವರು, ದೀನ-ದಲಿತರು, ಅಂಗ ದುರ್ಬಲರು, ಹಾಗೆಯೇ ಮಹಿಳೆಯರು ಮತ್ತು ಮಕ್ಕಳ ಹಿತರಕ್ಷಣೆಗಾಗಿ ಶ್ರಮಿಸುವುದು.
* ವೀರಶೈವ ಮಠಗಳು ಮತ್ತು ಮಠಾಧಿಪತಿಗಳನ್ನು ಸಮಾನವಾಗಿ ಗೌರವಿಸುವುದು; ವೀರಶೈವ ಮಠಗಳು ಮತ್ತಿತರ ಸೇವಾ ಸಂಸ್ಥೆಗಳ ಸುಗಮ ಕಾರ್ಯನಿರ್ವಹಣೆ, ಸಂರಕ್ಷಣೆ ಮತ್ತು ಪ್ರಗತಿಗಳಲ್ಲಿ ನೆರವಾಗುವುದು.
* ವಿವಿಧ ಧರ್ಮಗಳ ಮಧ್ಯೆ ಸೌಹಾರ್ದ ಮತ್ತು ಸಾಮರಸ್ಯ ಭಾವನೆಯನ್ನು ಬೆಳೆಸುವುದು ಮತ್ತು ಸಾಮಾಜಿಕ ಕುಂದು-ಕೊರತೆಗಳನ್ನು ನಿವಾರಿಸುವುದು.
* ‘ಭಾರತ ರಾಜ್ಯಾಂಗದ ೫೧-ಎ ನಿಬಂಧನೆಯಂತೆ ವೀರಶೈವ ಸಮುದಾಯದ ಸದಸ್ಯರಲ್ಲಿ ಮೂಲಭೂತ ಕರ್ತವ್ಯಗಳನ್ನು ಉತ್ತೇಜಿಸುವುದು. ರಾಜ್ಯಾಂಗದತ್ತ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವುದು.
* ವೀರಶೈವ ಸಮುದಾಯದಲ್ಲಿರುವ ಉಪಪಂಗಡಗಳ ಭೇದವನ್ನು ನಿವಾರಿಸಿ ಸಮಗ್ರ
ವೀರಶೈವರನ್ನು ಸಮಷ್ಟಿ ಕ್ಷೇಮಕ್ಕಾಗಿ ಸಂಘಟಿಸುವುದು.
* ವೀರಶೈವ ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದ ಸಂಶೋಧನೆ,
ಸಂರಕ್ಷಣೆ, ಸಂವರ್ಧನೆ, ಪ್ರಸಾರ ಮತ್ತು ಅನುಸರಣೆಗೆ ಅಗತ್ಯವಾದ ಕಾರ್ಯಚಟುವಟಿಕೆಗಳನ್ನು ನಡೆಸುವುದು.
* ವಿಶ್ವದ ಎಲ್ಲೆಡೆ ವೀರಶೈವರ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದು.
ಎಂಬಿತ್ಯಾದಿ ಮಹತ್ವದ ಉದ್ದೇಶಗಳನ್ನು ಗೊ.ರು.ಚೆನ್ನಬಸಪ್ಪ ದಾಖಲಿಸಿದ್ದು, ಪ್ರಾತಿನಿಧಿಕ ಮಹಾಸಭೆಯ ಸಂಸ್ಥೆಯೊಂದರ ನೀತಿ-ಸಂಹಿತೆಯನ್ನು ಸ್ಪಷ್ಟವಾಗಿ ಅರಿಯಬಹುದು.
೧೯೦೪ರಲ್ಲಿ ಆರಂಭಗೊಂಡ ಶ್ರೀಮದ್ವೀರಶೈವ ಮಹಾಸಭೆಯ ಸಮ್ಮೇಳನಗಳು ೨೦೨೩ರ ವರಗೆ ಒಟ್ಟು ೨೪ ಸಮ್ಮೇಳನಗಳು ಜರುಗಿಸಲ್ಪಟ್ಟಿವೆ. ಆರಂಭದಿಂದ ಹತ್ತು ಸಮ್ಮೇಳನವರೆಗೆ ಶ್ರೀ ಕುಮಾರಶಿವಯೋಗಿಗಳು ಅತ್ಯಂತ ಯಶಸ್ವಿಯಾಗಿ ಜರುಗಿಸಿದರು. ಶ್ರೀಮದ್ವೀರಶೈವ ಮಹಾಸಭೆಯ ಸ್ಥಾಪಕರು ತಾವಾಗಿದ್ದರೂ, ಸಮ್ಮೇಳನದ ಸಂಘಟನೆಯ ಸರ್ವಶಕ್ತಿಯೂ ಆಗಿದ್ದರೂ ಯಾವುದೇ ತರದ ಅಧಿಕಾರಿಯಾಗಲಿ; ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನಾಗಲಿ ಅಪೇಕ್ಷಿಸಿದವರಲ್ಲ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಅನುಭವಮಂಟಪ ಸ್ಥಾಪಿಸಿ ಅದಕ್ಕೆ ಅಲ್ಲಮಪ್ರಭುಗಳನ್ನು ಅಧ್ಯಕ್ಷರನ್ನಾಗಿ ಮಾಡಿದಂತೆ ಶ್ರೀ ಕುಮಾರಶಿವಯೋಗಿಗಳೂ ತಮ್ಮ ಜೀವಿತಾವಧಿವರೆಗಿನ ಹತ್ತೂ ಸಮ್ಮೇಳನಗಳಿಗೆ ಸಮಾಜದ ಕಾಳಜಿ ಉಳ್ಳವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಅವರ ದಾರ್ಶನಿಕ ಸಿರಿಯ ಸಂಪತ್ತಾಗಿದೆ.
ಶ್ರೀ ಕುಮಾರಶಿವಯೋಗಿಗಳ ಉಜ್ವಲವಾದ ಧಾರ್ಮಿಕ ಭಾವನೆ ಧರ್ಮದ ದ್ವಾರವನ್ನು ಸರ್ವರಿಗೂ ತೆರೆದಿಡುವ ಅವರ ಸದೀಚ್ಛೆ, ಸರ್ವರನ್ನು ಭಿನ್ನಭಾವವಿಲ್ಲದೆ ಅಪ್ಪಿಕೊಳ್ಳುವುದರಲ್ಲಿ ಅವರಿಗಿದ್ದ ವಿಶಾಲ ಹೃದಯ ಸದಾಸೇವೆಯಲ್ಲಿಯೇ ಅವರಿಗಿದ್ದ ಉತ್ಕಟವಾದ ಸಮಾಜದ ಕಳಕಳಿ, ನಿಷ್ಕಳಂಕವಾದ ಆಚರಣೆ, ಪರಿಶುದ್ಧವಾದ ಅಂತಃಕರಣ, ಅತುಲ ಸ್ವಾರ್ಥತ್ಯಾಗ, ನಿರುಪಮ ಉತ್ಸಾಹಶಕ್ತಿ ಇವೇ ಮುಂತಾದ ಗುಣ ವಿಶೇಷಗಳ ಮೂಲಕ ಶ್ರೀ ಮದ್ವೀರಶೈವ ಮಹಾಸಭೆ ಮತ್ತು ಸಮ್ಮೇಳನಗಳನ್ನು ಸಂಘಟಿಸಲು ಯಶಸ್ವಿಗೊಳಿಸಲು ಸಾಧ್ಯವಾಯಿತೆನ್ನಬಹುದು