
ಅಖಿಲಭಾರತ ವೀರಶೈವ ಮಹಾಸಭೆ ಅಧ್ಯಕ್ಷರು
ಅಖಿಲಭಾರತ ವೀರಶೈವ ಮಹಾಸಭೆ ಅಧ್ಯಕ್ಷರು
ಲೇಖಕರು :ಪ್ರಕಾಶ ಗಿರಿಮಲ್ಲನವರು
ಹಾನಗಲ್ಲ ಕುಮಾರ ಶಿವಯೋಗಿಗಳು ಸಂಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ೨೪ ಅಧಿವೇಶನಗಳು ಜರುಗಿದ್ದು, ಸಮಾಜವನ್ನು ಮುನ್ನಡೆಸಿದ ಗಣ್ಯರು ಈ ಅಧಿವೇಶನಗಳ ಘನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ ಜೀವನ ಸಾಧನೆಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ತ್ಯಾಗವೀರ ಶಿರಸಂಗಿ ಲಿಂಗರಾಜರು (1861-1906) :
ಬೆಳಗಾವಿ ಜಿಲ್ಲೆಯ ಶಿರಸಂಗಿ ಸಂಸ್ಥಾನ ಇತಿಹಾಸದಲ್ಲಿ ಅಚ್ಚಳಿಯದೆ ಹೆಸರು ಮೂಡಿಸಿದ ದೇಸಗತಿ. ಇದಕ್ಕೆ ಕಾರಣ ತ್ಯಾಗವೀರ ಲಿಂಗರಾಜ ದೇಸಾಯಿ. 1861 ಜನವರಿ 10 ರಂದು ಶಿಗ್ಲಿ ಗ್ರಾಮದ ಕುಡುಒಕ್ಕಲಿಗ ವೀರಶೈವ ಮನೆತನದಲ್ಲಿ ಜನಿಸಿದ ಲಿಂಗರಾಜರು ದೈವಸಂಕಲ್ಪದಿಂದ ಶಿರಸಂಗಿ ಸಂಸ್ಥಾನದ ದತ್ತಕ ಪುತ್ರರಾಗಿ ಬಂದರು. ಶಿರಸಂಗಿ-ನವಲಗುಂದ ಸಂಸ್ಥಾನದ ಗಂಗಾಬಾಯಿ ಇವರನ್ನು ಸ್ವಂತ ಮಗನಂತೆ ಬೆಳೆಸಿದರು; ಹಾಗೇ ಕೊಲ್ಲಾಪುರದಲ್ಲಿಟ್ಟು ಆಧುನಿಕ ಶಿಕ್ಷಣ ದೊರೆಯುವಂತೆ ನೋಡಿಕೊಂಡರು. ಮಾತೃವಾತ್ಸಲ್ಯದ ಗಂಗಾಬಾಯಿ ಆಕಸ್ಮಿಕವಾಗಿ ಲಿಂಗೈಕ್ಯರಾದ ನಂತರ ಲಿಂಗರಾಜರ ವಿದ್ಯಾಭ್ಯಾಸ ನಿಂತು ಹೋಯಿತು. ಸಂಸ್ಥಾನದ ಜವಾಬ್ದಾರಿಯನ್ನು ಹೊರುವ ಕಾಲಕ್ಕೆ ಉಮಾಬಾಯಿಯವರು ಸಂಸ್ಥಾನದ ಸಮಸ್ತ ಆಸ್ತಿಗೆ ನಾವು ಮಾಲಿಕರೆಂದು ಕೋರ್ಟಿನಲ್ಲಿ ದಾವೆ ಹೂಡಿದರು. ಅರಮನೆ ಸೆರೆಮನೆಯಾಯಿತು. ಅನೇಕ ಕಷ್ಟ ನಷ್ಟಗಳನ್ನು ಎದುರಿಸ ಬೇಕಾಯಿತು. ಕೊನೆಗೆ ಕೋರ್ಟಿನಲ್ಲಿ ಲಿಂಗರಾಜರ ದತ್ತಕ ವಾರಸಾ ಖಾಯಂ ಆಯಿತು.
ಹಾನಗಲ್ಲ ಕುಮಾರ ಶಿವಯೋಗಿಗಳು, ಅಥಣಿ ಮುರುಘೇಂದ್ರ ಶಿವಯೋಗಿಗಳು, ಚಿತ್ರದುರ್ಗದ ಜಯದೇವ ಜಗದ್ಗುರುಗಳು ಮೊದಲಾದ ಪೂಜ್ಯರ ಪ್ರೀತಿಗೆ ಪಾತ್ರರಾಗಿದ್ದ ಲಿಂಗರಾಜರು ಧಾರವಾಡದಲ್ಲಿ 1904 ಮೇ 13, 14 ಮತ್ತು 15 ರಂದು ಜರುಗಿದ ಅಖಿಲ ಭಾರತ ವೀರಶೈವ ಮಹಾಸಭೆಯ 1 ನೆಯ ಅಧಿವೇಶನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನದಿಂದ ಲಿಂಗರಾಜರು ಮಾತನಾಡುತ್ತ ನಮ್ಮ ಲಿಂಗಾಯತ ಸಮಾಜವು ಭವಿಷ್ಯತ್ತಿನಲ್ಲಿ ಯಾವ ರೀತಿ ಅಭಿವೃದ್ಧಿ ಹೊಂದಬೇಕೆಂಬ ಕಳಕಳಿಯ ಸಂದೇಶ ನೀಡಿದರು.
1905 ಜುಲೈ 13, 14 ಮತ್ತು 15 ರಂದು ಬೆಂಗಳೂರಿನಲ್ಲಿ ಜರುಗಿದ ಅ.ಭಾ. ವೀರಶೈವ ಮಹಾಸಭೆಯ 2ನೆಯ ಅಧಿವೇಶನಕ್ಕೂ ಲಿಂಗರಾಜರೇ ಅಧ್ಯಕ್ಷರಾಗಿ ಆಯ್ಕೆಯಾದರು.
ಲಿಂಗಾಯತ ಸಮಾಜದ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ ಲಿಂಗರಾಜರು 23 ಆಗಸ್ಟ್ 1906 ರಂದು ಗಣೇಶ ಚತುರ್ಥಿ ದಿನ ಲಿಂಗೈಕ್ಯರಾದರು. ಲಿಂಗೈಕ್ಯರಾಗುವ ಮುಂಚೆ ಮಹಾದಾನ ಪತ್ರವೊಂದನ್ನು ಬರೆದಿಟ್ಟರು. ಅಂದಿನ ಬ್ರಿಟಿಷ್ ಜಿಲ್ಲಾಧಿಕಾರಿಗಳ ಮುಂದೆ ಇಚ್ಛಾಪತ್ರ ತೆಗೆದು ಓದಿದಾಗ, ಲಿಂಗರಾಜರು ತಮ್ಮ ಸಂಸ್ಥಾನದ ಸಮಸ್ತ ಆಸ್ತಿಯನ್ನು ಸಮಾಜಕ್ಕೆ ಧಾರೆಯೆರೆದಿದ್ದರು. ಪುತ್ರಸಂತಾನ ಇಲ್ಲದ ಕಾರಣ ಸಮಾಜದ ಬಡಮಕ್ಕಳೆ ನನ್ನ ಮಕ್ಕಳೆಂದು ಭಾವಿಸಿ ತಮ್ಮ ಎಲ್ಲ ಆಸ್ತಿಯನ್ನು ಸಮಾಜಕ್ಕೆ ಅರ್ಪಿಸಿದ್ದರು. ಇದನ್ನು ನೋಡಿದ ಆಂಗ್ಲ ಅಧಿಕಾರಿಗಳು ‘ನೂರಾರು ವರ್ಷ ಕಳೆದರೂ ಇಂಥ ಮಹಾದಾನಿಯನ್ನು ಕಾಣಲಾರೆವು’ ಎಂದು ಉದ್ಗರಿಸಿದರು.
ಕೆ.ಪಿ. ಪುಟ್ಟಣ್ಣಶೆಟ್ಟರು (1856-1938) :
ರಾಜಸೇವಾಸಕ್ತ, ದಿವಾನ್ ಬಹದ್ದೂರ್ ಸರ್ ಕೆ.ಪಿ. ಪುಟ್ಟಣ್ಣಶೆಟ್ಟರು ನಮ್ಮ ನಾಡು ಕಂಡ ಅಪರೂಪದ ವ್ಯಕ್ತಿಗಳು. ಆಧುನಿಕ ಲಿಂಗಾಯತ ಸಮಾಜವನ್ನು ಉದ್ಧರಿಸಿದ ಪುಣ್ಯ ಪುರುಷರಲ್ಲಿ ಅವರೂ ಒಬ್ಬರು.
೨೯ ಏಪ್ರಿಲ್ ೧೮೫೬ ರಲ್ಲಿ ತಮಿಳುನಾಡಿನ ಹೊಸೂರು ಗ್ರಾಮದಲ್ಲಿ ಜನನ. ತಂದೆ ಯಲ್ಲಪ್ಪ, ತಾಯಿ ಯಲ್ಲಮ್ಮ. ೧೮೭೫ ರಲ್ಲಿ ಗುಮಾಸ್ತರಾಗಿ ನೌಕರಿಗೆ ಸೇರಿದರು. ತಮ್ಮ ಸ್ವಸಾಮರ್ಥ್ಯ ಮತ್ತು ಅಪಾರ ಪರಿಶ್ರಮದಿಂದ ೧೮೮೬ ರಲ್ಲಿ ಅಸಿಸ್ಟೆಂಟ್ ಕಮೀಶನರ್, 1898ರಲ್ಲಿ ಡೆಪ್ಯೂಟಿ ಕಮಿಶನರ್ ಆಗಿ ಸೇವೆ ಸಲ್ಲಿಸಿದರು. ೧೯೧೧ ರಲ್ಲಿ ಸಚಿವರಾಗಿ ಆಯ್ಕೆಯಾದರು. ೧೯೧೨ರಲ್ಲಿ ಸೇವೆಯಿಂದ ನಿವೃತ್ತರಾದರು.
೧೯೧೭ರಲ್ಲಿ ಮೈಸೂರು ಬ್ಯಾಂಕ್ ಪಾರಂಭಿಸಿದರು. ೧೯೨೫ ರಲ್ಲಿ ಸರ್ ಪದವಿ ಲಭಿಸಿತು. ೧೯೩೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿತು. ೧೯೨೧ ಚಿಕ್ಕಮಗಳೂರಿನಲ್ಲಿ ಜರುಗಿದ ಅಖಿಲ ಭಾರತ ೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ೧೯೩೫ ರಲ್ಲಿ ಬೆಂಗಳೂರು ನಗರದಲ್ಲಿ ಇವರ ಹೆಸರನ್ನು ಚಿರಸ್ಥಾಯಿಗೊಳಿಸುವವ ಸರ್ ಕೆ.ಪಿ. ಪುಟ್ಟಣ್ಣಚೆಟ್ಟಿ ಪುರಭವನ ಪಾರಂಭಿಸಲ್ಪಟ್ಟಿತು
೧೯೦೭ ರಲ್ಲಿ ಸೊಲ್ಲಾಪುರದಲ್ಲಿ ಮತ್ತು೧೯೧೭ ಯಲ್ಲಿ ಜರುಗಿದ ಅ.ಭಾ. ವೀರಶೈವ ಮಹಾಸಭೆಯ ಅಧಿವೇಶನಗಳಿಗೆ ಪುಟ್ಟಣಶೆಟ್ಟರು ಅಧ್ಯಕ್ಷರಾಗಿದ್ದರು. ದಾವಣಗೆರೆ ಅಧಿವೇಶನ ಕಾಲಕ್ಕೆ ಮಹಾಸಭೆಗೆ ನಿಧಿ ಕೂಡಿಸಿ ಚಿರಸ್ಥಾಯಿ ನಿಧಿ ಮಾಡಿದ ಶ್ರೇಯಸು ಪುಟ್ಟಣ್ಣಶೆಟ್ಟರುದು.
ಪುಟ್ಟಣ್ಣಶೆಟ್ಟರು ಲಿಂಗೈಕ್ಯರಾಗುವ ಮೂರು ದಿನ ಮೊದಲು ೧೯೩೮ ಜುಲೈ ೩೦ ರಂದು ದಿವಾನ್ ಸಬ್ ಮಿರ್ಜಾ ಇಸ್ಮಾಯಿಲ್ ಅವರಿಂದ ಅವರು ಕಟ್ಟಿಸಿದ ವೀರಶೈವ ಉಚಿತ ಪ್ರಸಾದ ನಿಲಯ ಬಡಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಿದರು.
ರಾಜಾ ಲಖಮಗೌಡರು (೧೮೬೪-೧೯೪೩):
ಬೆಳಗಾವ ಜಿಲ್ಲೆಯ ವಂಟಮುರಿ ಸಂಸ್ಥಾನದ ಅಧಿಪತಿಗಳಾಗಿದ್ದ ರಾಜಾ ಲಖಮಗೌಡರು ಸಮಾಜಕ್ಕೆ ಸಲ್ಲಿಸಿದ ಸೇವೆ ಅಪಾರವಾದುದು. ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ಅಲಗೌಡ-ಕೃಷ್ಣಾಬಾಯಿ ಶರಣ ದಂಪತಿಗಳ ಮಗನಾಗಿ ದಿನಾಂಕ ೨೯ ಜುಲೈ ೧೮೬೪ ರಂದು ಲಖನಗೌಡರು ಜನ್ಮತಾಳಿದರು. ೧೮೭೭ ರಲ್ಲಿ ಆಕಸ್ಮಿಕವಾಗಿ ವಂಟಮುರಿ ಸಂಸ್ಥಾನವದ ೧೯ನೇ ಅಧಿಪತಿಯಾಗಿ ಅಧಿಕಾರ ವಹಿಸಿಕೊಂಡರು.
ಲಖಮಗೌಡರು ಉಚ್ಚ ಶಿಕ್ಷಣ ಪಡೆಯಲು ೧೮೮೬ ರಲ್ಲಿ ಇಂಗ್ಲೆಂಡಿಗೆ ಹೋದರು. ೧೮೮೮ರಲ್ಲಿ ಬಾರ್ ಅಟ್ ಲಾ ಪದವಿ ಸಂಪಾದಿಸಿ ತಾಯ್ನಾಡಿಗೆ ಮರಳಿದರು. ಬ್ರಿಟಿಷ್ ಸರ್ಕಾರ ಇವರನ್ನು ಪ್ರಥಮ ದರ್ಜೆ ನ್ಯಾಯಾಧೀಶರೆಂದು ನೇಮಕ ಮಾಡಿತು. ೨೦ ವರ್ಷಗಳ ಕಾಲ ಅವರು ಈ ಹುದ್ದೆಯಲ್ಲಿದ್ದರು.
ಸಂಸ್ಥಾನವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಿದರು. ೧೯೧೦ ರಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಗೆ ೫೫ ಸಾವಿರ ದಾನ ನಿಡಿದರು. ಇದೇ ವೇಳೆಗೆ ಹಾನಗಲ್ಲ ಕುಮಾರ ಶಿವಯೋಗಿಗಳು ಧಾರವಾಡಕ್ಕೆ ಬಂದು. ವೀರಶೈವ ಪ್ರಮುಖರೆಲ್ಲ ಸೇರಿ ಮಹಾಸಭೆಯೊಂದನ್ನು ಸ್ಥಾಪಿಸುವ ನಿರ್ಧಾರ ಮಾಡಿದಾಗ ಲಖಮಗೌಡರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಬಾಗಲಕೋಟೆಯಲ್ಲಿ ೪ನೇ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನ ೧೯೦೮ ಡಿಸೆಂಬರ್ ೨೮, ೨೯ ಮತ್ತು ೩೦ ರಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಅಧಿವೇಶನದ ಸರ್ವಾಧ್ಯಕ್ಷತೆಯು ರಾಜಾ ಲಖಮಗೌಡರ ಪಾಲಿಗೆ ಬಂದಿತು.
ಬ್ರಿಟಿಷ್ ಸರ್ಕಾರ ಇವರ ಸೇವೆಯನ್ನು ಪರಿಗಣಿಸಿ ಸಿ.ಐ.ಇ. ಪದವಿಯನ್ನೂ, ಪದಕವನ್ನೂ ನೀಡಿ ಗೌರವಿಸಿತು. ೧೯೩೦ರಲ್ಲಿ ‘ರಾಜಾ’ ಎಂಬ ಬಿರುದನ್ನು ಕೊಟ್ಟು ಗೌರವಿಸಿತು. ಜಾತಿ-ಮತ- ಪಂಥ ಮೀರಿ ಇತರ ಶಿಕ್ಷಣ ಸಂಸ್ಥೆಗಳಿಗೂ ದಾನ ನೀಡಿದರು. ಬೆಳಗಾವಿಯಲ್ಲಿ ಅವರ ಹೆಸರಿನಲ್ಲಿ ಒಂದು ಕಾನೂನು ಮಹಾ ವಿದ್ಯಾಲಯ, ಒಂದು ಪಿ.ಯು. ವಿಜ್ಞಾನ ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಕಾಮಧೇನುಗಳಾಗಿವೆ. ೧೯೪೩ ರಲ್ಲಿ ರಾಜಾ ಲಖಮಗೌಡರು ಲಿಂಗೈಕ್ಯರಾದರು. ಘಟಪ್ರಭಾ ನದಿ ದಡದ ಮೇಲಿದ್ದ ವಂಟಮುರಿ ಸಂಸ್ಥಾನಕ್ಕೆ ೩೦೦ ಗ್ರಾಮಗಳ ಆಡಳಿತವಿತ್ತು. ಆದರೆ ೧೯೭೬ ರಲ್ಲಿ ಹಿಡಕಲ್ ಜಲಾಶಯದಲ್ಲಿ ಇಂಥ ಭವ್ಯ ಸಂಸ್ಥಾನವನ್ನೊಳಗೊಂಡ ವಂಟಮುರಿ ಗ್ರಾಮವು ಮುಳುಗಿಹೋಯಿತು.
ವಾರದ ಮಲ್ಲಪ್ಪನವರು (೧೮೫೧ ೧೯೧೦) :
ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಲಿಂಗಾಯತ ಸಮಾಜವು ಅತ್ಯಂತ ಶೋಚನೀಯ ಸ್ಥಿತಿಯಲ್ಲಿತ್ತು. ಲಿಂಗಾಯತರು ತಮ್ಮ ಧರ್ಮ-ಸಂಸ್ಕೃತಿ-ಸಂಪ್ರದಾಯ-ಆಚಾರ- ವಿಚಾರಗಳ ಬಗ್ಗೆ ಅವಜ್ಞೆ ಬೆಳೆಸಿಕೊಂಡಿದ್ದ ಈ ಕಾಲದಲ್ಲಿ ಶೈಕ್ಷಣಿಕವಾಗಿಯೂ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದರು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಲಿಂಗಾಯತರ ಏಳ್ಗೆಗಾಗಿ ದುಡಿದ ಪ್ರಾತಃಸ್ಮರಣೀಯ ಪುಣ್ಯ ಪುರುಷರಲ್ಲಿ ವಾರದ ಮಲ್ಲಪ್ಪನವರ ಹೆಸರು ಅತ್ಯಂತ ಗಮನೀಯ.
ಮಲ್ಲಪ್ಪನವರು ವಾರದ ಮನೆತನದ ಬಸಪ್ಪ ಮತ್ತು ಚನ್ನಬಸವ್ವ ಬಾಯಿ ಅವರ ಪುತ್ರರಾಗಿ ಜೇಷ್ಠ ವದ್ಯ ೬ ಶಕೆ ೧೭೭೩ (ದಿನಾಂಕ 17,06.1851) ರಂದು ಜನಿಸಿದರು. ಮಲ್ಲಪ್ಪನವರ ದೊಡ್ಡಪ್ಪ ಚನ್ನಬಸಪ್ಪನವರು ಶರಣಮಾರ್ಗಾನುಸಾರಿ ಆಗಿದ್ದರು. ಬಸವತತ್ತ್ವ ನಿಷ್ಠೆಯನ್ನು ಬೆಳೆಸಿಕೊಂಡವರು. ಇಷ್ಟಲಿಂಗ ಪೂಜೆಯೊಂದನ್ನು ಬಿಟ್ಟು ಸ್ಥಾವರ ದೇವರುಗಳನ್ನು ಪೂಜಿಸಿದವರಲ್ಲ. ಜಗುಲಿ ಮೇಲಿದ್ದ ದೇವರುಗಳನ್ನೆಲ್ಲ ಬಾವಿಗೆ ಎಸೆದ ಧಿಮಂತ ಶರಣ ಜೀವಿಗಳು. ಅವರು ಮಲಪ್ಪನವರಿಗೆ ಲೋಕಜ್ಞಾನದ ಅರಿವು ಮೂಡಿಸಿದರು. ಮನೆತನದ ಮೂಲ ಉದ್ಯೋಗವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಲ್ಲಪ್ಪನವರಿಗೆ ಸಹಾಯವಾದದ್ದೇ ದೊಡ್ಡಪ್ಪನವರ ವಿಚಾರಗಳು.
ವ್ಯಾಪಾರ ಜಗತ್ತಿನಲ್ಲಿ ಅತ್ಯಂತ ಶರವೇಗದಿಂದ ಬೆಳೆದ ಮಲ್ಲಪ್ಪನವರು ದೇಶದ ನಾನಾ ಭಾಗಗಳಲ್ಲಿ ತಮ್ಮ ವ್ಯಾಪಾರ ವಹಿವಾಟು ಪ್ರಾರಂಭಿಸಿದರು. ಸೊಲ್ಲಾಪುರ, ಮುಂಬೈ, ವಾರಂಗಲ್, ವಿಜಯವಾಡ, ತಾಂಡೂರು, ಯಾದಗಿರಿ, ತಿಪಟೂರು, ಪರಭಣಿ, ಪುಣೆ, ಜಾಲನಾ ಮುಂತಾದ ಊರುಗಳಲ್ಲಿ ಅಡತಿ ಅಂಗಡಿಗಳನ್ನು ಪ್ರಾರಂಭಿಸಿ, ಯಾವ ಅಂಗಡಿಯೂ ನಷ್ಟವಾಗದಂತೆ ಜಾಗ್ರತೆ ವಹಿಸಿದ್ದರು. ಇಂಗ್ಲೆಂಡಿನ ವಿಕ್ಟೋರಿಯ ಮಹಾರಾಣಿ ಕಾಲದ ಭಾರತದ ೧೨ ಜನ ಅತ್ಯಂತ ಶ್ರೀಮಂತ ವ್ಯಾಪಾರಸ್ಥರಲ್ಲಿ ಇವರೂ ಒಬ್ಬರಾಗಿದ್ದು ಲಿಂಗಾಯತರು ಹೆಮ್ಮೆ ಪಡಬೇಕಾದ ಸಂಗತಿ ಯೆನಿಸಿದೆ. ಪ್ರಸ್ತುತ ದಿನಮಾನದಲ್ಲಿ ಇಂದು ಅಂಬಾನಿ, ಲಕ್ಷ್ಮಿಮಿತ್ತಲ್ ಮುಂತಾದ ಶ್ರೀಮಂತರ ಪಟ್ಟಿಯಂತೆ ಅಂದಿನ ಶ್ರೀಮಂತ ವ್ಯಾಪಾರಸ್ಥರಲ್ಲಿ ಮಲ್ಲಪ್ಪನವರು ಸ್ಥಾನ ಪಡೆದದ್ದು ಅವರ ಕಾಯಕ ಪ್ರಜ್ಞೆಯ ಅನುಷ್ಠಾನದಿಂದ ಎಂದರೆ ಅತಿಶಯೋಕ್ತಿಯೆನಿಸಲಾರದು.
ಚಾಣಾಕ್ಷ ವ್ಯಾಪಾರಿಗಳಾಗಿದ್ದ ಮಲ್ಲಪ್ಪನವರು ಕೃಷಿ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದವರು. ಇಡೀ ದೇಶದಲ್ಲಿ ಕಬ್ಬು ಬೆಳೆಯನ್ನು ಮೊದಲು ಪ್ರಾರಂಭಿಸಿದರು. ಅಷ್ಟೇ ಅಲ್ಲ ಸಕ್ಕರೆ ತಯಾರಿಸುವ ಯಂತ್ರವನ್ನು ಇಂಗ್ಲೆಂಡ್‌ನಿಂದ ತರಿಸಿ, ಸಕ್ಕರೆ ಉತ್ಪಾದಿಸುವ ಮಹತ್ವದ ಕಾರ್ಯ ಮಾಡಿದರು. ಇದು ಇಡೀ ದೇಶದಲ್ಲಿ ಮೊದಲ ಪ್ರಯತ್ನವೆಂದು ಹೇಳಬಹುದು. ಒಕ್ಕಲುತನದಲ್ಲಿ ನೂತನ-ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಅಧಿಕ ಇಳುವರಿ ತೆಗೆಯುವ ಮಲ್ಲಪ್ಪನವರ ಕೃಷಿಜ್ಞಾನ ಅಪೂರ್ವವಾಗಿತ್ತು.
ಅಖಿಲ ಭಾರತ ವೀರಶೈವ ಮಹಾಸಭೆಗೂ ಮಲ್ಲಪ್ಪನವರಿಗೂ ಅನನ್ಯವಾದ ಸಂಬಂಧವಿತ್ತು. ಮಹಾಸಭೆಯನ್ನು ಸ್ಥಾಪಿಸಬೇಕೆಂಬ ಮುಂದಾಳುಗಳಲ್ಲಿ ಇವರೂ ಒಬ್ಬರಾಗಿದ್ದರು. ಬಾಗಲಕೋಟೆಯಲ್ಲಿ ಜರುಗಿದ ೪ ನೇ ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಮಲ್ಲಪ್ಪನವರು ಭಾಗವಹಿಸಿದ್ದರು. ಆ ಅಧಿವೇಶನದಲ್ಲಿ ಲಿಂಗಾಯತ ಧರ್ಮಗುರುಗಳನ್ನು ತರಬೇತುಗೊಳಿಸುವ ಸಂಸ್ಥೆಯೊಂದನ್ನು ಪಾರಂಭಿಸಬೇಕೆಂಬ ನಿರ್ಣಯ ಪಾಸಾಯಿತು. ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಒಂದು ಕಮಿಟಿ ನೇಮಕವಾಯಿತು. ಶಾಂತವೀರಪ್ಪ ಮೆಣಸಿನಕಾಯಿ, ಕಿತ್ತೂರ ಅಡಿವೆಪ್ಪ ಮೊದಲಾದ ಹಿರಿಯರು ಸದಸ್ಯರಾಗಿದ್ದರ.
ವಾರದ ಮಲ್ಲಪ್ಪನವರು ಬಳ್ಳಾರಿಯಲ್ಲಿ ಜರುಗಿದ ಅ.ಭಾ. ವೀರಶೈವ ಮಹಾಸಭೆಯ ೫ ನೇ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು. ಸಮಾಜದ ಮುನ್ನಡೆಗೆ ಬೇಕಾದ ಸಂಘಟನಾತ್ಮಕ ವಿಷಯಗಳನ್ನು ಕುರಿತು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪಿಸಿದರು. ಶ್ರೇಣೀಕೃತ ಸಮಾಜದಲ್ಲಿ ಲಿಂಗಾಯತರು ತಮ್ಮ ಸ್ವಾಭಿಮಾನ ಸ್ವಂತಿಕೆಗಳನ್ನು ಅರಿತುಕೊಂಡು ಬದುಕಬೇಕೆಂಬುದು ಮಲ್ಲಪ್ಪನವರ ಆಶಯವಾಗಿತ್ತು.
ಮಲ್ಲಪ್ಪನವರಿಗೆ ಸದಾಕಾಲ ಲಿಂಗಾಯತ ಸಮಾಜದ ಕುರಿತು ಚಿಂತೆ ಇದ್ದೇ ಇತ್ತು. ಸಮಾಜದ ಅಸ್ತಿತ್ವಕ್ಕೆ ಧಕ್ಕೆ ಉಂಟಾದಂಥ ಸಂದರ್ಭಗಳಲ್ಲಿ ಮಲ್ಲಪ್ಪನವರು ಮಧ್ಯಸ್ಥಿಕೆ ವಹಿಸಿ, ಸಮಾಜದ ಐಕ್ಯತೆಯನ್ನು ಕಾಪಾಡುತ್ತಿದ್ದರು.
ಸೊಲ್ಲಾಪುರದ ಸಿದ್ಧರಾಮೇಶ್ವರ ದೇವಾಲಯದ ಅರ್ಚಕರಿಗೆ ದೇಹದ ಮೇಲೆ ಇಷ್ಟಲಿಂಗ ಇರಲಿಲ್ಲ. ಅವರಿಗೆ ಲಿಂಗಧಾರಣೆ ಮಾಡಿಸಿದವರು ಮಲ್ಲಪ್ಪನವರು. ನಾವೆಲ್ಲ ಇಲ್ಲಿಯವರೆಗೆ ‘ಬಸವ ಜಯಂತಿಯನ್ನು ಹರ್ಡೇಕರ ಮಂಜಪ್ಪನವರು ೧೯೧೩ ರಲ್ಲಿ ದಾವಣಗೆರೆಯಲ್ಲಿ ಪ್ರಾರಂಭಿಸಿದರೆ, ಅದನ್ನು ಮೊಟ್ಟಮೊದಲು ಸೊಲ್ಲಾಪುರದಲ್ಲಿ ಪ್ರಾರಂಭ ಮಾಡಿದ ಕೀರ್ತಿ ವಾರದ ಮಲ್ಲಪ್ಪ ನವರಿಗೆ ಸಲ್ಲುತ್ತದೆ.
ಆಹಮದ್‌ನಗರದಲ್ಲಿ ನಡೆದ ಒಂದು ಘಟನೆಗೆ ಸಂಬಂಧಿಸಿ ಮುಂಬೈ ಕೋರ್ಟಿನಲ್ಲಿ ಬ್ರಾಹ್ಮಣರು ಲಿಂಗಾಯತರ ವಿರುದ್ಧ ದಾವೆ ಹೂಡಿದ್ದರು. ಮುಂಬೈ ಉಚ್ಛನ್ಯಾಯಾಲಯವು ಲಿಂಗಾಯತರು ಶೂದ್ರರು ಎಂದು ತೀರ್ಪು ನೀಡಿತು. ಹೈದ್ರಾಬಾದ ಪರಳಿ ಪ್ರಕರಣ ದಲ್ಲಿಯೂ ಲಿಂಗಾಯತರನ್ನು ಶೂದ್ರರನ್ನಾಗಿ ಪರಿಗಣಿಸಲಾಗಿತ್ತು. ಲಿಂಗಾಯತರು ಶೂದ್ರರಲ್ಲ, ಅವರು ಶ್ರೇಷ್ಠರು ಎಂದು ಸಾಬೀತು ಪಡಿಸಬೇಕಾದ ಒಂದು ಅನಿವಾರ್ಯತೆ ಸಮಾಜದ ಮುಂದಾಳುಗಳ ಮೇಲೆ ಬಿತ್ತು. ಆಗ ತಮ್ಮ ಧರ್ಮವೂ ಅತ್ಯಂತ ಪ್ರಾಚೀನ ಮತ್ತು ಉಚ್ಚಮಟ್ಟದ್ದು ಎಂದು ತೋರಿಸಲು ವಾರದ ಮಲ್ಲಪ್ಪನವರು ಸೊಲ್ಲಾಪುರ ಪ್ರಾಂತ್ಯದಲ್ಲಿ ‘ಲಿಂಗೀ ಬ್ರಾಹ್ಮಣ ಗ್ರಂಥಮಾಲೆ’ ಪ್ರಾರಂಭಿಸುವ ಮೂಲಕ ಸಂಸ್ಕೃತ ಬಲ್ಲ ಪ೦ಡಿತರಿಂದ ಲಿಂಗಾಯತ ಸಾಹಿತ್ಯವನ್ನು ಸಂಸ್ಕೃತದಲ್ಲಿ ಅನುಕೂಲವಾಗುವಂತೆ ಬರೆಸಿ, ಪ್ರಕಟಿಸಿದರು. ಮೈಸೂರು ಪ್ರಾಂತ್ಯದಲ್ಲಿ ಯಜಮಾನ ವೀರಸಂಗಪ್ಪ ನವರು, ಕರಿಬಸವಶಾಸ್ತ್ರಿ ಮೊದಲಾದವರು ‘ಮೈಸೂರು ಸ್ಟಾರ್’ ಪತ್ರಿಕೆ ಪ್ರಾರಂಭಿಸುವ ಮೂಲಕ ಲಿಂಗಾಯತರು ಬ್ರಾಹ್ಮಣರಿಗಿಂತ ಶ್ರೇಷ್ಠರು ಎಂದು ಸಾಬೀತು ಪಡಿಸುವ ಪ್ರಯತ್ನ ಮಾಡಿದರು. ಹೀಗಾಗಿ ಲಿಂಗಾಯತ ಧರ್ಮ ಎಂಬುದರ ಬದಲಾಗಿ ವೀರಶೈವ ಧರ್ಮ ಎಂಬ ಹೆಸರು ಹೆಚ್ಚು ಪ್ರಸಿದ್ಧಿ ಪಡೆಯುತ್ತ ಹೋಯಿತು. ಈ ಬೆಳವಣಿಗೆಗಳು ಆ ಕಾಲದ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಸಹಜವಾಗಿ ನಡೆದು ಹೋಗಿದ್ದವು. ಆದರೆ ಇಂದು ಲಿಂಗಾಯತರು ಅದನ್ನು ಅರ್ಥ ಮಾಡಿಕೊಳ್ಳದೆ, ಲಿಂಗಾಯತ ಪದಕ್ಕಿಂತಲೂ ವೀರಶೈವ ಪದವೇ ಶ್ರೇಷ್ಠ ಎಂದು ವಿತಂಡವಾದ ಮಾಡುತ್ತಿರುವರು, ನೂರು ವರ್ಷಗಳ ಹಿಂದೆ ಯಾವ ಲಿಂಗಾಯತರು ತಾವು ‘ವೀರಶೈವ’ ರಂದು ಸಿದ್ಧಮಾಡಲು ಹೆಣಗಾಡಿದ್ದರೋ, ಅದೇ ಜನ ಇವತ್ತು ನಾವು ‘ಲಿಂಗಾಯತ’ ರು ಎಂದು ಸಿದ್ಧಮಾಡಲು ಪ್ರಯತ್ನಿಸುವಂತಾಗಿದೆ.
ವಾರದ ಮಲ್ಲಪ್ಪನವರಿಗೆ ಲಿಂಗಾಯತ ಸಮಾಜದ ಯುವಕರು ಚೆನ್ನಾಗಿ ಓದಿ ಮುಂದೆ ಬರಬೇಕೆಂಬ ಒತ್ತು ಬಲವಾಗಿತ್ತು. ಲಿಂಗಾಯತ ಯುವಕರು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಬೇಕೆಂಬುದು ಅವರ ಹೆಬ್ಬಯಕೆ, ಕೆಲವು ಯುವಕರಿಗೆ ಆರ್ಥಿಕ ಸಹಾಯ ನೀಡಿ ಇಂಗ್ಲೆಂಡಿಗೆ ಕಳಿಸುವ ವ್ಯವಸ್ಥೆಯನ್ನೂ ಮಾಡಿದ್ದರು. ಹೀಗೆ ವಾರದ ಮಲ್ಲಪ್ಪನವರು ಲಿಂಗಾಯತ ಸಮಾಜದ ಏಳ್ಗೆಗಾಗಿಯೇ ಅಹರ್ನಿಶಿ ದುಡಿದು ಪ್ರಾತಃಸ್ಮರಣೀಯರೆನಿಸಿವರು
ಶ್ರೀ ಮಂತ ಸರದಾರ ಬುಳ್ಳಪ್ಪ ಬಸವಂತರಾವ ಮಾಮಲೇ ದೇಸಾಯಿ.
ಸಂಸ್ಥಾನ ಹಂದಿಗನೂರ, ಜಿಲ್ಲಾ ಧಾರವಾಡ (1876-1957)
ಶ್ರೀಮಂತ ಸರದಾರ ಬುಳ್ಳಪ್ಪನವರು ಪ್ರಖ್ಯಾತ ಮಾಮಲೇ ದೇಸಾಯಿ ಇನಾಮದಾರರ ಮನೆತನದಲ್ಲಿ 16 ಮಾರ್ಚ್ 1876 ರಂದು ಜನಿಸಿದರು. ಸಂಸ್ಥಾನದ 14ನೇ ವಾರಸುದಾರರಾಗಿ ಬುಳ್ಳಪ್ಪನವರು ಅಧಿಕಾರ ವಹಿಸಿಕೊಂಡರು. ಬೆಳಗಾವಿ ಸರ್ದಾರ ಹೈಸ್ಕೂಲಿನಲ್ಲಿ ಶಿಕ್ಷಣ ಪಡೆದು ಬುಳ್ಳಪ್ಪನವರು ಚಿಕ್ಕ ವಯಸ್ಸಿನಲ್ಲಿಯೇ ಸಂಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪ್ರಸಂಗ ಬಂತು.
ಗುರು-ಲಿಂಗ-ಜಂಗಮ ಪ್ರೇಮಿಗಳಾಗಿದ್ದ ಸರದಾರರು ಸದಾಕಾಲ ಧರ್ಮ ಮತ್ತು ದಾಸೋಹ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅರಟಾಳ ರುದ್ರಗೌಡರು, ರಾಜಾ ಲಖಮಗೌಡರು, ಮೆಣಸಿನಕಾಯಿ ಶಾಂತವೀರಪ್ಪನವರು, ಕೆ.ಪಿ. ಪುಟ್ಟಣಶೆಟ್ಟರು ಮೊದಲಾದವರ ಸಮಕಾಲೀನರಾಗಿದ್ದ ಬುಳ್ಳಪ್ಪ ನವರು ಅವರ ಆತ್ಮೀಯ ಸ್ನೇಹಿತರೂ ಆಗಿದ್ದರು. ಸಮಾಜದ ಅಭಿವೃದ್ಧಿಯ ಕನಸನ್ನೇ ಕಾಣುತ್ತಿದ್ದ ಈ ತ್ಯಾಗಜೀವಿಗಳ ಸಂಪರ್ಕದಿಂದ ಬುಳ್ಳಪ್ಪನವರು ಸಂಸ್ಥಾನದಿಂದ ದಾನ ದಾಸೋಹ ವನ್ನು ಅಪಾರ ಪ್ರಮಾಣದಲ್ಲಿ ಮಾಡಿದರು. ಇವರ ಅತುಲ ಸೇವಾ ಸಾಮರ್ಥ್ಯವನ್ನು ಪರಿಗಣಿಸಿ ಬೆಳಗಾವಿಯಲ್ಲಿ ಜರುಗಿದ ಅ.ಭಾ. ವೀ. ಮಹಾಸಭಾ 6 ನೇ ಅಧಿವೇಶನಕ್ಕೆ ಸರ್ವಾಧ್ಯಕ್ಷರನ್ನಾಗಿ ಮಾಡಲಾಯಿತು. ಕೆ.ಎಲ್.ಇ. ಸಂಸ್ಥೆ, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಕರ್ನಾಟಕ ಕಾಲೇಜು ಮುಂತಾದ ಸಂಸ್ಥೆಗಳಿಗೆ ದಾನ ನೀಡಿ ಕೊಡುಗೈ ದಾನಿಯೆನಿಸಿದ್ದ ಬುಳ್ಳಪ್ಪ ದೇಸಾಯಿ ಅವರು 1 ಮತ್ತು 2ನೇ ಮಹಾಯುದ್ಧದಲ್ಲಿ ಸಹಾಯ ಮಾಡಿ ಸರ್ಕಾರದಿಂದ ಗೌರವಿಸಲ್ಪಟ್ಟಿದ್ದರು.
1918ರಲ್ಲಿ ಧಾರವಾಡದಲ್ಲಿ ಆರ್. ನರಸಿಂಹಾಚಾರ್ ಅವರ ಘನ ಅಧ್ಯಕ್ಷತೆಯಲ್ಲಿ ಜರುಗಿದ 4ನೇ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಚಿತ್ರದುರ್ಗ ಚಿನ್ಮೂಲಾದ್ರಿ ಮುರುಘರಾಜೇಂದ್ರ ಬೃಹನ್ಮಠದ ಪರಮಭಕ್ತರಾಗಿದ್ದ ಅವರು ಜಯದೇವ ಜಗದ್ಗುರುಗಳ ಆಪ್ತ ಶಿಷ್ಯರಾಗಿದ್ದರು. ಅವರು 16-5-1957 ರಂದು ತಮ್ಮ 81ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಹಂದಿಗನೂರ ದೇಸಾಯರ ಕುಟುಂಬದವರು ಹಾಡುತ್ತಿದ್ದರೆನ್ನಲಾದ, ಸ್ವಾಮಿಗಳನ್ನು ಕುರಿತ ಸ್ತೋತ್ರವೊಂದನ್ನು ಚಿತ್ರದುರ್ಗದ ಬೃಹನ್ಮಠದ ಕರ್ತೃಗದ್ದಿಗೆಂದ ಸಮ್ಮುಖದಲ್ಲಿ ಒಬ್ಬಿಬ್ಬರು ಈಗಲೂ ಹಾಡುವುದಾಗಿ ತಿಳಿಯುತ್ತದೆ.
ಅರಟಾಳ ರುದ್ರಗೌಡರು (1851-1932)
19ನೇ ಶತಮಾನದ ಉತ್ತರಾರ್ಧದಲ್ಲಿ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದ್ದ ಲಿಂಗಾಯತ ಸಮಾಜವನ್ನು ಪುನರುದ್ಧರಿಸಿದ ಕೀರ್ತಿ ಅರಟಾಳ ರುದ್ರಗೌಡರಿಗೆ ಸಲ್ಲುತ್ತದೆ.
ಕುಂದಗೋಳ ತಾಲೂಕಿನ ಅರಟಾಳ ಗ್ರಾಮದ ಚೇನ್ನವೀರಗೌಡ ಮತ್ತು ರುದ್ರಮ್ಮನವರ ಸುಪುತ್ರರಾಗಿ ರುದ್ರಗೌಡರು 22 ಮಾರ್ಚ 1851 ರಂದು ಜನಿಸಿದರು. ಹುಬ್ಬಳ್ಳಿಯಲ್ಲಿ ಪ್ರೌಢಶಾಲೆ ವ್ಯಾಸಂಗ ಮುಗಿಸಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ಹೋಗಬೇಕೆಂದು ಎಷ್ಟು ಪ್ರಯತ್ನ ಪಟ್ಟರೂ ಕೈಗೂಡಲಿಲ್ಲ.
ಸರ್ಕಾರಿ ಕಾರಕೂನರಾಗಿ ಸೇವೆ ಪ್ರಾರಂಭಿಸಿದ ರುದ್ರಗೌಡರು ತಮ್ಮ ಅಪಾರ ಪರಿಶ್ರಮ ಮತ್ತು ಛಲದಿಂದ ಸರ್ಕಾರದ ಅನೇಕ ಹುದ್ದೆಗಳಲ್ಲಿ ಪದೋನ್ನತಿ ನಡೆಯುತ್ತ ಜಿಲ್ಲೆಯ ಕಲೆಕ್ಟರ್ ಹುದ್ದೆ ವರೆಗೂ ಹೋದರು.
ರುದ್ರಗೌಡರ ಕಾರ್ಯದ ವ್ಯಾಪ್ತಿ ಅಪಾರವಾದುದು. ಒಬ್ಬ ವ್ಯಕ್ತಿ ಇಷ್ಟೆಲ್ಲ ಕೆಲಸ ಮಾಡಿದ ಎಂಬುದನ್ನು ಗಮನಿಸಿದರೆ ಇದೊಂದು ಪವಾಡ ಎನ್ನಿಸಬಹುದು. ಲಿಂಗಾಯತ ಸಮಾಜವು ಎಲ್ಲ ಆಯಾಮಗಳಲ್ಲಿ ಅಭಿವೃದ್ಧಿಯಾಗಬೇಕೆಂಬ ಹಂಬಲ ಇವರದಾಗಿತ್ತು. ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಆಡಳಿತಾತ್ಮಕವಾಗಿ ಹೀಗೆ ಅನೇಕ ಆಯಾಮಗಳಲ್ಲಿ ಲಿಂಗಾಯತರು ತಮ್ಮ ಅಸ್ತಿತ್ವವನ್ನು ಉಳಿಸಿ ಕೊಳ್ಳಬೇಕು ಎಂಬ ಸದಾಶಯ ಹೊಂದಿದ ರುದ್ರಗೌಡರು ಅದಕ್ಕಾಗಿ ಹಗಲಿರುಳು ಶ್ರಮಿಸಿದರು.
1912 ಡಿಸೆಂಬರ್ 26 ರಿಂದ 29ರ ವರೆಗೆ ನಿಪ್ಪಾಣಿ ನಗರದಲ್ಲಿ ಜರುಗಿದ ಏಳನೆಯ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನದ ಅಧ್ಯಕ್ಷರಾಗಿ ಅವರು ಮಾಡಿದ ಭಾಷೆಣ ಸಮಾಜಕ್ಕೆ ಚೈತನ್ಯವನ್ನು ತುಂಬುವಂಥದ್ದಾಗಿತ್ತು. ಕೆ.ಎಲ್.ಇ. ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಸಪ್ತ ಋುಷಿಗಳಿಗೆ ಪ್ರೇರಣಾಶಕ್ತಿಯಾಗಿ ನಿಂತವರು ಅರಟಾಳ ರುದ್ರಗೌಡರು. ಕೆ.ಎಲ್.ಇ. ಸಂಸ್ಥೆಯು 1916 ರಲ್ಲಿ ಒಂದು ಹೈಸ್ಕೂಲಿನೊಂದಿಗೆ ಪ್ರಾರಂಭವಾಯಿತು, ಆ ಹೈಸ್ಕೂಲಿಗೆ ರುದ್ರಗೌಡ ಮತ್ತು ಗಿಲಗಂಚಿಯವರ ಸ್ಮರಣಾರ್ಥ ‘ಗಿಲಗಂಚಿ ಅರಟಾಳ ಸ್ಕೂಲ್’ ಎಂದು ನಾಮಕರಣ ಮಾಡಲಾಯಿತು.
ಧಾರವಾಡ ಕರ್ನಾಟಕ ಕಾಲೇಜು ಸ್ಥಾಪನೆ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರವು ಲಿಂಗಾಯತ ಸಮಾಜದಿಂದ 1 ಲಕ್ಷ ರೂ. ಬ್ರಾಹ್ಮಣ ಸಮಾಜದಿಂದ 1 ಲಕ್ಷ ರೂ. ನಿಧಿ ಕೂಡಿಸಿಕೊಟ್ಟರೆ ಕಾಲೇಜಿಗೆ ಅನುಮತಿ ನೀಡಲಾಗುವುದೆಂದು ಹೇಳಿತು. ಅರಟಾಳ ರುದ್ರಗೌಡರು ಲಿಂಗಾಯತ ಸಮಾಜದ ವತಿಯಿಂದ ಅಲ್ಪಾವಧಿ ಯಲ್ಲಿ 1 ಲಕ್ಷ ಹಣ ಕೂಡಿಸಿಕೊಟ್ಟರು, ಬ್ರಾಹ್ಮಣ ಸಮಾಜದಿಂದ ರೊದ್ದ ಶ್ರೀನಿವಾಸರಾಯರಿಗೆ 1 ಲಕ್ಷ ಹಣ ಕೂಡಿಸುವುದು ಸಾಧ್ಯವಾಗಲಿಲ್ಲ. ಮತ್ಸರದಿಂದ ರುದ್ರಗೌಡರ ಮೇಲೆ ಇಲ್ಲದ ಆಪಾದನೆ ಹೊರಿಸಿದರು. ಆದರೆ ಬ್ರಿಟೀಷರು ನಿಷ್ಪಕ್ಷಪಾತ ನ್ಯಾಯ ದೃಷ್ಟಿಯಿಂದ ಅರಟಾಳ ರುದ್ರಗೌಡರು ನಿರ್ದೋಷಿಯೆಂದು ರೊದ್ದ ಶ್ರೀನಿವಾಸ ರಾಯರು ತಪ್ಪಿತಸ್ಥರೆಂದು ನಿರ್ಣಯಿಸಿದರು. ಬ್ರಾಹ್ಮಣರ ಕಿರುಕುಳದ ನಡುವೆಯೂ ಲಿಂಗಾಯತ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಆರಟಾಳ ರುದ್ರಗೌಡರು ಸದಾ ಪ್ರಾತಃಸ್ಮರಣೀಯರಾಗಿದ್ದಾರೆ. 4 ಅಕ್ಟೋಬರ್ 1932 ರಂದು ಅವಟಾಳ ರುದ್ರಗೌಡರು ಲಿಂಗೈಕ್ಯರಾದರು.
ಶಾಂತವೀರಪ್ಪ ಮೆಣಸಿನಕಾಯಿ(1857-1935)
ಧಾರವಾಡದ ವೀರಸಂಗಪ್ಪ ಭದ್ರವ್ವನವರ ಸುಪುತ್ರವರಾಗಿ 1857 ರಲ್ಲಿ ಜನಿಸಿದ ಶಾಂತವೀರಪ್ಪನವರು ಬಾಲ್ಯದಲ್ಲಿಯೇ ತಂದೆ- ತಾಯಿಗಳನ್ನು ಕಳೆಯಕೊಂಡರು. ಕಷ್ಟದ ಕುಲುಮೆಯಲ್ಲಿ ಬೆಂದ ಶಾಂತವೀರಪ್ಪನವರಿಗೆ ಡೆಪ್ಯೂಟಿ ಚೆನ್ನಬಸಪ್ಪನವರ ಕೃಪಾಶೀರ್ವಾದ ದೊರೆಯಿತು. 18ನೇ ವಯಸಿನಲ್ಲಿ ಸರ್ಕಾರಿ ಸೇವೆಗೆ ಸೇರಿದರು. ಸರ್ಕಾರದ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ 1913ರಲ್ಲಿ ನಿವೃತ್ತರಾದರು. ಬ್ರಿಟಿಷ್ ಸರ್ಕಾರ ಇವರ ಅಪಾರ ಸೇವೆಯನ್ನು ಗಮನಿಸಿ ರಾವ್ ಬಹದ್ದೂರ್ ,ದಿವಾನ್ ಬಹದ್ದೂರ್ ಬಿರುದುಗಳನ್ನು ನೀಡಿ ಗೌರವಿಸಿತು.
ಲಿಂಗಾಯತ ಸಮಾಜವು ಶೈಕ್ಷಣಿಕವಾಗಿ ಪ್ರಗತಿ ಹೊಂದ ಬೇಕೆಂಬ ಕನಸು ಕಂಡಿದ್ದ ಅವರು ಲಿಂಗಾಯತ ಎಜ್ಯುಕೇಶನ ಸಂಸ್ಥೆ ಮತ್ತು ಅದರೆ ಕಟ್ಟಡಗಳ ಬೆಳವಣಿಗೆಗಾಗಿ ಶ್ರಮಿಸಿದರು. ಸತತ 18 ವರ್ಷಗಳ ಕಾಲ ಈ ಸಂಸ್ಥೆಯ ಅಧ್ಯಕ್ಷ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 1920 ರಲ್ಲಿ ಬೀರೂರಿನಲ್ಲಿ ಜರುಗಿದ 9ನೇ ಅ.ಭಾ. ವೀರಶೈವ ಮಹಾಸಭೆ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಅವಧಿಯಲ್ಲಿ ಮಹಾಸಭೆಯ ಘಟನಾವಳಿಗಳು ರೂಪಿಸಲ್ಪಟ್ಟವು.
26 ಅಕ್ಟೋಬರ್ 1935ರಂದು ಶಾಂತವೀರಪ್ಪವರು ಲಿಂಗೈಕ್ಯರಾದರು. ಕೆ.ಸಿ.ಸಿ ಬ್ಯಾಂಕ ಸ್ಥಾಪಿಸಿದ ಕೀರ್ತಿ ಅವರದು. ಬ್ಯಾಂಕಿನ ಎದುರು ಅವರ ಶಿಲಾಪುತ್ಥಳಿ ನಿರ್ಮಿಸಲಾಗಿದೆ.
ಸಿದ್ಧಪ್ಪ ಕಂಬಳಿ (1888-1959)
ಕರ್ನಾಟಕದಲ್ಲಿ ಬ್ರಾಹ್ಮಣೇತರ ಚಳುವಳಿಯನ್ನು ರೂಪಿಸಿ ಲಿಂಗಾಯತರನ್ನು ಶ್ರೇಣಿಕೃತ ಸಮಾಜದಲ್ಲಿ ಅಭಿವೃದ್ಧಿಪಥದಲ್ಲಿ ಕರೆದೊಯ್ಯದ ಪುಣ್ಯಪುರುಷರಲ್ಲಿ ಸರ್ ಸಿದ್ಧಪ್ಪ ಕಂಬಳಿ ಇವರ ಪ್ರಮುಖ ಹೆಸರ .
11 ಸೆಪ್ಟೆಂಬರ್ 1888 ರಂದು ಹುಬ್ಬಳ್ಳಿಯಲ್ಲಿ ಜನಿಸಿದರು ತಂದೆ ತೋಟಪ್ಪ, ತಾಯಿ ಗಂಗವ್ವ ಪೂನಾದಲ್ಲಿ ವ್ಯಾಸಂಗ ಮಾಡಿದರು. 1904 ರಲ್ಲಿ ಬಿ.ಎ. ಪದವಿ ಸಂಪಾದಿಸಿದರು. ಮುಂದೆ ಎಲ್.ಎಲ್.ಬಿ. ಪರೀಕ್ಷೆಯಲ್ಲಿ ಮುಂಬೈ ರಾಜ್ಯಕ್ಕೆ ಪ್ರಥಮರಾಗಿ ಉತ್ತೀರ್ಣರಾದರು. ಹುಬ್ಬಳ್ಳಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು.
ಹುಬ್ಬಳ್ಳಿ ನಗರ ಸಭೆಯ ಅಧ್ಯಕ್ಷವಾಗಿ ಸಾರ್ವಜನ ಜೀವನಕ್ಕೆ ಕಾಲಿಟ್ಟ ಸಿದ್ದಪ್ಪನವರು 1930 ರಲ್ಲಿ ಮುಂಬೈ ಸರ್ಕಾರದಲ್ಲಿ ಕರ್ನಾಟಕದಿಂದ ಏಕಮೇವ ಮಂತ್ರಿಯಾಗಿ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿದ್ದ ಇವರ ಕಾಲದಲ್ಲಿಯೇ ಕರ್ನಾಟಕ ಕಾಲೇಜು ಮುಚ್ಚುವ ಸ್ಥಿತಿ ತಲುಪಿತ್ತು. ಇದನ್ನು ಮತ್ತೆ ಪುನರುಜ್ಜಿವನಗೊಳಿಸಿದ ಶ್ರೇಯಸ್ಸು ಇವರದು. ಬೆಳಗಾವಿ ಲಿಂಗರಾಜ ಕಾಲೇಜಿನ ಅನುಮತಿಗಾಗಿಯೂ ಅವರು ಶ್ರಮಿಸಿದರು. 1937 ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಇವರನ್ನು ಸೋಲಿಸಲು ನೆಹರೂ, ಪಟೇಲ್ ಆಧಿಯಾಗಿ ಅನೇಕರು ಶತಾಯಗತಾಯ ಪ್ರಯತ್ನ ಮಾಡಿದರು. ಆದರೆ ಇಡೀ ದೇಶದಲ್ಲಿಯೇ ಹೆಚ್ಚು ಮತ ಪಡೆದು ಕಂಬಳಿಯವರು ಆಯ್ಕೆಯಾದುದು ಅವರ ಜನಪ್ರಿಯತೆಗೆ ಹಿಡಿದ ಕನ್ನಡಿ.
1927ರಲ್ಲಿ ಬೆಂಗಳೂರಿನಲ್ಲಿ ಜರುಗಿದ 10ನೆಯ ಅ.ಭಾ. ವೀರಶೈವ ಮಹಾಸಭೆ ಅಧಿವೇಶನ ಮತ್ತು 1936 ರಲ್ಲಿ ರಾಯಚೂರಿನಲ್ಲಿ ಜರುಗಿದ 12ನೇ ಅಧಿವೇಶನಕ್ಕೆ ಸರ್ ಸಿದ್ದಪ್ಪ ಕಂಬಳಿಯವರು ಅಧ್ಯಕ್ಷರಾಗಿದ್ದರು. 26 ಏಪ್ರಿಲ್ 1959 ರಂದು ಲಿಂಗೈಕ್ಯರಾದರು.
ಡಾ. ಫ.ಗು. ಹಳಕಟ್ಟಿ (1880-1964)
‘ಹಳಕಟ್ಟಿಯಂಥವರು ಹಗಲೆಲ್ಲ ಹುಟ್ಟುವರೆ?
ಶತಕ ಸುಕೃತದ ಸಾಹಿತ್ಯ ಕೊಟ್ಟವರು‘ (ಕಾವ್ಯಾನಂದ)
ಡಾ. ಫ.ಗು. ಹಳಕಟ್ಟಿಯವರು 1880 ಜುಲೈ 2 ರಂದು ಗುರುಬಸಪ್ಪ ಮತ್ತು ದಾನಮ್ಮನವರ ಮಗನಾಗಿ ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪನವರು ಸರಕಾರಿ ಸೇವೆಯಲ್ಲಿದ್ದರು. ಅವರು ಹಲವಾರು ಕೃತಿಗಳನ್ನು ಬರೆದ ಶ್ರೇಷ್ಠ ಸಾಹಿತಿಗಳು. ತಮ್ಮ ಮಗ ವಿದ್ಯಾವಂತನಾಗಬೇಕೆಂದು ಬಯಸಿದರು. ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ ಅವರಿಗೆ ಲಿಂಗಾಯತ ಸಾಹಿತ್ಯ-ಸಂಸ್ಕೃತಿ-ಕವಿಗಳ ಬಗ್ಗೆ ಯಾವುದೇ ರೀತಿಯ ಜ್ಞಾನ ವಿರಲಿಲ್ಲ. ಅವರಿಗೆ ಕಲಿಸುವ ಶಿಕ್ಷಕರು ಕೂಡ ಲಿಂಗಾಯತರಿಗೆ ಒಳ್ಳೆಯ ಸಾಹಿತ್ಯವಿಲ್ಲ. ಅವರಲ್ಲಿ ಒಳ್ಳೆಯ ಕವಿಗಳೂ ಇಲ್ಲವೆಂದು ವರ್ಗಗಳಲ್ಲಿ ಅವಮಾನಿಸಿ ಮಾತನಾಡುತ್ತಿದ್ದರು. ಆ ಮಾತುಗಳು ಫ.ಗು. ಹಳಕಟ್ಟಿಯವರ ಮನಸ್ಸನ್ನು ನೋಯಿಸಿದವು. ಅವರು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ (1901-02) ಧಾರವಾಡದಲ್ಲಿ ಪ್ಲೇಗ್ ಬೇನೆ ಪ್ರಾರಂಭವಾಯಿತು. ಅವರು ತಮ್ಮ ಮಾವನವರಾದ ಬನಹಟ್ಟಿಯ ಚಿಕ್ಕೋಡಿ ತಮ್ಮಣ್ಣಪ್ಪನವರ ಮನೆಗೆ ಬಂದು ವಾಸವಾದರು. ಹಳಕಟ್ಟಿಯವರಿಗೆ ಶಿಕ್ಷಣ ನೀಡಿ ವಿದ್ಯಾವಂತನನ್ನಾಗಿ ರೂಪಿಸಿದ ಶಿಲ್ಪಿ ಅವರ ತಂದೆಯವರಾದರೆ, ಸಾಮಾಜಿಕ, ಸಾಹಿತ್ಯಕ ಸೇವಾ ಕೈಂಕರ್ಯದಲ್ಲಿ ತೊಡಗಿಸಿ ವಚನ ಪಿತಾಮಹರನ್ನಾಗಿ ರೂಪಿಸಿದ ಶಿಲ್ಪಿ ಚಿಕ್ಕೋಡಿ ತಮ್ಮಣ್ಣಪ್ಪನವರು. ಅವರು ಫ.ಗು. ಹಳಕಟ್ಟಿಯವರಿಗೆ ಸಮರ್ಥ ಸೂಕ್ತ ಮಾರ್ಗದರ್ಶನ ನೀಡಿದರು. ನಿನ್ನ ಬದುಕು ಸಮಾಜಸೇವೆಗೆ ಮೀಸಲಾಗಿರಲಿ. ಸರಕಾರಿ ನೌಕರಿ ಸೇರಿ ನಿನ್ನ ಮನೆತನವನ್ನು ಮಾತ್ರ ಉದ್ಧಾರ ಮಾಡಬೇಡ’ ಎಂದು ತಿಳಿಸಿ ಸಮಾಜ ಸೇವಾಕಾರ್ಯಕ್ಕೆ ಇವರನ್ನು ಅಣಿಗೊಳಿಸಿದರು.
ಮುಂಬೈ ಸೇಂಟ್ ಝೇವಿಯರ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದ ನಂತರ ಹಳಕಟ್ಟಿಯವರು ಎಲ್‌ಎಲ್.ಬಿ. ಪರೀಕ್ಷೆಯನ್ನು ಪಾಸು ಮಾಡಿದರು. ಮುಂದೆ ವಿಜಾಪುರದಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು. ದೃಷ್ಟಿಸಿದರು, ಅಲ್ಪಾವಧಿಯಲ್ಲಿಯೇ ಶ್ರೇಷ್ಠ ವಕೀಲರೆಂದು ಖ್ಯಾತಿ ಪಡೆದರು. ಬಡವರ ನ್ಯಾಯ ನಿರ್ಣಯಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮುಗಿಸಿ ಬಿಡುತ್ತಿದ್ದರು. ಹೀಗಾಗಿ ಸರ್ಕಾರ ಇವರನ್ನು ಸರಕಾರಿ ವಕೀಲರೆಂದು ನೇಮಿಸಿತ್ತು. ವಕೀಲಿ ವೃತ್ತಿಯಲ್ಲಿದ್ದಾಗಲೇ ವಚನ ಸಾಹಿತ್ಯ ಸಂಗ್ರಹಕ್ಕಾಗಿ ಶೋಧನೆ ನಡೆಸಿದರು. ಹತ್ತಾರು ಹಳ್ಳಿ ತಿರುಗಿ ಹಸ್ತಪ್ರತಿಗಳನ್ನು ಕಲೆ ಹಾಕಿದರು. ಅವುಗಳನ್ನು ಓದಿ ವರ್ಗೀಕರಿಸಿ, ಪ್ರತಿ ಮಾಡುವ ಕಾಯ ಕವನ್ನು ಪ್ರಾರಂಭಿಸಿದರು. ವಕೀಲಿ ವೃತ್ತಿ-ವಚನ ಸಾಹಿತ್ಯ ಸಂಗ್ರಹ ಕಾರ್ಯಗಳನ್ನು ಮಾಡುತ್ತ ಸಾರ್ವಜನಿಕರ ಗಮನ ಸೆಳೆದರು. ಅವರೇ ಒಂದು ಕಡೆ ಹೇಳುತ್ತಾರೆ “ನನ್ನ ಬದುಕಿನ ಮೂರು ಮುಖ್ಯ ಕಾರ್ಯಗಳೆಂದರೆ ಶಿಕ್ಷಣ, ಸಾಹಿತ್ಯ, ಹಣಕಾಸು’. 1905ರಲ್ಲಿ ವಿಜಾಪುರ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ವಿಜಾಪುರ ಜಿಲ್ಲೆ ಬರಗಾಲ ಜಿಲ್ಲೆಯೆಂದೇ ಪ್ರಸಿದ್ಧವಾದುದು. ಸರ್ ಎಂ. ವಿಶ್ವೇಶ್ವರಯ್ಯನವರ ಸಲಹೆ ಮೇರೆಗೆ ಭೂತನಾಳ ಕೆರೆಯ ನಿರ್ಮಾಣ ಕಾರ್ಯ ಪೂರೈಸಿ, ಅಂದಿನ ವಿಜಾಪುರದ ನೀರಿನ ಸಮಸ್ಯೆಯನ್ನು ಬಗೆಹರಿಸಿದರು. ವಿಜಾಪುರ ಜಿಲ್ಲಾ ಲೋಕಲ್ ಬೋರ್ಡಿನ ಅಧ್ಯಕ್ಷರಾಗಿ, ಬರಗಾಲ ನಿವಾರಣಾ ಸಂಸ್ಥೆಯ ಕಾರ್ಯದರ್ಶಿಯಾಗಿ, ಒಕ್ಕಲುತನ, ಸಹಕಾರಿ ಸಂಘದ ಸಂಸ್ಥಾಪಕರಾಗಿ, ನೇಕಾರರ ಸಹಕಾರಿ ಸಂಘ, ಹತ್ತಿ ಮಾರಾಟಗಾರರ ಸಂಘಗಳನ್ನು ಹುಟ್ಟು ಹಾಕಿ ಜನಪರ ಕಾರ್ಯಗಳನ್ನು ಮಾಡಿದರು.
ಬಡಮಕ್ಕಳು ವಿದ್ಯಾಭ್ಯಾಸ ಮಾಡಬೇಕು. ದೇಶದ ಸರ್ವಾಂಗೀಣ ಪ್ರಗತಿಗೆ ವಿದ್ಯೆ ಬೇಕು, ವ್ಯಕ್ತಿಯ ಆತ್ಮೋದ್ಧಾರಕ್ಕೆ ಶಿಕ್ಷಣ ಬೇಕು ಎಂದು ಮನಗಂಡಿದ್ದ ಹಳಕಟ್ಟಿಯವರು 1910ರಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯನ್ನು ಸ್ಥಾಪಿಸಿದರು. 1912ರಲ್ಲಿ ಸಿದ್ಧೇಶ್ವರ ಬ್ಯಾಂಕ್ ಸ್ಥಾಪಿಸಿ ಅದರ ಅಧ್ಯಕ್ಷರಾದರು. 1914 ರಲ್ಲಿ ಸಿದ್ಧೇಶ್ವರ ಹೈಸ್ಕೂಲನ್ನು ಪ್ರಾರಂಭಿಸಿದರು. ವಿಜಾಪುರ ನಗರಸಭೆಯ ಶಾಲಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇಂದು ಬಿ.ಎಲ್.ಡಿ.ಇ. ಸಂಸ್ಥೆ ಲೋಕೋತ್ತದ ಸಾಧನೆಗೈದಿದೆ. ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಆ ಭಾಗದ ಶೈಕ್ಷಣಿಕ ಸಂಜೀವಿನಿಯಾಗಿದೆ. ವಿಜಾಪುರ ಎಂದರೆ ಹಳಕಟ್ಟಿಯವರು, ಹಳಹಟ್ಟಿಯವರೆಂದರೆ ವಿಜಾಪುರ ಎನ್ನುವಷ್ಟರ ಮಟ್ಟಿಗೆ ಅದರ ಅಭಿವೃದ್ಧಿಗೆ ಕಾರಣರಾದರು. ಮುಂಬೈ ವಿಧಾನಸಭೆಯ ಸದಸ್ಯರಾಗಿ, ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ಹಳಕಟ್ಟಿಯವರ ಕಾರ್ಯವ್ಯಾಪ್ತಿ ಆಗಾಧವಾದುದು. ಇಷ್ಟೆಲ್ಲ ಕೆಲಸ ಕಾರ್ಯಗಳ ನಡುವೆ ವಚನ ಸಾಹಿತ್ಯದ ಸಂಶೋಧನೆ ನಿರಂತರವಾಗಿ ಸಾಗಿತ್ತು.
1922ರಲ್ಲಿ ಧರ್ಮಗುರು ಬಸವಣ್ಣನವರ ವಚನಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿ “ಇಂಡಿಯನ್ ಆ್ಯಂಟಿಕ್ವರಿ” ಪತ್ರಿಕೆಯಲ್ಲಿ ಪ್ರಕಟಿಸಿದರು. ವಚನಗಳನ್ನು ಮೊಟ್ಟಮೊದಲು ಬಾರಿಗೆ ಇಂಗ್ಲೀಷ್ ಭಾಷೆಗೆ ತರ್ಜುಮೆಗೊಳಿಸಿದ ಶ್ರೇಯಸ್ಸು ಡಾ.ಹಳಕಟ್ಟಿಯವರಿಗೆ. 1923 ವಚನ ಶಾಸ್ತ್ರಸಾರ ಗ್ರಂಥವನ್ನು ಬೆಳಗಾವಿಯ ಮಹಾವೀರ ಮುದ್ರಣಾಲಯದಲ್ಲಿ ಪ್ರಕಟಿಸಿದರು. ಗ್ರಂಥ ಪ್ರಕಟವಾದ ನಂತರ ನಾಡಿನ ವಿದ್ವತ್ ಲೋಕ ಆಶ್ಚರ್ಯ ಪಟ್ಟಿತು. ಕವಿಚರಿತೆಕಾರರಾದ ಆರ್. ನರಸಿಂಹಾಚಾರ್ಯರಂಥ ವಿದ್ವಾಂಸರು ಪತ್ರ ಬರೆದು ಇವರ ಕಾರ್ಯವನ್ನು ಶ್ಲಾಘಿಸಿದರು.
ಡಾ. ಹಳಕಟ್ಟಿಯವರು 1925ರಲ್ಲಿ ಹಿತಚಿಂತಕ ಮುದ್ರಣಾಲಯವನ್ನು ಸ್ಥಾಪಿಸಿದರು. ತನ್ಮೂಲಕ 1926 ‘ಶಿವಾನುಭವ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. 35 ವರ್ಷಗಳ ಕಾಲ ವಚನ, ಕಾವ್ಯ, ಶಾಸನ-ಸಂಸ್ಕೃತಿಗಳ ಕುರಿತು ಸಂಶೋಧನಾತ್ಮಕ ಲೇಖನಗಳನ್ನು ಅದರಲ್ಲಿ ಪ್ರಕಟಿಸಿದರು. ಮರೆತು ಹೋದ 800 ವರ್ಷಗಳ ಗತ ಇತಿಹಾಸವನ್ನು ಪುನಃ ಸೃಷ್ಟಿಸಿದರು. ಸಾವಿರಾರು ಶರಣರ ಅತ್ಯಮೂಲ್ಯ ವಚನಗಳು ಪ್ರಪ್ರಥಮ ಬಾರಿಗೆ ಮುದ್ರಣಗೊಂಡವು. ಹರಿಹರನ ರಗಳೆಗಳು, ಶರಣರ ವಚನ ಸಂಕಲನಗಳು, ಶೂನ್ಯಸಂಪಾದನೆ, ಅನುಭಾವ ಸಾಹಿತ್ಯ, ರಾಜ ಮನೆತನಗಳ ಇತಿಹಾಸ ಮುಂತಾದ ಹಲವು ಬಗೆಯ ಸುಮಾರು 88 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದರು.
ಡಾ. ಹಳಕಟ್ಟಿಯವರ ಸಾಹಿತ್ಯಕ ಮತ್ತು ಸಾಮಾಜಿಕ ಕಾರ್ಯವನ್ನು ಗಮನಿಸಿದ ಸರಕಾರ ‘ರಾವ್ ಬಹದ್ದೂರ’ ಮತ್ತು ‘ರಾವಸಾಹೇಬ’ ಪದವಿಗಳನ್ನು ನೀಡಿ ಗೌರವಿಸಿತು. ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ದಯಪಾಲಿಸಿತು. ನಾಡಿನ ಸಮಸ್ತ ಜನ ಸಮುದಾಯವಂತೂ ‘ಕರ್ನಾಟಕದ ಮ್ಯಾಕ್ಸ್ಮುಲ್ಲರ್’ ‘ಆಧುನಿಕ ಶರಣ’ ‘ವಚನ ಪಿತಾಮಹ’ ಎಂಬ ಬಿರುದುಗಳಿಂದ ಗೌರವ ಸಲ್ಲಿಸಿತು.
1933ರಲ್ಲಿ ಧಾರವಾಡದಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭೆಯ 11ನೆಯ ಅಧಿವೇಶನಕ್ಕೆ ಅವರು ಅಧ್ಯಕ್ಷರಾಗಿ ಸಮಾಜದ ಮುನ್ನಡೆಗೆ ಮಾರ್ಗದರ್ಶನ ನೀಡಿದರು. ವೀರಶ್ಯವ ತರುಣ ಸಮ್ಮೇಳನದ ಅಧ್ಯಕ್ಷರಾಗಿ, ಅಖಿಲ ಭಾರತ ಕನ್ನಡ ಸಮ್ಮೇಳನ ಅಧ್ಯಕ್ಷರಾಗಿ ನಾಡು ನುಡಿಯ ಏಳ್ಗೆಗಾಗಿ ಅಹರ್ನಿಶಿ ಪರಿಶ್ರಮ ಪಟ್ಟರು. ಕರ್ನಾಟಕದ ಪ್ರಗತಿಗಾಗಿಯೇ ‘ನವ ಕರ್ನಾಟಕ’ ಎಂಬ ವಾರ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು.
ಕನ್ನಡ ನಾಡು-ನುಡಿ ವಚನ ಸಾಹಿತ್ಯದ ಸಂಶೋಧನೆಯ ಕುರಿತು ಇಡೀ ತಮ್ಮ ಬದುಕನ್ನೇ ಮುಡಿಪಿಟ್ಟ ಡಾ. ಹಳಕಟ್ಟಿ ನಮ್ಮ ನಾಡು ಕಂಡ ಮಹಾನ್ ಚೇತನ. ಅವರು 1964 ಜೂನ್ 29 ರಂದು ಲಿಂಗೈಕ್ಯರಾದರು.
ಪ್ರೊ. ಶಿ.ಶಿ. ಬಸವನಾಳ (1893-1950)
ಕನ್ನಡ ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಅಚ್ಚಳಿಯದ ಹೆಸರು ಶಿ.ಶಿ. ಬಸವನಾಳರದು. ಶಿವಯೋಗಪ್ಪ ಮತ್ತು ಸಿದ್ದಮ್ಮ ದಂಪತಿಗಳ ಪುತ್ರರಾಗಿ 7-11-1893 ರಂದು ಶಿವಲಿಂಗಪ್ಪನವರು ಜನಿಸಿದರು. ಬಳ್ಳಾರಿಯಲ್ಲಿ ಹೈಸ್ಕೂಲು, ಪುಣೆಯಲ್ಲಿ ಬಿ.ಎ. ಪದವಿ ಸಂಪಾದಿಸಿದರು. 1916 ರಲ್ಲಿ ಎಂ.ಎ. ಪರೀಕ್ಷೆ ತೇರ್ಗಡೆಯಾದರು. ಲಿಂಗಾಯತ ಸಮಾಜದಲ್ಲಿ ಪ್ರಪ್ರಥಮರಾಗಿ ಎಂ.ಎ ಪದವಿ ಪಡೆದ ಕೀರ್ತಿ ಇವರದು. ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಅವರು 1922ರಲ್ಲಿ ಧಾರವಾಡ ಆರ್.ಎಲ್.ಎಸ್. ಹೈಸ್ಕೂಲಿನ ಪ್ರಾಚಾರ್ಯರಾದರು. 1933ರಲ್ಲಿ ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜು ಸ್ಥಾಪನೆಯಲ್ಲಿ ಇವರು ಪ್ರಮುಖ ಪಾತ್ರವಹಿಸಿದರು.
1938 ರಲ್ಲಿ ಹುಬ್ಬಳ್ಳಿಯಲ್ಲಿ ಜರುಗಿದ ಅ.ಭಾ. ವೀರಶೈವ ಮಹಾಸಭೆಯ 13ನೆಯ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು.
ರಬಕವಿಯಲ್ಲಿ ಜರುಗಿದ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆ ಅಪಾರವಾದುದು. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಮೂಲಕ ಅನೇಕ ಮೌಲಿಕ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದರು.
ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ, ಸಮಾಜಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿದ್ದ ಬಸವನಾಳರು 22-12-1951 ರಂದು ಲಿಂಗೈಕ್ಯರಾದರು.
ಬ್ಯಾರಿಸ್ಟರ್ ಎಂ. ಎಸ್. ಸರ್ದಾರ್ (1898-1963 )
ಬೆಳಗಾವಿ ಜಿಲ್ಲೆಯ ಅಂಬಡಗಟ್ಟಿ ಗ್ರಾಮದಲ್ಲಿ 1898 ಜನವರಿ 31 ರಂದು ಸುಸಂಸ್ಕೃತ ಜಂಗಮ ಮನೆತನದ ಶಿವಶಂಕರಯ್ಯ ಮತ್ತು ಪಾರ್ವತಿದೇವಿ ದಂಪತಿಗಳ ಸುಪುತ್ರರಾಗಿ ಎಂ.ಎಸ್. ಸರ್ದಾರ್ ಅವರು ಜನಿಸಿದರು. ಮಡಿವಾಳೇಶ್ವರ ಅವರ ಹೆಸರು .ಇವರ ಪೂರ್ವಜರು ಕಿತ್ತೂರು ಸಂಸ್ಥಾನದಲ್ಲಿ ಸರ್ದಾರ್‌ರಾಗಿದ್ದರು. ಬೆಳಗಾವಿಯಲ್ಲಿ ಶಿಕ್ಷಣ ಪೂರೈಸಿದ ಸರ್ದಾರ್‌ರು ಪುಣೆಯಲ್ಲಿ ಉಚ್ಚ ವ್ಯಾಸಂಗ ಮಾಡಿದರು. 1920 ರಲ್ಲಿ ಇಂಗ್ಲೆಂಡಿಗೆ ಹೋಗಿ ಬ್ಯಾರ್ ಆರ್ಟ್ಸ್ ಲಾ ಪದವಿ ಸಂಪಾದಿಸಿದರು. ನಂತರ ಅಕ್ಕಲ ಕೋಟಿ, ಮುಧೋಳ ಜತ್ತ ಸಂಸ್ಥಾಗಳ ನ್ಯಾಯಾಧಿಶರಾಗಿ ಕಾರ್ಯನಿರ್ವಹಿಸಿದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ . ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಿದರು. ಎರಡನೆ ಮಹಾಯುದ್ಧ ಜರುಗಿದ ಸಂದರ್ಭದಲ್ಲಿ ‘ಲಿಂಗಾಯ ಬಟಾಲಿಯನ್” ಸ್ಥಾಪಿಸಿ ಯುದ್ಧರಂಗದಲ್ಲಿ ಹೋರಾಡಿದರು. ಇದನ್ನು ಗಮನಿಸಿದ ಆಂಗ್ಲ ಸರ್ಕಾರ ಇವರನ್ನು ಗೌರವಿಸಿತ .ಸೊಲ್ಲಾಪುರದಲ್ಲಿ ಕರ್ನಾಟಕ ಏಕೀಕರಣ ಸಂಘ ಸ್ಥಾಪಿಸಿ ಸೊಲ್ಲಾಪುರವು ಕರ್ನಾಟಕದಲ್ಲಿಯೇ ಇರಬೇಕೆಂದು ಹೋರಾಡಿದರು.
1940 ರಲ್ಲಿ ಕುಂಭಕೋಣಂದಲ್ಲಿ ಜರುಗಿದ 14ನೇ ಅ.ಭಾ. ವೀರಶೈವ ಮಹಾಸಭಾ ಅಧಿವೇಶನದ ಅಧ್ಯಕ್ಷರಾಗಿ ಸಮಾಜ ಸಂಘಟನೆಯ ಮಾರ್ಗ ತೋರಿದರು. ಲಿಂಗಾಯತರು ಹಿಂದೂಗಳಲ್ಲ, ಲಿಂಗಾಯತರು ಸ್ವತಂತ್ರ ಧರ್ಮಿಯರು ಎಂಬುದನ್ನು ತಮ್ಮ ಬರಹ ಭಾಷಣಗಳ ಮೂಲಕ ಜಾಗೃತಿ ಮೂಡಿಸಿದರು. 15 ಮೇ 1963 ರಂದು ಎಂ.ಎಸ್. ಸರ್ದಾರ್ ಅವರು ಲಿಂಗೈಕ್ಯರಾದರು.
ಸಿ.ಸಿ. ಹುಲಕೋಟಿ
ಇಂದಿನ ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ಜನಿಸಿದ ಚೆನ್ನಪ್ಪ ಚೆನ್ನವೀರಪ್ಪ ಹುಲಕೋಟಿ ನಮ್ಮ ಸಮಾಜದ ಗಣ್ಯ ನ್ಯಾಯಾಧೀಶರಲ್ಲಿ ಒಬ್ಬರು. ಬಿ.ಎ., ಎಲ್ ಎಲ್.ಬಿ. ಪದವಿಯನ್ನು ಮುಂಬೈಯಿಂದ ಪಡೆದ ಅವರು 1919 ರಲ್ಲಿ ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. 1928 ರಲ್ಲಿ ಜಿಲ್ಲಾ ಸೆಶನ್ಸ್ ಜಡ್ಜ್ ಆಗಿ ಆಯ್ಕೆಯಾದ ಅವರು ಜಿಲ್ಲಾ ನ್ಯಾಯಾಧೀಶರಾಗಿ ಬೆಳಗಾವಿ, ಸೊಲ್ಲಾಪುರ, ಸಾತಾರ, ಅಹ್ಹಮದನಗರ, ಮುಂತಾದ ನಗರಗಳಲ್ಲಿ ಸೇವೆ ಸಲ್ಲಿಸಿದರು.
ತುಮಕೂರು ನಗರದಲ್ಲಿ 1945 ರಲ್ಲಿ ಜರುಗಿದ ಅ.ಭಾ. ವೀರಶೈವ ಮಹಾಸಭಾದ 15 ನೆಯ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು. 1951ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಪ್ರಥಮ ಚುನಾಯಿತ ಕುಲಪತಿಗಳಾಗಿ ಆಯ್ಕೆಯಾದರು. 1955 ಜೂನ್ 30 ರಂದು ಲಿಂಗೈಕ್ಯರಾದರು.
ಪೂಜ್ಯ ಶ್ರೀ ಸಂಗನಬಸವ ಸ್ವಾಮಿಗಳು (1900–1972)
ಬರಗಾಲ ಭೂಮಿಯೆಂದೇ ಖ್ಯಾತವಾದ ವಿಜಾಪುರ ಜಿಲ್ಲೆಯಲ್ಲಿ ಭಕ್ತಿ-ಜ್ಞಾನದ ಬೆಳೆಯನ್ನು ಬೆಳೆದವರು ಬಂಥನಾಳ ಸಂಗನಬಸವ ಶಿವಯೋಗಿಗಳು. 27 ಜುಲೈ 1900 ರಂದು ಬಸವನ ಬಾಗೇವಾಡಿ ತಾಲೂಕಿನ ಮಸೂತಿ ಗ್ರಾಮದ ಪರ್ವತಯ್ಯ ಮತ್ತು ಗೌರಾಂಬೆಯವರ ವರಪುತ್ರರಾಗಿ ಸಂಗನ ಬಸವ ಶಿವಯೋಗಿಗಳು ಜನ್ಮತಾಳಿದರು. 1916 ರಲ್ಲಿ ಅಂದರೆ 16ನೇ ವಯಸ್ಸಿನಲ್ಲಿಯೇ ಬಂಥನಾಳ ಶ್ರೀಮಠಕ್ಕೆ ಅಧಿಪತಿಗಳಾಗಿ ಆಯ್ಕೆಯಾದರು.
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಮತ್ತು ರಾಷ್ಟ್ರ ಧರ್ಮದ್ರಷ್ಟಾರ ಹರ್ಡೇಕರ ಮಂಜಪ್ಪನವರ ಗಾಢಪ್ರಭಾವ ಸಂಗನ ಬಸವ ಶಿವಯೋಗಿಗಳ ಮೇಲೆ ಆಯಿತು. ಅವರೀರ್ವರ ಮಾರ್ಗ ದರ್ಶನದಂತೆ ತಮ್ಮ ಬದುಕಿನ ರೀತಿಯನ್ನೇ ಬದಲಾಯಿಸಿಕೊಂಡ ಪೂಜ್ಯರು ಶೈಕ್ಷಣಿಕ ಜಾಗೃತಿಗಾಗಿ ಹಗಲಿರುಳು ಶ್ರಮಿಸಿದರು.
1955ರಲ್ಲಿ ಬಸವ ಕಲ್ಯಾಣದಲ್ಲಿ ಜರುಗಿದ ಅ.ಭಾ. ವೀರಶೈವ ಮಹಾಸಭೆಯ 16ನೇ ಅಧಿವೇಶನದ ಅಧ್ಯಕ್ಷರಾಗಿ ಶ್ರೀಗಳು ನೀಡಿದ ಸಂದೇಶ ಅಮೋಘವಾದುದು.
1954ರಲ್ಲಿ ವಿಜಾಪುರದಲ್ಲಿ 770 ಅಮರಗಣಂಗಳ ಪೂಜೆಯನ್ನು ಯಶಸ್ವಿಯಾಗಿ ನಡೆಸಿದರು. ಬಿ.ಎಲ್.ಡಿ.ಇ. ಸಂಸ್ಥೆ ಉತ್ತರೋತ್ತರ ಬೆಳೆಯುವಂತೆ ಆಶೀರ್ವದಿಸಿದರು.
ಪೂಜ್ಯರು 7-7-1972 ರಂದು ಲಿಂಗೈಕ್ಯರಾದರು.
ಡಾ. ಡಿ.ಸಿ. ಪಾವಟೆ (1899-1979)
ಡಾ. ದಾದಾಸಾಹೇಬ ಚಿ೦ತಾಮಣಿ ಪಾವಟೆ ನಮ್ಮ ನಾಡು ಕಂಡ ಅಪರೂಪದ ವಿದ್ವನ್ಮಣಿಗಳು. ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆ ಅಪಾರ. ಲಿಂಗಾಯತ ಸಮಾಜದ ಏಳ್ಗೆಗಾಗಿಯೂ ಅಹರ್ನಿಶಿ ಶ್ರಮಿಸಿದ ಡಿ.ಸಿ. ಪಾವಟೆಯವರು ಶಿವಯೋಗಮಂದಿರದಲ್ಲಿ 1960ರಲ್ಲಿ ಜರುಗಿದ 17ನೇ ಅ.ಭಾ. ವೀರಶೈವ ಮಹಾಸಭಾ ಅಧಿವೇಶನದ ಘನ ಅಧ್ಯಕ್ಷತೆಯನ್ನು ವಹಿಸಿದ್ದರು.
ಡಿ.ಸಿ. ಪಾವಟೆಯವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರ ಗ್ರಾಮದ ಚಿಂತಾಮಣಿ ಮತ್ತು ಶಾಂತವೀರಮ್ಮ ದಂಪತಿಗಳ ಪುತ್ರರಾಗಿ 2 ಆಗಸ್ಟ್ 1899 ರಂದು ಜನಿಸಿದರು.
ಕೊಲ್ಲಾಪುರ ರಾಜಾರಾಂ ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿ ಧಾರವಾಡ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿಯನ್ನು ಮುಂಬೈ ವಿಶ್ವವಿದ್ಯಾಲಯಕ್ಕೆ ಪ್ರಥಮರಾಗಿ ಪಡೆದುಕೊಂಡರು- ಗಣಿತದಲ್ಲಿ ಅವರಿಗೆ ಅಪಾರ ಆಸಕ್ತಿ. 1924ರಲ್ಲಿ ಇಂಗ್ಲೆಂಡಿಗೆ ಹೋಗಿ ಗಣಿತ ವಿಷಯದಲ್ಲಿ ವಿಶೇಷ ಅಧ್ಯಯನ ಮಾಡಿ ರ್ಯಂಗ್ಲರ್ ಪದವಿ ಸಂಪಾದಿಸಿದರು. ಇವರ ವಿದ್ವತ್ತನ್ನು ಗಮನಿಸಿದ ಮದನ್ ಮೋಹನ್ ಮಾಳವೀಯ ಅವರು ಬನಾರಸ ಹಿಂದೂ ವಿಶ್ವ ವಿದ್ಯಲಯದಲ್ಲಿ ಇವರನ್ನು ಪ್ರಾಧ್ಯಾಪಕರೆಂದು ಆಯ್ಕೆ ಮಾಡಿದರು 1930ರಲ್ಲಿ ಮುಂಬೈ ಸರ್ಕಾರಿ ಇಲಾಖೆಯಲ್ಲಿ ಸೇವೆಗೆ ಸೇರಿದರು. 1947ರಲ್ಲಿ ಮುಂಬೈ ವಿದ್ಯಾ ಇಲಾಖೆಯ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದರು. 1954ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮೂರನೆಯ ಕುಲಪತಿಗಳಾಗಿ ಡಾ. ಪಾವಟೆ ಅವರು ಬಂದರು. ವಿಶ್ವವಿದ್ಯಾಲಯವನ್ನು “ನ ಭೂತೋ ನ ಭವಿಷ್ಯತಿ” ಎಂಬಂತೆ ಬೆಳೆಸಿದರು. ಇಡೀ ದೇಶದಲ್ಲಿ ಒಂದು ಮಾದರಿ ವಿಶ್ವವಿದ್ಯಾಲಯವಾಗುವಂತೆ ನೋಡಿಕೊಂಡರು. 13 ವರ್ಷಗಳ ಕಾಲ ಅವರು ಕುಲಪತಿ ಗಳಾಗಿದ್ದರು. 1967ರಲ್ಲಿ ಡಾ. ಪಾವಟೆಯವರು ಪಂಜಾಬಿನ ರಾಜ್ಯಪಾಲರಾದರು.
ವೀರಶೈವ ಮಹಾಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ‘ವೀರಶೈವ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಲಿಂಗಾಯತ ಧರ್ಮದ ನಿಜವಾದ ಇತಿಹಾಸವು ಪ್ರಕಟವಾಗಬೇಕೆಂಬ ಆಶಯ ಅವರದಾಗಿತ್ತು.
1966ರಲ್ಲಿ ಭಾರತ ಸರ್ಕಾರವು ‘ಪದ್ಮಭೂಷಣ’ ಪದವಿ ನೀಡಿ ಗೌರವಿಸಿತು. ಶಿಕ್ಷಣ ತಜ್ಞ ಪಾವಟೆಯವರು 17-1-979 ರಂದು ಲಿಂಗೈಕ್ಯರಾದರು.
‘ಕರ್ನಾಟಕ ರತ್ನ‘ ಸಿದ್ಧಗಂಗೆಯ ಪೂಜ್ಯ ಡಾ. ಶಿವಕುಮಾರ (1908-2019)
ತುಮಕೂರು ಸಿದ್ಧಗಂಗಾಮಠದ ಪೀಠಾಧಿಪತಿಗಳಾಗಿರುವ ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿಗಳು ನಮ್ಮ ದಿನಮಾನದ ‘ನಡೆದಾಡುವ ದೇವರು’ ಎಂದು ಖ್ಯಾತರಾದವರು.
ಬೆಂಗಳೂರು ಜಿಲ್ಲೆಯ ಮಾಗಡಿ ಹತ್ತಿರದ ವೀರಾಪುರ ಎಂಬ ಚಿಕ್ಕ ಗ್ರಾಮದ ಹೊನ್ನಯ್ಯ ಮತ್ತು ಗಂಗಮ್ಮ ಎಂಬ ಶರಣ ದಂಪತಿಗಳ ಪುಣ್ಯೋದರದಲ್ಲಿ 1-4-1908 ರಂದು ಪೂಜ್ಯರು ಜನಿಸಿದರು.
ಬೆಂಗಳೂರಿನ ಗುಬ್ಬಿ ತೋಟದಪ್ಪ ಭತ್ರದಲ್ಲಿದ್ದು ವಿದ್ಯಾಭ್ಯಾಸ ಮಾಡಿದರು. 1930ರಲ್ಲಿ ಪದವಿ ಪಡೆದರು. ಅದೇ ವರ್ಷ ಗೆಳೆಯರಾಗಿದ್ದ ಸಿದ್ಧಗಂಗಾಮಠದ ಕಿರಿಯ ಶ್ರೀಗಳು ಲಿಂಗೈಕ್ಯರಾದರು. ಪೂಜ್ಯ ಉದ್ಧಾನ ಶಿವಯೋಗಿಗಳು ಇವರ ಗುಣವ್ಯಕ್ತಿತ್ವ ಲಕ್ಷಣ ಗಮನಿಸಿ ಸಿದ್ಧಗಂಗಾ ಮಠದ ಕರ್ಣಧಾರತ್ವವನ್ನು ವಹಿಸಿಕೊಟ್ಟರು.
ಸಿದ್ಧಗಂಗಾ ಮಠವನ್ನು ಆದರ್ಶ ಗುರುಕುಲವನ್ನಾಗಿ ರೂಪಿಸಿದ ಪೂಜ್ಯರು ಆನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಪ್ರತಿನಿತ್ಯ 10 ಸಾವಿರಕ್ಕೂ ಮಿಕ್ಕಿ ಬಡಮಕ್ಕಳಿಗೆ ಅನ್ನ-ಜ್ಞಾನ ದಾಸೋಹಗೈದಿರುವ ಪೂಜ್ಯರ ಸೇವೆ ಈ ಶತಮಾನದಲ್ಲಿಯೇ ಅಪ್ರತಿಮವಾದದು.
ಪೂಜ್ಯರ ಅಧ್ಯಾತ್ಮ ಸಾಧನೆ, ಅಪಾರ ವಿದ್ವತ್ತು ಗಮನಿಸಿ ಲಿಂಗಾಯತ ಸಮಾಜವು 1969 ರಲ್ಲಿ ಮುಂಬೈ ಮಹಾನಗರದಲ್ಲಿ 24ನೇ ಮಹಾ ಅಧಿವೇಶನ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭೆ 18ನೇ ಅಧಿವೇಶನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. 2008-09 ರಲ್ಲಿ ಪೂಜ್ಯರ ಜನ್ಮಶತಮಾನೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕರ್ನಾಟಕ ಘನ ಸರಕಾರವು ಪೂಜ್ಯರಿಗೆ “ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಈ ನಿರಾಭಾರಿ ಸಂತರ ಬದುಕಿನ ಕಾಲಘಟ್ಟದಲ್ಲಿ ನಾವು ಬದುಕಿದ್ದುದು ನಮ್ಮ ಅಹೋಭಾಗ್ಯವೇ ಸರಿ. ಪೂಜ್ಯರು ದಿನಾಂಕ 21-01-2019 ರಂದು ತಮ್ಮ 110ನೆಯ ವಯಸ್ಸಿನಲ್ಲಿ ಲಿಂಗೈಕ್ಯರಾದರು.
ಜೆ.ಬಿ. ಮಲ್ಲಾರಾಧ್ಯರು (1900-1982)
ಮೈಸೂರು ಚಾಮುಂಡಿ ಬೆಟ್ಟದ ಪರಿಸರದಲ್ಲಿರುವ ಜಂತಗಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಬಸವರಾಧ್ಯ ಮತ್ತು ಸಿದ್ಧಲಿಂಗಮ್ಮಣ್ಣಿ ಯವರ ಪುತ್ರರಾಗಿ 12 ಡಿಸೆಂಬರ್ 1900 ರಂದು ಜೆ.ಬಿ. ಮಲ್ಲಾರಾಧ್ಯರು ಜನಿಸಿದರು.
1923ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಸಂಪಾದಿಸಿದರು. ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ಉಪಾಧ್ಯಾಯರಾಗಿ ಸೇವೆ ಪ್ರಾರಂಭಿಸಿದ ಮಲ್ಲಾರಾಧ್ಯರಿಗೆ ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡುವ ಭಾಗ್ಯ ದೊರೆಯಿತು. 1951ರಲ್ಲಿ ಐ.ಎ.ಎಸ್. ಗ್ರೇಡ್‌ಗೆ ಸೇರಿದ ಅವರು ಸೆನ್‌ಸಸ್ ಕಮಿಶನರ್‌ರಾಗಿ, ವಿದ್ಯಾ ಇಲಾಖೆಯ ನಿರ್ದೇಶಕರಾಗಿ, ಶಿಕ್ಷಣ ಸುಧಾರಣಾ ಸಮಿತಿ ಕಾರ್ಯದರ್ಶಿಯಾಗಿ, ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಅನೇಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದರು.
1973ರಲ್ಲಿ ಬೆಂಗಳೂರು ನಗರದಲ್ಲಿ ಜರುಗಿದ 19ನೇ ಅ.ಭಾ. ವೀರಶೈವ ಮಹಾಸಭಾ ಆಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿ 9 ವರ್ಷಕಾಲ ಕಾರ್ಯ ನಿರ್ವಹಿಸಿದರು. 22-6-1982 ರಂದು ಲಿಂಗೈಕ್ಯರಾದರು.
ಈಶ್ವರ ಮಲ್ಲಪ್ಪ ಮಗದುಂ (1921-1992)
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ 25-2-1921 ರಂದು ಜನಿಸಿದ ಈಶ್ವರ ಮಗದುಂ ಅವರು 1945ರಲ್ಲಿ ಬಿ.ಇ. ಪದವಿ ಸಂಪಾದಿಸಿದರು. ಮುಂಬೈ ಮತ್ತು ಕರ್ನಾಟಕ ಸರ್ಕಾರದ ಅನೇಕ ಹುದ್ದೆಗಳಲ್ಲಿ ಇವರು ಸೇವೆ ಸಲ್ಲಿಸಿದರು. 1962 ರಿಂದ 1972 ರವರೆಗೆ ಕರ್ನಾಟಕ ಸರ್ಕಾರದ ಮುಖ್ಯ ಇಂಜನಿಯರಾಗಿ ಇವರು ಸಲ್ಲಿಸಿದ ಸೇವೆ ಅಪಾರ. ಕೃಷ್ಣಾ ಮೇಲ್ದಂಡೆ ಯೋಜನೆ, ಘಟಪ್ರಭಾ, ಮಲಪ್ರಭಾ, ಹೇಮಾವತಿ, ಹಾರಂಗಿ, ಕಬಿನಿ ಮೊದಲಾದ ದೊಡ್ಡ ನೀರಾವರಿ ಯೋಜನೆಗಳು ಒಂದು ಮೂರ್ತ ಸ್ವರೂಪ ಪಡೆದದ್ದು ಮಗದಂ ಅವರ ಕಾಲಕ್ಕೆ ಎಂಬುದು ಅಭಿಮಾನಪಡುವ ಸಂಗತಿ.
ಬೆಂಗಳೂರಿನ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿ ‘ಆಧುನಿಕ ಭಗೀರಥ’ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮಹಾಸಭೆಯೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಅವರು ಹಾವನೂರ್ ಆಯೋಗದ ವಿರುದ್ಧ ಅನೇಕ ಹೋರಾಟಗಳನ್ನು ಮಾಡಿದರು. ಲಿಂಗಾಯತ ಸಮಾಜದ ಐಕ್ಯತೆಗಾಗಿ ನಾಡಿನಾದ್ಯಂತ ಪ್ರವಾಸ ಮಾಡಿದರು. 1983ರಲ್ಲಿ ಮೈಸೂರು ನಗರದಲ್ಲಿ ಜರುಗಿದ 20ನೇ ಅ.ಭಾ. ವೀರಶೈವ ಮಹಾಸಭಾ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು.
ಡಾ. ಶರಣ ಬಸವಪ್ಪಾ ಅಪ್ಪಾ
ಕಲಬುರ್ಗಿ ಶರಣಬಸವೇಶ್ವರ ಸಂಸ್ಥಾನಮಠದ ಪೀಠಾಧಿಪತಿಗಳಾಗಿರುವ ಪೂಜ್ಯ ಡಾ| ಶರಣಬಸವಪ್ಪಾ ಅಪ್ಪಾ ಅವರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಜಾಗೃತಿಗಾಗಿ ಶ್ರಮಿಸಿದ್ದಾರೆ.
1992ರಲ್ಲಿ ಬೆಳಗಾವಿಯಲ್ಲಿ ಜರುಗಿದ ಅ.ಭಾ. ವೀರಶೈವ ಮಹಾಸಭೆಯ 21ನೇ ಅಧಿವೇಶನದ ಅಧ್ಯಕ್ಷರಾಗಿ ಅವರು ಆಯ್ಕೆಯಾದರು. ಅನುಭವ ಮಂಟಪ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸಾಹಿತ್ಯಕ ಕೃತಿಗಳನ್ನು ಪಟಿಸುವ ಪೂಜ್ಯರು ಸ್ವತಃ ವಚನಕಾರರು ಸಾಹಿತಿಗಳೂ ಆಗಿದ್ದಾರೆ.
ಶ್ರೀ ಭೀಮಣ್ಣ ಖಂಡ್ರೆ
ಅನಿವಾರ್ಯ ಕಾರಣಗಳಿಂದ ಪೂಜ್ಯ ಶ್ರೀ ಡಾ| ಶರಣ ಬಸವಪ್ಪಾ ಅಪ್ಪಾ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕಾರಣ ಅಧಿವೇಶನ ನಡೆಯಲಾರದೆ ಬೀದರದ ಭೀಮಣ್ಣ ಖಂಡ್ರೆಯವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
08-01-1927 ರಲ್ಲಿ ಶ್ರೀಮಂತ ರೈತಮನೆತನದಲ್ಲಿ ಜನಿಸಿದ ಇವರು, ಬಸವ ಭಕ್ತಿಯ, ಸುವಿಚಾರ ಸಂಸ್ಕೃತಿಯ ಸಂಸ್ಕಾರ ವಿಶೇಷವನ್ನು ಮೈಗೂಡಿಸಿಕೊಂಡು ಬೆಳೆದರು. ತಂದೆ ಶಿವಲಿಂಗಪ್ಪ ತಾಯಿ ಪಾರ್ವತಿಬಾಯಿಯವರು ನೀಡಿದ ಸಂಸ್ಕಾರದ ಫಲವಾಗಿ ಬಾಲ್ಯದಲ್ಲಿಯೇ ಜವಾಬ್ದಾರಿಯುತ ಆಚಾರ- ವಿಚಾರಗಳನ್ನು ಮೈಗೂಡಿಸಿಕೊಂಡರು.
ಭೀಮಣ್ನ ಖಂಡ್ರೆ ವಿದ್ಯಾರ್ಥಿ ದೆಸೆಯಲ್ಲಿಯೇ ಗಾಂಧೀಜಿಯ ಸ್ವಾತಂತ್ರ್ಯದ ಕರೆಗೆ ಓಗೊಟ್ಟು ಓದಿಗೆ ತಿಲಾಂಜಲಿ ನೀಡಿ 1946 ರಲ್ಲಿ ಸತ್ಯಾಗ್ರಹ ಚಳವಳಿಗೆ ಧುಮುಕಿ, ಸಕ್ರಿಯವಾದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸ್ವಾತಂತ್ರ್ಯ ಹೋರಾಟ ಮತ್ತು ಇತರ ಸಾಮಾಜಿಕ ಚಟುವಟಿಕೆಗಳ ಮಧ್ಯದಲ್ಲಿಯೇ ಇವರು ತಮ್ಮ ಉನ್ನತ ಅಧ್ಯಯನವನ್ನು ಮುಂದುವರೆಸಿ 1949 ರಲ್ಲಿ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿಯನ್ನು ಸಂಪಾದಿಸಿಕೊಂಡು, ಭಾಲ್ಕಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು.
1953 ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಬೀದರ ನಗರ ಪಾಲಿಕೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ವಿಜಯಶಾಲಿ ಯಾದರು. ಹೀಗಾಗಿ ಬೀದರ ನಗರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷ ಎಂಬ ಗೌರವಕ್ಕೆ ಭಾಜನರಾದರು. 1962 ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಅಪೂರ್ವವಾದ ಯಶಸ್ಸನ್ನು ಸಾಧಿಸಿದರು.
1967, 1978, 1983 ರ ರಾಜ್ಯ ವಿಧಾನ ಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸಿ ಯಶಸ್ಸನ್ನು ಗಳಿಸಿದರು. 1992 ರಲ್ಲಿ ಸಾರಿಗೆ ಸಚಿವರಾದರು.
1996 ರಿಂದ ಮಹಾಸಭೆ ಅಧ್ಯಕ್ಷರಾಗಿರುವ ಅವರು ವೀರಶೈವ ಲಿಂಗಾಯತ ಭವನ ಕಟ್ಟಿಸಿ ಕಾಯಕಲ್ಪ ಒದಗಿಸಿದ್ದಾರೆ. ಗಣನೀಯ ಸಂಖ್ಯೆಯಲ್ಲಿ ಲಿಂಗಾಯತರನ್ನು ಮಹಾಸಭೆಯ ಸದಸ್ಯರನ್ನಾಗಿ ಮಾಡಿದ ಶ್ರೇಯಸ್ಸು ಅವರದು. ಲಿಂಗಾಯತರನ್ನು ಪಂಗಡ-ಒಳಪಂಗಡಗಳಲ್ಲಿ ಒಡೆದು ಸಮಾಜಕ್ಕೆ ಅಪಾರ ಹಾನಿಯನ್ನು ಮಾಡಿದ ಹಾವನೂರ ವರದಿಯನ್ನು ವಿಧಾನ ಸಭೆಯಲ್ಲಿಯೇ ಹರಿದು ಪ್ರತಿಭಟಿಸಿದ ಹೋರಾಟಗಾರರು ಶ್ರೀ ಭಿಮಣ್ಣ ಖಂಡ್ರೆಯವರು.
ಇವರು 2012 ರಲ್ಲಿ ಸುತ್ತೂರಿನಲ್ಲಿ ಜರುಗಿದ 22ನೆಯ ಅ.ಭಾ. ವೀರಶೈವ ಮಹಾಸಭಾ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಡಾ| ಶಾಮನೂರು ಶಿವಶಂಕರಪ್ಪ
ದಾವಣಗೆರೆಯ ಶ್ರೀ ಡಾ| ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷಾವಧಿಯಲ್ಲಿ, ದಾವಣಗೆರೆಯಲ್ಲಿ ಇದೇ 2023 ರ ಡಿಸೆಂಬರ್ 23 ರಿಂದ 24 ರ ವರೆಗೆ ಅ.ಭಾ. ವೀರಶೈವ ಮಹಾಸಭೆಯ 22ರ ಅಧಿವೇಶನವು ಜರುಗುತ್ತಿದೆ. ಬಾಪೂಜಿ ಶಿಕ್ಷಣ ಸಂಸ್ಥೆಯ ಮೂಲಕ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿರುವ ಶಾಮನೂರು ಅವರು ನಮ್ಮ ನಾಡು ಕಂಡ ಪ್ರಜ್ಞಾವಂತ ರಾಜಕಾರಣಿಗಳಲ್ಲಿ ಮುಂದಾಳುಗಳಲ್ಲಿ ಒಬ್ಬರು. ವೀರಶೈವ ಧರ್ಮ, ಸಮಾಜ ಸಂಸ್ಕೃತಿಗಳ ಉನ್ನತೀಕರಣಕ್ಕಾಗಿ ಆಹೋರಾತ್ರಿ ಶ್ರಮಿಸುತ್ತಿರುವ ಅವರು ಮಹಾಸಭೆಯ ಅಧ್ಯಕ್ಷರಾಗಿರುವ ಅವಧಿ ಅತ್ಯಂತ ಸ್ಮರಣೀಯವಾದುದು.